ಸೇನೆಯಲ್ಲಿ ಕೆಲಸ ಕೊಡಿಸುತ್ತೇನೆಂದು ವಂಚಿಸಿದ ಮಾಜಿ ಅಧಿಕಾರಿಯ ಬಂಧನ

Update: 2017-08-15 10:04 GMT

ಮುಂಡಕ್ಕಯಂ: ಸೇನೆಯಲ್ಲಿ ಕೆಲಸ ಕೊಡಿಸುವ ಭರವಸೆ ನೀಡಿ ಹಲವಾರು ಮಂದಿಯಿಂದ ಹಣ ಪಡೆದು ವಂಚಿಸಿದ ಮಾಜಿ ಸೈನಿಕನನ್ನು ಬಂಧಿಸಲಾಗಿದೆ. ಪತ್ತನಂತಿಟ್ಟ ಕೊಡುಮಣ್ ನಿವಾಸಿ ಅನೀಷ್ ನಂಬಿಯಾರ್(34) ಎಂಬ ಮಾಜಿ ಸೈನಿಕನನ್ನು ಮುಂಡಕ್ಕಯಂ ಎಸ್‍ಸೈ ಅನೂಪ್ ಜೋಸ್‍ರ ನೇತೃತ್ವದ ಪೊಲೀಸರ ತಂಡ ಬಂಧಿಸಿದೆ. ಪಾಂಡಿಮಕ್ಕಲ್ ಸಜೀಕುಮಾರ್‍ರ ದೂರಿನ ಆಧಾರದಲ್ಲಿ ನಡೆಸಲಾದ ತನಿಖೆಯಲ್ಲಿ ಕೇರಳದ ವಿವಿಧ ಕಡೆಯಲ್ಲಿ ಇವರು ಭಾರೀ ವಂಚನೆ ನಡೆಸಿರುವುದು ಬೆಳಕಿಗೆ ಬಂದಿದೆ.ಸೇನೆಯಲ್ಲಿ ಸಜೀಕುಮಾರ್ ಮತ್ತು ಅವರ ನರ್ಸ್ ಆದ ಅವರ ಪತ್ನಿಗೂ ಕೆಲಸ ತೆಗೆಸಿಕೊಡುತ್ತೇನೆ ಎಂದು ಹೇಳಿ ಹಣ ಪಡೆದು ಅನಿಷ್ ನಂಬಿಯಾರ್ ವಂಚಿಸಿದ್ದಾನೆ.

ಹಿಂದೆ ಸೈನ್ಯದಲ್ಲಿ ಕೆಲಸಮಾಡುತ್ತಿದ್ದ ಅನೀಷ್ 2011ರಲ್ಲಿ ಸೈನ್ಯದಿಂದ ತಪ್ಪಿಸಿಕೊಂಡುಬಂದಿದ್ದ. ಅಲ್ಲಿಂದ ಊರಿಗೆಬಂದ ಈತ ಬಸ್ ಚಾಲಕನನ್ನು ಪರಿಚಯಿಸಿಕೊಂಡು  ಆತನ ಸಹಾಯದಿಂದ ಮುಂಡಕ್ಕಯಂ ಪುಲಿಕುನ್ನ್ ಎಂಬಲ್ಲಿನ ಯುವತಿಯೊಬ್ಬಳನ್ನು ಮದುವೆಯಾಗಿದ್ದಾನೆ. ಮದುವೆಯ ವೇಳೆ ಸೈನ್ಯದಲ್ಲಿ ಉನ್ನತ ಅಧಿಕಾರಿಯೆಂದು ಸುಳ್ಳು ಹೇಳಿ ಯುವತಿಯನ್ನು  ಮದುವೆಯಾಗಿದ್ದಾನೆ. ನಂತರ  ತನಗೆ ಸೇನೆಗೆ ಜನರನ್ನು ನೇಮಿಸುವ ಅಧಿಕಾರವಿದೆ ಎಂದು ಪ್ರಚಾರ ಮಾಡಿದ್ದನು. ಸಜೀಕುಮಾರ್ ಮತ್ತು ಪತ್ನಿಗೆ ಕೆಲಸದ ಭರವಸೆ ನೀಡಿ ಅವರಿಂದ ಅನೀಷ್ 90,000 ರೂಪಾಯಿ ಮುಂಗಡವಾಗಿ ಪಡೆದಿದ್ದಾನೆ.ಈತನ ವಾಗ್ದಾನ ಸುಳ್ಳು ಎಂದು ಮನವರಿಕೆಯಾದಾಗ ಪೊಲೀಸರಿಗೆ ಸಜೀಕುಮಾರ್ ದೂರು ನೀಡಿದ್ದಾರೆ.

ನಂತರ ಪೊಲೀಸರು ತನಿಖೆ ನಡೆಸಿದಾಗ ತಿರುವನಂತಪುರಂ ನಿವಾಸಿಗೆ ಒಂದು ಲಕ್ಷದ ಎಪ್ಪತ್ತೈದು ಸಾವಿರ ರೂಪಾಯಿ ವಂಚಿಸಿದ್ದು ಬಯಲಾಗಿದೆ. ಇನ್ನಷ್ಟು ಜನರಿಗೆ ಈತ ಮೋಸ ಮಾಡಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News