×
Ad

ವಕೀಲರ ಭವನ ಪೂರ್ಣಕ್ಕೆ 1 ಕೋಟಿ ರೂ.ಮಂಜೂರು: ಟಿ.ಬಿ. ಜಯಚಂದ್ರ

Update: 2017-08-15 23:12 IST

ತುಮಕೂರು,ಆ.15:ಜಿಲ್ಲಾ ವಕೀಲರ ಭವನ ಅಪೂರ್ಣ ಕಾಮಗಾರಿ ಪೂರ್ಣಗೊಳಿಸಲು ಸದ್ಯಕ್ಕೆ 1 ಕೋಟಿ ರೂ.ಗಳನ್ನು ಮಂಜೂರು ಮಾಡಲಾಗಿದೆ ಎಂದು ಕಾನೂನು ಖಾತೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿ ಟಿ.ಬಿ.ಜಯಚಂದ್ರ ತಿಳಿಸಿದ್ದಾರೆ.

ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಇಂದು ಬೆಳಿಗ್ಗೆ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,ವಕೀಲರ ಸಂಘದ ಪದಾಧಿಕಾರಿಗಳು ಹಾಗೂ ಹಿರಿಯ ವಕೀಲರ ನಿಯೋಗಕ್ಕೆ ಈ ಭರವಸೆಯನ್ನು ನೀಡಲಾಗಿದೆ ಎಂದರು.

ಈ ಹಿಂದೆ ವಕೀಲರ ಸಂಘಕ್ಕೆ ಸರಕಾರದ ಅನುದಾನ ನೀಡುತ್ತಿರಲಿಲ್ಲ.ರಾಜ್ಯದ ಕಾಂಗ್ರೆಸ್ ಸರಕಾರ ಈ ಬಗ್ಗೆ ಅಗತ್ಯ ಕ್ರಮಕೈಗೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೈಸೂರಿಗೆ 2 ಕೋಟಿ,ಬೆಂಗಳೂರಿಗೆ 2 ಕೋಟಿ ಹಾಗೂ ತುಮಕೂರಿಗೆ 1.50 ಕೋಟಿ ಅನುದಾನ ನೀಡಿದ್ದರು ಎಂದರು.

ವಕೀಲರು ಕಕ್ಷಿದಾರರ ಹಿತದೃಷ್ಟಿಯಿಂದ ಪದೇ ಪದೇ ಮುಷ್ಕರ ನಡೆಸುವುದು ಸೂಕ್ತವಲ್ಲ ಎಂದು ಸರ್ವೋಚ್ಛ ನ್ಯಾಯಾಲಯ ಆದೇಶ ನೀಡಿದೆ. ಈ ಹಿನ್ನಲೆಯಲ್ಲಿ ವಕೀಲರು ಮುಷ್ಕರ ನಡೆಸುವುದು ಸಮಂಜಸವಲ್ಲ ಎಂದ ಸಚಿವರು, ಶಿರಾ, ಚಿಕ್ಕನಾಯಕನಹಳ್ಳಿ ಮತ್ತು ಕುಣಿಗಲ್ ವಕೀಲರ ಸಂಘಗಳಿಗೆ ತಲಾ 1 ಕೋಟಿ ರೂ.ಅನುದಾನ ನೀಡಲಾಗಿದೆ. ಇದರಂತೆ ಜಿಲ್ಲಾ ವಕೀಲರ ಭವನಕ್ಕೂ ಈಗ ಇನ್ನೂ 1 ಕೋಟಿ ಹಣ ಬಿಡುಗಡೆ ಮಾಡಿದ್ದು, ಸರಕಾರದ ಹಣಕಾಸಿನ ಪರಿಸ್ಥಿತಿ ನೋಡಿಕೊಂಡು ಹಣ ನೀಡುವುದಾಗಿ ತಿಳಿಸಿದರು.

ಪಾವಗಡ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದ್ದು,ಇದನ್ನು ಪರಿಹರಿಸಲು ತುಂಗಭದ್ರಾ ಹಿನ್ನಿರನ್ನು ಮೊಳಕಾಲ್ಮೂರು, ಚಳ್ಳಕೆರೆ ಮತ್ತು ಪಾವಗಡಕ್ಕೆ ಹರಿಸಲು 2200 ಕೋಟಿ ಯೋಜನೆ ಸಿದ್ಧಪಡಿಸಿದ್ದು,ಇದು ಶೀಘ್ರದಲ್ಲೇ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಅಮಿತ್‍ಷಾ ಕರ್ನಾಟಕಕ್ಕೆ ಭೇಟಿ ನೀಡಿದಾಗ ಸ್ವಾಮೀಜಿಗಳಿಗೆ ಅಗೌರವ ತೋರಿದ್ದಾರೆ ಎಂಬುದನ್ನು ರಾಜ್ಯದ ಜನತೆ ಗಮನಿಸಿದ್ದು,ಮುಂದೆ ಜನರೇ ಈ ಬಗ್ಗೆ ತೀರ್ಮಾನಕೈಗೊಳ್ಳಲಿದ್ದಾರೆ ಎಂದು ಮಾರ್ಮಿಕವಾಗಿ ನುಡಿದರು.

ಸಂಸದ ಎಸ್.ಪಿ.ಮುದ್ದಹನುಮೇಗೌಡ, ಶಾಸಕ ಎಸ್.ರಫೀಕ್ ಅಹಮದ್, ಜಿಲ್ಲಾಧಿಕಾರಿ ಕೆ.ಪಿ.ಮೋಹನರಾಜ್, ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಡಾ|| ದಿವ್ಯಾ ಗೋಪಿನಾಥ್ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News