ಹಾಲಹಳ್ಳಿ ಸ್ಲಂಗೆ ಎಚ್.ಡಿ.ಕುಮಾರಸ್ವಾಮಿ ಭೇಟಿ: ಸಂತ್ರಸ್ತರಿಗೆ ಅಕ್ಕಿ, ವಸ್ತ್ರ ವಿತರಣೆ

Update: 2017-08-15 18:24 GMT

ಮಂಡ್ಯ, ಆ.15: ಸೋಮವಾರ ಇಡೀ ರಾತ್ರಿ ಸುರಿದ ಮಳೆಯಿಂದ ತೊಂದರೆಗೊಳಗಾಗಿದ್ದ ನಗರದ ಹಾಲಹಳ್ಳಿ ಸ್ಲಂಗೆ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮಂಗಳವಾರ ಸಂಜೆ ಭೇಟಿ  ನೀಡಿ ಪರಿಶೀಲಿಸಿದರು.

ಹಲವು ಮನೆಗಳಿಗೆ ಮಳೆ ನೀರು ನುಗ್ಗಿದ್ದರಿಂದ ಮನೆಯಲ್ಲಿದ್ದ ಆಹಾರ ಪದಾರ್ಥಗಳು, ಒದಿಕೆ, ಇತರೆ ಪದಾರ್ಥಗಳನ್ನು ಕಳೆದುಕೊಂಡಿದ್ದ ನಿವಾಸಿಗಳಿಗೆ ತನ್ನ ಪಕ್ಷದ ವತಿಯಿಂದ ಆಕ್ಕಿ, ಒದಿಗೆ, ಚಾಪೆ ವಿತರಿಸಿ ಸಾಂತ್ವನ ಹೇಳಿದರು. 

ಹಲವು ವರ್ಷಗಳಿಂದ ಮೂಲಭೂತ ಸೌಕರ್ಯ ಕಲ್ಪಿಸಲು ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ. ಯಾವ ಸರಕಾರಗಳೂ ಸಮಸ್ಯೆ ಬಗೆಹರಿಸಲು ಮುಂದಾಗುತ್ತಿಲ್ಲ. ನಮ್ಮ ಬದುಕು ತೊಂದರೆಗೆ ಸಿಲುಕಿದೆ ಎಂದು ನಿವಾಸಿಗಳು ತಮ್ಮ ಅಳಲು ತೋಡಿಕೊಂಡರು.
ಈ ಸಂದರ್ಭದಲ್ಲಿ ಸ್ಲಂ ನಿವಾಸಿಗಳ ಸಮಸ್ಯೆ ಪ್ರಸ್ತಾಪಿಸಿದ ಶ್ರಮಿಕ ನಗರ ನಿವಾಸಿಗಳ ಒಕ್ಕೂಟದ ಮುಖಂಡ ಎನ್.ನಾಗೇಶ್ ಪ್ರಶ್ನೆಯಿಂದ ಕೆರಳಿದ ಕುಮಾರಸ್ವಾಮಿ, ನಾಗೇಶ್ ಜತೆ ವಾಗ್ವಾದ ನಡೆಸಿದರು.

ತಾನು ಯಾವುದೇ ಪಕ್ಷ ಅಥವಾ ರಾಜಕಾರಣಿ ಪರ ವಿರುದ್ಧ ಮಾತನಾಡುತ್ತಿಲ್ಲ ಎಂದು ಈ ಸಂದರ್ಭದಲ್ಲಿ ನಾಗೇಶ್, ಸ್ಲಂ ನಿವಾಸಿಗಳ ಸಮಸ್ಯೆಯನ್ನು ವಿವರಿಸಿದರು. ಈ ಬಗ್ಗೆ ಸರಕಾರದ ಗಮನ ಸೆಳೆಯುವುದಾಗಿ ಕುಮಾರಸ್ವಾಮಿ ಭರವಸೆ ನೀಡಿದರು.

ಸಂಸದ ಸಿ.ಎಸ್.ಪುಟ್ಟರಾಜು, ಶಾಸಕ ಡಿ.ಸಿ.ತಮ್ಮಣ್ಣ, ಮಾಜಿ ಶಾಸಕ ಎಂ.ಶ್ರೀನಿವಾಸ್, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಯುವ ಘಟಕದ ಅಧ್ಯಕ್ಷ ಬೇಲೂರು ಶಶಿಧರ್, ರಾಧಾಕೃಷ್ಣೇಗೌಡ, ಡಾ.ಕೃಷ್ಣ, ಇತರ ಮುಖಂಡರು ಹಾಜರಿದ್ದರು.

ಮದ್ದೂರು: ಮದ್ದೂರಿನಲ್ಲಿ ಪಕ್ಷದ ಕಾರ್ಯಕರ್ತರಿಂದ ಅಭಿನಂದನೆ ಸ್ವೀಕರಿಸಿದ ವೇಳೆ ಸುದ್ದಿಗಾರರ ಜತೆ ಮಾತನಾಡಿದ ಕುಮಾರಸ್ವಾಮಿ, ಬಿಜೆಪಿ ಮಿಷನ್ 150 ಯೋಜನೆಗೆ ಮುಂದಿನ ತಿಂಗಳು ಉತ್ತರ ನೀಡಲಾಗುವುದು ಎಂದರು. 

ಶಾಸಕ ಡಿ.ಸಿ.ತಮ್ಮಣ್ಣ, ಜಿಪಂ ಸದಸ್ಯ ಮರಿಹೆಗಡೆ, ಜೆಡಿಎಸ್ ಜಿಲ್ಲಾ ಯುವ ಪ್ರಧಾನ ಕಾರ್ಯದರ್ಶಿ ಬ್ಯಾಡರಹಳ್ಳಿ ಶಿವಕುಮಾರ್, ತೊಪ್ಪನಹಳ್ಳಿ ಪ್ರಕಾಶ್, ಗುಂಡಮಹೇಶ್ ಇತರರು ಇದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News