ಚಿಕ್ಕಮಗಳೂರು ಜಿಲ್ಲೆಯ ಎಲ್ಲಾ ಅಸೆಂಬ್ಲಿ ಕ್ಷೇತ್ರಗಳಲ್ಲೂ ಜೆಡಿಎಸ್ ಅನ್ನು ಗೆಲ್ಲಿಸಬೇಕು: ಬಿ.ಬಿ.ನಿಂಗಯ್ಯ

Update: 2017-08-16 13:38 GMT

ಚಿಕ್ಕಮಗಳೂರು, ಆ.16:ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಐದೂ ಕ್ಷೇತ್ರಗಳಲ್ಲಿ ಜಾತ್ಯಾತೀತ ಜನತಾದಳವನ್ನು ಗೆಲ್ಲಿಸುವ ಮೂಲಕ ಜಿಲ್ಲೆಯನ್ನು ಮತ್ತೊಮ್ಮೆ ಜೆಡಿಎಸ್‍ನ ಭದ್ರಕೋಟೆಯನ್ನಾಗಿ ಕಾರ್ಯಕರ್ತರು ಮಾಡಬೇಕು ಎಂದು ಮೂಡಿಗೆರೆ ಶಾಸಕ ಬಿ.ಬಿ.ನಿಂಗಯ್ಯ ಕರೆ ನೀಡಿದರು.

 ಅವರು ಬುಧವಾರ ನಗರದ ಜೆಡಿಎಸ್ ಕಛೇರಿಯಲ್ಲಿ ನಡೆದ ಪಕ್ಷದ ಜಿಲ್ಲಾ ಕಾರ್ಯಕಾರಿಣಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಕಾಂಗ್ರೇಸ್ ಮತ್ತು ಬಿಜೆಪಿಯ ಭ್ರಷ್ಠಾಚಾರ ಹಾಗೂ ದುರಾಡಳಿತದಿಂದಾಗಿ ರಾಜ್ಯದ ಜನತೆ ಬೇಸತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜನತೆ ಜೆಡಿಎಸ್‍ನತ್ತ ಮುಖ ಮಾಡಿದ್ದಾರೆ,  ರಾಜ್ಯಾದ್ಯಂತ ಪಕ್ಷದ ಪರ ಅಲೆ ಎದ್ದಿದೆ ಎಂದ ಅವರು ಈ ಸಂದರ್ಭದಲ್ಲಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ತಮ್ಮಲ್ಲಿರುವ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಒಂದೇ ಮನಸ್ಸಿನಿಂದ ಪಕ್ಷಕ್ಕಾಗಿ ದುಡಿಯಬೇಕು. ಪಕ್ಷ ತಮ್ಮ ಮನೆಯಿದ್ದಂತೆ ಅದು ಉಳಿದರೆ ನಾವೆಲ್ಲರೂ ಉಳಿಯುತ್ತೇವೆ ಎಂಬುದನ್ನು ಮನಗಾಣಬೇಕು ಎಂದು ಮನವಿ ಮಾಡಿದರು.

 ಇತ್ತೀಚಿನ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದರೆ ಯಾವಾಗ ಬೇಕಾದರೂ ವಿಧಾನಸಭಾ ಚುನಾವಣೆ ನಡೆಯಬಹುದು ಎಂದ ಅವರು ಯುದ್ದ ಬಂದಾಗ ಶಸ್ತ್ರಾಭ್ಯಾಸ ಮಾಡುವ ಬದಲು ಈಗಿನಿಂದಲೇ ಸಮರೋಪಾದಿಯಲ್ಲಿ ಸಿದ್ದತೆ ನಡೆಸಬೇಕು ಎಂದು ಹೇಳಿದರು.

 ರಾಜ್ಯ ಪ್ರಧಾನ ಕಾರ್ಯದರ್ಶಿ ಹೆಚ್.ಹೆಚ್.ದೇವರಾಜ್ ಮಾತನಾಡಿ ಜಿಲ್ಲೆಯ ಯಾವುದೇ ಭಾಗದಲ್ಲಿ ಜೆಡಿಎಸ್‍ನ ಯಾವುದೇ ಕಾರ್ಯಕ್ರಮ ಅಥವಾ ಹೋರಾಟಗಳು ನಡೆಯುವಾಗ ಕಡ್ಡಾಯವಾಗಿ ಮುಖಂಡರ ಭಾವಚಿತ್ರ ಮತ್ತು  ಪಕ್ಷದ ಬಾವುಟವನ್ನು ಬಳಸಲೇಬೇಕು ಎಂದು ಒತ್ತಾಯಿಸಿದರು.

 ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್‍ಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಕ್ಷದಲ್ಲಿ ಶಿಸ್ತನ್ನು ತರುವ ನಿಟ್ಟಿನಲ್ಲಿ ಮಾಜಿ ಜಿಲ್ಲಾಧ್ಯಕ್ಷ ಎಂ.ಎಸ್.ಬಾಲಕೃಷ್ಣೇಗೌಡ ಅವರ ನೇತೃತ್ವದಲ್ಲಿ ಸದ್ಯದಲ್ಲೇ ಶಿಸ್ತು ಸಮಿತಿಯನ್ನು ರಚಿಸಲಾಗುವುದು ಎಂದ ತಿಳಿಸಿದರ.

 ಚುನಾವಣೆಗೆ ಭರದ ಸಿದ್ದತೆ ನಡೆಸಲು ಅನುಕೂಲವಾಗುವಂತೆ ಜಿಲ್ಲೆಯ ಐದೂ ವಿಧಾನಸಭಾ ಕ್ಷೇತ್ರಗಳ ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ತಕ್ಷಣ ಪ್ರಕಟಿಸುವಂತೆ ಸಭೆಯಲ್ಲಿ ಕಾರ್ಯಕರ್ತರು ಮತ್ತು ಮುಖಂಡರು ಒತ್ತಾಯಿಸಿದರು.

 ತರೀಕೆರೆ ಮಾಜಿ ಶಾಸಕ ಟಿ.ಹೆಚ್.ಶಿವಶಂಕರಪ್ಪ, ರಾಜ್ಯ ಪ್ರಧಾನ ಕಾರ್ಯದರ್ಶಿ ಹೆಚ್.ಜಿ.ವೆಂಕಟೇಶ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜ್ಯೋತಿ ಈಶ್ವರ್, ಮಾಜಿ ಜಿಲ್ಲಾಧ್ಯಕ್ಷ ಮಂಜಪ್ಪ, ಮಹಾಪ್ರಧಾನ ಕಾರ್ಯದರ್ಶಿ ಜಿ.ಎಸ್.ಚಂದ್ರಪ್ಪ, ವಕ್ತಾರ ಹೊಲದಗದ್ದೆ ಗಿರೀಶ್, ಎಂ.ಡಿ.ರಮೇಶ್, ಪದ್ಮಾತಿಮ್ಮೇಗೌಡ, ದೇವಿಪ್ರಸಾದ್, ಡಿ.ಜೆ.ಸುರೇಶ್, ಯುವ ಜನತಾದಳದ ಅಧ್ಯಕ್ಷ ವಿನಯ್, ಡಿ.ಎಲ್.ವಸಂತಕುಮಾರಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News