ಛಾಯಾಚಿತ್ರದ ಹೊರತಾಗಿ ಪತ್ರಿಕೋದ್ಯಮಕ್ಕೆ ಅಸ್ತಿತ್ವವಿಲ್ಲ : ವಿಘ್ನೇಶ್ ಭೂತನಕಾಡು

Update: 2017-08-16 13:59 GMT

ಮಡಿಕೇರಿ ಆ.16 : ಇಂದು ಛಾಯಾಚಿತ್ರದ ಹೊರತಾಗಿ ಪತ್ರಿಕೋದ್ಯಮಕ್ಕೆ ಅಸ್ಥಿತ್ವವೇ ಇಲ್ಲ. ಈ ಕಾರಣದಿಂದಾಗಿ ಪತ್ರಿಕೋದ್ಯಮದಲ್ಲಿ ವರದಿಗಾರಿಕೆ ಹೇಗೆ ಮುಖ್ಯವೋ ಅದೇ ರೀತಿಯಲ್ಲಿ ಛಾಯಾಚಿತ್ರವೂ ಮುಖ್ಯ ಎಂದು ಕೊಡಗು ಪ್ರೆಸ್‍ಕ್ಲಬ್‍ನ ಸಹ ಕಾರ್ಯದರ್ಶಿ ವಿಘ್ನೇಶ್ ಎಂ. ಭೂತನಕಾಡು ಹೇಳಿದರು.  

 ಕೊಡಗು ಪ್ರೆಸ್‍ಕ್ಲಬ್ ವತಿಯಿಂದ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ‘ಪತ್ರಿಕೋದ್ಯಮದಲ್ಲಿ ಛಾಯಾಚಿತ್ರದ ಮಹತ್ವ’ ವಿಷಯದ ಬಗ್ಗೆ ನಡೆದ ಮಾಧ್ಯಮ ಸಂವಾದದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

 ಛಾಯಾಗ್ರಹಣದಲ್ಲಿ ಹಲವಾರು ವಿಧಗಳಿದ್ದು ಅದರಲ್ಲಿ ಫೋಟೋ ಜರ್ನಲಿಸಂ ಗೆ ಹೆಚ್ಚು ಮಹತ್ವವಿದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚು ಯುವ ಜನರನ್ನು ಆಕರ್ಷಿಸುತ್ತರುವ ವೃತ್ತಿಯಲ್ಲಿ ಮಾಧ್ಯಮ ಛಾಯಾಗ್ರಹಣವೂ ಒಂದು. ಇವರನ್ನು ಫೋಟೋ ಜರ್ನಲಿಸ್ಟ್ ಎಂದು ಕರೆಯುತ್ತಾರೆ. ಅಂದರೆ ದೈನಂದಿನ ಸುದ್ದಿಗೆ ಸಂಬಂಧಿಸಿದ ಚಿತ್ರಗಳನ್ನು ಸೆರೆ ಹಿಡಿದು ಪತ್ರಿಕೆಗೆ ಕಳುಹಿಸುವುದು ಆತನ ಕೆಲಸವಾಗಿರುತ್ತದೆ. ಸುದ್ದಿಯ ಮಹತ್ವ ಹಾಗೂ ತೀವ್ರತೆಯ ಅರಿವೂ ಇರಬೇಕಾದದ್ದು ಅಗತ್ಯ. ಆ ಸುದ್ದಿ ಅಥವಾ ಲೇಖನದ ಆಶಯವನ್ನು ಯಾವ ರೀತಿ ಚಿತ್ರಗಳು ಹೆಚ್ಚು ಅರ್ಥಪೂರ್ಣವಾಗಿ ಧ್ವನಿಸುತ್ತದೆ ಎಂಬ ಅಂದಾಜು ಛಾಯಾಗ್ರಾಹಕನಿಗೆ ಇರಬೇಕು ಎಂದರು.

 ಒಬ್ಬ ಪತ್ರಿಕಾ ಛಾಯಾಗ್ರಾಹಕ ಸಾಮಾನ್ಯ ಕಾರ್ಯಕ್ರಮದಿಂದ ಹಿಡಿದು ಕ್ರೀಡೆ, ಸಿನಿಮಾ, ಅಪಘಾತ ಸೇರಿದಂತೆ ಸುದ್ದಿಗೆ ಸಂಬಂಧಿಸಿದ ಎಲ್ಲಾ ಚಿತ್ರಗಳನ್ನು ಸೆರೆ ಹಿಡಿಯುತ್ತಾನೆ. ಚಿತ್ರಗಳು ಸಮಾಜಕ್ಕೆ ಪರಿಣಾಮಕಾರಿಯಾಗಿರಬೇಕು. ನಿಖರವಾದ ಮಾಹಿತಿಯುಕ್ತ ಮತ್ತು ಸಮಯಕ್ಕೆ ನಿರ್ಧಿಷ್ಟ ಕ್ಷಣದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ತಿಳಿಸಲು ಸಮರ್ಥವಾಗಿರಬೇಕು ಎಂದು ಹೇಳಿದರು.

 ಫೋಟೋ ಜರ್ನಲಿಸ್ಟ್ ತನ್ನ ಕ್ಯಾಮೆರಾದಿಂದ ಸೆರೆ ಹಿಡಿಯುವುದು ಚಿತ್ರಗಳ ಮೂಲಕ ಸತ್ಯವನ್ನು ತಿಳಿಸುವುದು ಅವನ ಮುಖ್ಯ ಗುರಿಯಾಗಿದೆ. ಇಂಟರ್‍ನೆಟ್, ಸ್ಮಾರ್ಟ್ ಫೋನ್‍ಗಳು ಮತ್ತು ಡಿಜಿಟಲ್ ಛಾಯಾಗ್ರಹಣದ ಆಗಮನದಿಂದಾಗಿ ಫೋಟೋ ಜರ್ನಲಿಸಂ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದೆ ಎಂದರು.

 ಕಾರ್ಯಕ್ರಮದಲ್ಲಿ ಕೊಡಗು ಪ್ರೆಸ್‍ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಕೊಡಗು ನ್ಯೂಸ್ ಡಾಟ್ ಕಾಂನ ಸುರೇಶ್ ಬಿಳಿಗೇರಿ, ಫೀ.ಮಾ.ಕೆ.ಎಂ. ಕಾರ್ಯಪ್ಪ ಕಾಲೇಜು ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕರಾದ ಮೋನಿಕಾ, ಇಳಯರಾಜ ಮತ್ತಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News