ದೇಶದ ಅಭಿವೃದ್ಧಿಗೆ ಏಕ ರೂಪದ ಶಿಕ್ಷಣ ಅವಶ್ಯ: ಶಾಸಕ ಸಿ.ಟಿ. ರವಿ

Update: 2017-08-16 14:10 GMT

ಚಿಕ್ಕಮಗಳೂರು, ಆ.16: ದೇಶದಲ್ಲಿ ಏಕ ರೂಪದ ಶಿಕ್ಷಣ ವ್ಯವಸ್ಥೆಯನ್ನು ಅಳವಡಿಸುವುದರಿಂದ ದೇಶ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಶಾಸಕ ಸಿ.ಟಿ.ರವಿ ಹೇಳಿದರು.

 ಅವರು ಬುಧವಾರ ರಾಮನಹಳ್ಳಿಯ ಡಯಟ್ ಆವರಣದಲ್ಲಿ ಪ್ರಾರಂಭವಾಗಿರುವ ಕೇಂದ್ರೀಯ ವಿದ್ಯಾಲಯದ ಉದ್ಘಾಟನೆಯಲ್ಲಿ ಭಾಗವಹಿಸಿ ಮಾತನಾಡಿದರು. ದೇಶ ಅಭಿವೃದ್ಧಿಯಾಗಬೇಕಾದರೆ ಶಿಕ್ಷಣ ಅತೀ ಮುಖ್ಯ. ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷಗಳು ಕಳೆದರೂ ಕೂಡ ನಾವು ಹಲವಾರು ರಂಗಗಳಲ್ಲಿ ಹಿಂದುಳಿದಿದ್ದೇವೆ ಇದಕ್ಕೆ ಕಾರಣ ಶಿಕ್ಷಣ ವ್ಯವಸ್ಥೆ. ಇಂದು ಶಿಕ್ಷಣ ವ್ಯಾಪಾರವಾಗಿದ್ದು, ಯಾವ ಶೈಕ್ಷಣಿಕ ಸಂಸ್ಥೆಯಲ್ಲಿ ಹೆಚ್ಚು ಶುಲ್ಕ ವಸೂಲಿ ಮಾಡುತ್ತಾರೆ ಎಂದು ತಿಳಿಸಿದರು.

 ಅಂತಹ ಕಡೆ ಉತ್ತಮ ಶಿಕ್ಷಣ ನೀಡುತ್ತಾರೆ ಎಂಬುದು ಜನರ ಭಾವನೆಯಾಗಿದ್ದು ಮಕ್ಕಳನ್ನು ಸೇರಿಸಲು ಮುಗಿ ಬೀಳುತ್ತಾರೆ, ಯಾವ ದೇಶದಲ್ಲಿ ಶಿಕ್ಷಣ ವ್ಯಾಪಾರವಾಗಿರುತ್ತದೊ ಆ ದೇಶದ ಪರಿ ಪೂರ್ಣ ಬೆಳವಣಿಗೆ ಸಾಧ್ಯವಿಲ್ಲ ಎಂದ ಅವರು. ರಾಷ್ಟ್ರ ಪುನರ್ ನಿರ್ಮಾಣ ಮಾಡುವ ಶೈಕ್ಷಣಿಕ ಯೋಜನೆ ನಮ್ಮಲ್ಲಿ ಇಲ್ಲವಾಗಿದೆ. ದೇಶದಲ್ಲಿ ಏಕ ರೂಪದ ತೆರಿಗೆ ಪದ್ದತಿಯನ್ನು ಜಾರಿಗೆ ತಂದಂತೆ ಏಕ ರೂಪದ ಶಿಕ್ಷಣ ವ್ಯವಸ್ಥೆಯನ್ನು ಜಾರಿಗೆ ತರುವ ಅವಶ್ಯಕತೆ ಇದೆ ಎಂದರು.

ಸಂಸದೆ  ಶೋಭಾಕರಂದ್ಲಾಜೆ ಮಾತನಾಡಿ, ಇಂದು ಶ್ರೀಮಂತರು ತಮ್ಮ ಮಕ್ಕಳನ್ನು ದೊಡ್ಡ ದೊಡ್ಡ ಕಾನ್ವೆಂಟ್‌ಗಳಿಗೆ ಹೆಚ್ಚು ಶುಲ್ಕ ನೀಡಿ ಸೇರಿಸುತ್ತಾರೆ ಅದರೆ ಬಡವರಿಗೆ ಅಷ್ಟೊಂದು ಶುಲ್ಕ ನೀಡಿ ವಿದ್ಯಾಭ್ಯಾಸ ಕೊಡಿಸಲು ಸಾಧ್ಯವಿಲ್ಲ ಆದ್ದರಿಂದ ಕೇಂದ್ರ ಸರ್ಕಾರ ಕೇಂದ್ರೀಯ ವಿದ್ಯಾಲಯಗಳ ಮೂಲಕ ಕಡಿಮೆ ಶುಲ್ಕದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿದೆ ಎಂದು ನುಡಿದರು.

 ದೇಶದಲ್ಲಿ 86 ಸಾವಿರ ಕೇಂದ್ರೀಯ ವಿದ್ಯಾಲಯಗಳಿದ್ದು 12 ಲಕ್ಷ ಮಕ್ಕಳು ಕಲಿಯುತ್ತಿದ್ದಾರೆ. ಕೇಂದ್ರೀಯ ವಿದ್ಯಾಲಯ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಹೆಸರುಗಳಿಸಿದೆ ಎಂದ ಅವರು ಜಿಲ್ಲೆಯ ಕೇಂದ್ರೀಯ ವಿದ್ಯಾಲಯದ ಕಟ್ಟಡ ನಿರ್ಮಾಣಕ್ಕೆ 16 ಕೋಟಿ ಮಂಜೂರಾಗಿದ್ದು ಕಟ್ಟಡ ನಿರ್ಮಾಣವನ್ನು ಮಲೆನಾಡಿಗೆ ಹೊಂದಿಕೊಳ್ಳುವ ರೀತಿಯಲ್ಲಿ ನಿರ್ಮಿಸಲು ನಕ್ಷೆ ತಯಾರಿಸುವಂತೆ ತಿಳಿಸಿದರು.

 ಶಾಸಕ ಬಿ.ಬಿ ನಿಂಗಯ್ಯ, ಜಿಪಂ. ಅಧ್ಯಕ್ಷೆ ಬಿ.ಎಸ್. ಚೈತ್ರಶ್ರೀ, ನಗರ ಸಭೆ ಅಧ್ಯಕ್ಷೆ ಕವಿತಾ ಶೇಕರ್, ಜಿಲ್ಲಾಧಿಕಾರಿ ಜಿ.ಸತ್ಯವತಿ, ಎಸ್ಪಿ ಕೆ. ಅಣ್ಣಾಮಲೈ ಮತ್ತಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News