ಗುಂಡ್ಲುಪೇಟೆಯ ಅಂತರರಾಷ್ಟ್ರೀಯ ವನ್ಯಜೀವಿ ಛಾಯಾಗ್ರಾಹಕ ಆರ್.ಕೆ ಮಧುಗೆ ಪ್ರಶಸ್ತಿ

Update: 2017-08-16 14:31 GMT
ಆರ್.ಕೆ ಮಧು

ಗುಂಡ್ಲುಪೇಟೆ,ಆ.16: ದೆಹಲಿಯ ಜೆ ಸಿ ಎಮ್ ಛಾಯಾಗ್ರಹಣ ಸಂಸ್ಥೆಯ ಆಶ್ರಯದಲ್ಲಿ ನಡೆದ ಅಂತರರಾಷ್ಟ್ರೀಯ ವನ್ಯಜೀವಿ ಛಾಯಾಗ್ರಹಣ ಸ್ಪಧೆಯ ಸರಣಿಯಲ್ಲಿ ಪಟ್ಟಣದ ವನ್ಯಜೀವಿ ಛಾಯಾಗ್ರಾಹಕ ಆರ್.ಕೆ.ಮಧು ಎರಡು ಪ್ರಶಸ್ತಿ ಪಡೆದಿದ್ದಾರೆ. ಮುಂದಿನ ಎರಡು ತಿಂಗಳಲ್ಲಿ ಇನ್ನೂ ಎರಡು ಸುತ್ತುಗಳಲ್ಲಿ ಸ್ಪರ್ಧೆಗಳೂ ನಡೆಯಲಿದ್ದು ಅಕ್ಟೋಬರ್‌ನಲ್ಲಿ ದೆಹಲಿಯಲ್ಲಿ ಪ್ರಶಸ್ತಿ ವಿತರಣೆ ನಡೆಯಲಿದೆ. 

ಭಾರತವಲ್ಲದೇ ಅಮೆರಿಕಾ, ರಷ್ಯಾ, ಹಂಗರಿ, ಬೆಲ್ಜಿಯಂ, ಫ್ರಾನ್ಸ್, ಇಂಗ್ಲೆಂಡ್ ಮುಂತಾದ 21 ದೇಶದ 1000ಕ್ಕೂ ಹೆಚ್ಚು ಸ್ವರ್ಧಿಗಳ 6000 ಛಾಯಾಚಿತ್ರಗಳಲ್ಲಿ ಮಧು ಸೆರೆಹಿಡಿದ ವನ್ಯಜೀವಿ ಛಾಯಾಚಿತ್ರಗಳಿಗೆ ಬಹುಮಾನಗಳು ಬಂದಿವೆ. ಡಿಜಿಟಲ್ ಪ್ರೊಜೆಕ್ಷನ್ ವಿಭಾಗದಲ್ಲಿ ಇವರು ಸೆರೆಹಿಡಿದ ನೀಲಕಂಠ ಪಕ್ಷಯು ಅತ್ಯುತ್ತಮ ಪಕ್ಷಿ ಛಾಯಾಚಿತ್ರ ಪ್ರಶಸ್ತಿ ಹಾಗೂ ಪ್ರಿಂಟ್ ವಿಭಾಗದಲ್ಲಿ ಬಂಡೀಪುರದಲ್ಲಿ ಸೆರೆಹಿಡಿದ ಜಿಂಕೆಯ ಮಿಲನ ಛಾಯಾಚಿತ್ರ ಅತ್ಯುತ್ತಮ ಸಸ್ತನಿ ಪ್ರಶಸ್ತಿ ಪಡೆದಿದೆ. ಇದು ಇವರಿಗೆ ದೊರೆತ 23ನೇ ಅಂತರರಾಷ್ಟ್ರೀಯ ವನ್ಯಜೀವಿ ಛಾಯಾಚಿತ್ರ ಪ್ರಶಸ್ತಿಯಾಗಿದೆ. ಅಲ್ಲದೇ 19ಬಾರಿ ರಾಷ್ಟ್ರೀಯ ವನ್ಯಜೀವಿ ಛಾಯಾಗ್ರಾಹಕ ಪ್ರಶಸ್ತಿ ಪಡೆದಿದ್ದಾರೆ. ಇವರು ಬರೆದ 110 ವನ್ಯಜೀವಿ ಲೇಖನಗಳು ನಾಡಿನ ಹೆಸರಾಂತ ಪತ್ರಿಕೆಗಳಲ್ಲಿ ಪ್ರಕಟಗೊಂಡಿದೆ.

ಶಾಲಾಕಾಲೇಜುಗಳಲ್ಲಿ ಪರಿಸರ ಹಾಗೂ ವನ್ಯಜೀವಿಗಳ ಬಗ್ಗೆ ಉಪನ್ಯಾಸ ಮಾಡಿ ಮಕ್ಕಳಲ್ಲಿ ಪರಿಸರದ ಅರಿವು ಬೆಳೆಸುತ್ತಿದ್ದಾರೆ. ಹಾಗೆಯೇ ಬಿಡುವಿನ ವೇಳೆಯಲ್ಲಿ ಗಿಡ ಬೆಳೆಸುವ ಮೂಲಕ ಇದುವರೆಗೆ ಸುಮಾರು 500 ಗಿಡಗಳನ್ನು ಶಾಲಾ ಕಾಲೇಜುಗಳಲ್ಲಿ ಬೆಳೆಸಿದ್ದಾರೆ. ಕಳೆದ 23ವರ್ಷಗಳಿಂದ ವನ್ಯಜೀವಿ ಛಾಯಾಗ್ರಹಣ ಮಾಡುತ್ತಿರುವ ಇವರು ಪ್ರಸ್ತುತ ನೀಲಗಿರಿ ಜೀವ ವೈವಿಧ್ಯತಾಣದ ಸಂಶೋಧನಾ ತಂಡದ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News