ತುಮಕೂರು; ಕಾಮಗಾರಿಗಳ ಗುತ್ತಿಗೆಯನ್ನು ಅರ್ಹರಿಗೇ ನೀಡಿ : ಡಿ.ಸಿ.ಮೋಹನ್‍ರಾಜ್

Update: 2017-08-16 14:39 GMT

ತುಮಕೂರು,ಆ.16:ಜಿಲ್ಲೆಯಲ್ಲಿ ವಿವಿಧ ಇಲಾಖೆಗಳು ಅನುಷ್ಟಾನಗೊಳಿಸುವ ವಿಶೇಷ ಘಟಕ ಯೋಜನೆ (ಎಸ್‍ಸಿಪಿ) ಹಾಗೂ ಗಿರಿಜನ ಉಪಯೋಜನೆಯ ಕಾಮಗಾರಿಗಳನ್ನು ಅರ್ಹ ಗುತ್ತಿಗೆದಾರರಿಗೆ ನೀಡಬೇಕೆಂದು ಜಿಲ್ಲಾಧಿಕಾರಿ ಕೆ.ಪಿ. ಮೋಹನ್ ರಾಜ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ತಮ್ಮ ಕಛೇರಿಯಲ್ಲಿಂದು ಎಸ್‍ಸಿಪಿ,ಟಿಎಸ್‍ಪಿ ಯೋಜನೆಯಡಿ ಜುಲೈ 2017ರ ಅಂತ್ಯಕ್ಕೆ ಸಾಧಿಸಿರುವ ಪ್ರಗತಿ ಕುರಿತು, ಜರುಗಿದ ಸಭೆಯನ್ನುದ್ದೇಶಿಸಿ ಮಾತನಾಡುತಿದ್ದ ಅವರು,ಕಾಮಗಾರಿಯನ್ನು ಅನುಷ್ಟಾನಗೊಳಿಸುವ ಲೋಕೋಪಯೋಗಿ, ನೀರಾವರಿ,ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸೇರಿದಂತೆ ಮತ್ತಿತರ ಇಲಾಖೆಗಳು ಗುತ್ತಿಗೆದಾರರಿಗೆ ಕಾಮಗಾರಿಗಳನ್ನು ನೀಡುವಾಗ ಪರಿಶಿಷ್ಟಜಾತಿ ಹಾಗೂ ಪರಿಶಿಷ್ಟ ವರ್ಗದ ಮೀಸಲಾತಿ ಅನುಸರಿಸುವ ಬಗ್ಗೆ ಸರಕಾರದ ನಿರ್ದೇಶನವನ್ನು ಪಾಲಿಸಬೇಕು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಪ್ರಸಕ್ತ ವರ್ಷದಲ್ಲಿ ವಿವಿಧ ಇಲಾಖೆಗಳಿಂದ ಎಸ್‍ಸಿಪಿ ಯೋಜನೆಯಡಿ ಶೇ.64ರಷ್ಟು ಹಾಗೂ ಟಿಎಸ್‍ಪಿ ಯೋಜನೆಯಡಿ ಶೇ. 42ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದರಲ್ಲದೆ,ಎಲ್ಲಾ ಇಲಾಖೆಗಳು ಬಾಕಿಯಿರುವ ಆರ್ಥಿಕ ಹಾಗೂ ಭೌತಿಕ ಗುರಿಯನ್ನು ನಿರ್ಧಿಷ್ಟ ಅವಧಿಯಲ್ಲಿ ತಲುಪಬೇಕು.ಪ್ರತಿ 3 ತಿಂಗಳಿಗೊಮ್ಮೆ ಜಿಲ್ಲೆಯ ಎಲ್ಲಾ ಶಾಸಕರನ್ನೊಳಗೊಂಡ ಎಸ್‍ಸಿಪಿ,ಟಿಎಸ್‍ಪಿ ಪ್ರಗತಿ ಸಾಧನೆ ಕುರಿತಂತೆ ಮೇಲ್ವಿಚಾರಣಾ ಸಮಿತಿ ಸಭೆಯನ್ನು ಏರ್ಪಡಿಸಬೇಕು.ಈವರೆಗೂ ಪ್ರಗತಿ ಸಾಧಿಸದ ಇಲಾಖೆಗಳು ಆದಷ್ಟು ಬೇಗ ಕ್ರಿಯಾ ಯೋಜನೆ ತಯಾರಿಸಿ ಗುರಿ ಸಾಧಿಸಬೇಕು ಎಂದು ನಿರ್ದೇಶನ ನೀಡಿದರು.

ಎಸ್‍ಸಿಪಿ,ಟಿಎಸ್‍ಪಿ ಯೋಜನೆಯಡಿ ಪ್ರಸಕ್ತ ವರ್ಷದಲ್ಲಿ ನೀರಾವರಿ ಇಲಾಖೆಗಳಿಗೆ ಹೆಚ್ಚಿನ ಅನುದಾನ ಬಿಡುಗಡೆಯಾಗಿದ್ದು, ಕ್ರಿಯಾಯೋಜನೆ ತಯಾರಿಸಿ ಮುಂದಿನ ಸಭೆಗೆ ಸಲ್ಲಿಸಬೇಕು.ಪಶುವೈದ್ಯ ಸೇವಾ, ಮೀನುಗಾರಿಕೆ, ರೇಷ್ಮೆ, ಸಾರಿಗೆ ಹಾಗೂ ಇತರೆ ಇಲಾಖೆಗಳಿಗೆ ಇನ್ನೂ ಅನುದಾನ ಹಂಚಿಕೆಯಾಗದಿರುವ ಬಗ್ಗೆ ಅಧಿಕಾರಿಗಳು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.

24ರಂದು ಕಾರ್ಯಾಗಾರ: ಸಭೆಯಲ್ಲಿ ಹಾಜರಿದ್ದ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಡಾ:ಜಿ.ಪಿ.ದೇವರಾಜ್ ಮಾತನಾಡಿ, ಆಗಸ್ಟ್ 24ರಂದು ಸಫಾಯಿ ಕರ್ಮಚಾರಿಗಳಿಗಾಗಿ ಒಂದು ದಿನದ ಮಾಹಿತಿ ಕಾರ್ಯಾಗಾರವನ್ನು ಹಮ್ಮಿಕೊಂಡಿದೆ.ಜಿಲ್ಲೆಯ ಅಧಿಕಾರಿಗಳು ಕಾರ್ಯಾಗಾರಕ್ಕೆ ಹಾಜರಾಗಿ ಮಾಹಿತಿ ಪಡೆದು ಸಂದೇಹವಿದ್ದಲ್ಲಿ ಪರಿಹರಿಸಿಕೊಳ್ಳ ಬೇಕೆಂದರು.

ಸಭೆಯಲ್ಲಿ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ರಾಜಕುಮಾರ್,ಜಿ.ಪಂ.,ರೇಷ್ಮೆ,ಲೋಕೋಪಯೋಗಿ,ಜಿಲ್ಲಾ ಕೈಗಾರಿಕಾ ಕೇಂದ್ರ, ವಿಶ್ವವಿದ್ಯಾನಿಲಯ, ಕೃಷಿ, ತೋಟಗಾರಿಕೆ ಮತ್ತಿತರ  ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News