ಪರಿಸರ ಅಸಮತೋಲನ ಸರಿಪಡಿಸದಿದ್ದರೆ ಜೀವ ಸಂಕಲು ನಾಶ : ಸಂತೋಷ್ ಹೆಗಡೆ

Update: 2017-08-16 16:26 GMT

ತುಮಕೂರು,ಆ.16:ವಿಜ್ಞಾನ ತಂತ್ರಜ್ಞಾನ ಎಷ್ಟೇ ಪ್ರಗತಿ ಹೊಂದಿದರೂ ಪರಿಸರ ಸ್ವಚ್ಚತೆ, ಜೊತೆಗೆ ಪರಿಸರ ಸಂರಕ್ಷಣೆ ಮಾಡಿ ಮರ ಗಿಡಗಳನ್ನು  ಬೆಳಸದೇ ಇದ್ದರೆ  ಜೀವ ಸಂಕುಲ ವಿನಾಶದ ಅಂಚಿಗೆ ತಲುಪುತ್ತದೆ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ ಹೆಗಡೆ ತಿಳಿಸಿದ್ದಾರೆ.
ಕುವೆಂಪು ನಗರದ ಉದ್ಯಾನವನದಲ್ಲಿ ಬುಧವಾರ ಸ್ಮಾರ್ಟ್ ಸಿಟಿ ಅಸೋಸಿಯೇಷನ್ ವತಿಯಿಂದ ಏರ್ಪಡಿಸಿದ್ದ ಪರಿಸರ ಸ್ವಚ್ಚತಾ ಜಾಗೃತಿ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದ ಅವರು,ಪ್ರತಿಯೊಬ್ಬರು ಪರಿಸರ ಸ್ವಚ್ಚತೆ ಮತ್ತು ಪರಿಸರ ಸಂರಕ್ಷಣೆ ಕಡೆ ಹೆಚ್ಚು ಗಮನ ಅಗತ್ಯವಿದೆ ಎಂದರು.

ಪರಿಸರ ಸ್ವಚ್ಚತೆ ಕೇವಲ ಒಬ್ಬಿಬ್ಬರ ಜವಾಬ್ದಾರಿಯಲ್ಲ. ಸಮಾಜದ ಪ್ರತಿಯೊಬ್ಬ ಪ್ರಜೆಯ ಕರ್ತವ್ಯವೂ ಆಗಿದೆ. ಇಂದು ಪರಿಸರದ ಅಸಮತೋಲನದಿಂದಾಗಿ ಸಮಾಜದ ಮೇಲೆ ಅನೇಕ ವೈತಿರಿಕ್ತ ಪರಿಣಾಮ ಉಂಟಾಗುತ್ತಿವೆ. ಆದ್ದರಿಂದ ಜನರಲ್ಲಿ ಪರಿಸರ ಜಾಗೃತಿ  ಮೂಡಿಸುವ ಕೆಲಸ ಹೆಚ್ಚಾಗಿ ನಡೆಯಬೇಕಿದೆ.ಇಂದು ತಾಂತ್ರಿಕ ಕ್ಷೇತ್ರದಲ್ಲಿ ಸಾಧನೆ ಮಾಡುವುದು ಒಂದು ಭಾಗವಾದರೆ, ನಮ್ಮ ನಡುವೆಯಿರುವ ಪರಿಸರವನ್ನು ಸಂರಕ್ಷಿಸುವುದು ಸಹ ಒಂದು ಸಾಧನೆಯೇ,ಪರಿಸರ ಅಸಮತೋಲನ ಹೀಗೆಯೇ ಮುಂದುವರೆದರೆ ಮತ್ತಷ್ಟು ಸಂಕಷ್ಟವನ್ನು ಜನರು ಎದುರಿಸಬೇಕಾಗುತ್ತದೆ.ಪ್ರಸ್ತುತ ಸಂದರ್ಭದಲ್ಲಿ ಭಾರತ ಅಭಿವೃದ್ಧಿಯಲ್ಲಿ ಅಪೂರ್ವವಾಗಿ ಬದಲಾಗುತ್ತಿದೆ. ಈ ನಿಟ್ಟಿನಲ್ಲಿ ಸ್ವಚ್ಚತೆ ಅತೀಮುಖ್ಯವಾಗಿದ್ದು, ನಮ್ಮ ಕಸ ನಮ್ಮ ಜವಾಬ್ಧಾರಿ ಎನ್ನುವ ಅರಿವು ಜನರಲ್ಲಿ ಮೂಡಬೇಕು.ಆಗ ಮಾತ್ರ ಪರಿಸರ ಸ್ವಚ್ಚತೆಗೆ ಹೆಚ್ಚಿನ ಜವಬ್ದಾರಿ ಬಂದಂತಾಗುತ್ತದೆ ಎಂದು ಸಂತೋಷ ಹೆಗಡೆ ತಿಳಿಸಿದರು. 

ಜಿಲ್ಲಾಧಿಕಾರಿ ಕೆ.ಪಿ.ಮೋಹನ್‍ರಾಜ್ ಮಾತನಾಡಿ,ತುಮಕೂರು ನಗರ ಸ್ಮಾರ್ಟ್‍ಸಿಟಿಯಾಗಿ ಬೆಳವಣಿಗೆ ಆಗುತ್ತಿದೆ.ನಗರ ಸುಂದರ ವಾಗಿ ಇರಬೇಕಾದರೆ ನಗರದ ಸ್ವಚ್ಚತೆ ಕೂಡ ಅಷ್ಟೇ ಮುಖ್ಯವಾಗಿದೆ.ಮಹಾನಗರ ಪಾಲಿಕೆ ನಗರದ ಸ್ವಚ್ಚತೆ ಕಡೆ ಗಮನ ಹರಿಸಿದರು ಜನಸಾಮಾನ್ಯರ ಸಹಭಾಗಿತ್ವ ಇಲ್ಲದೆ ಯಾವುದನ್ನೂ ಸಾಧನೆ ಮಾಡಲು ಸಾಧ್ಯವಿಲ್ಲ ಸ್ವಚ್ಚತೆಗೆ ನಗರದ ಎಲ್ಲ ಜನರೂ ಸಹಕರಿಸಬೇಕು ಎಂದು ಹೇಳಿದರು.

ಜಿಲ್ಲಾ ಮಾನವ ಹಕ್ಕು ಆಯೋಗದ ಸಿದ್ದಲಿಂಗೇಗೌಡ ಮಾತನಾಡಿ, ಇಂದು ಪರಿಸರದಲ್ಲಿ ಉಂಟಾಗಿರುವ ವ್ಯತ್ಯಾಸದಿಂದಾಗಿ ಮಳೆ, ಸಮರ್ಪಕವಾಗಿ ಆಗುತ್ತಿಲ್ಲ ಜಿಲ್ಲೆಯಲ್ಲಿ ಗಣಿಗಾರಿಕೆಯಿಂದ ಅಪಾರ ಪ್ರಮಾಣದ ಪರಿಸರ ಹಾಳಾಗಿ ಹೋಗಿದ್ದು, ಇಂದು ಕೂಡ ಮರಗಿಡಗಳ ಮಾರಣ ಹೋಮ ನಡೆಯುತ್ತಲೆ ಇದೆ. ಜನರು ಅರಿತುಕೊಂಡು ಪರಿಸರವನ್ನು ಉಳಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು. 

ಕಾರ್ಯಕ್ರಮದಲ್ಲಿ ಕ್ಲೀನಿ ಅಸೋಷಿಯೇಷನ್‍ನ ಅಧ್ಯಕ್ಷ ಜೋತಿ ಸುಧೀಂದ್ರ, ಪತ್ರಕರ್ತ ಚಿ.ನಿ.ಪುರುಷೋತ್ತಮ್,ಕ್ಲೀನ್ ಅಸೋಷಿಯೇಸನ್ ಸುನಿತಾ ರಾಮಕೃಷ್ಣ, ಡಾ.ವೀರೇಶ್,ಡಾ. ರಂಗಸ್ವಾಮಿ, ಇಂಜಿನಿಯರಿಂಗ್ ಕ್ರಿಯೇಷನ್‍ನ ಅಕ್ಷಿತ್, ಆನಂದ್, ಭರತೇಶ್ ವಶಿಷ್ಟ, ದರ್ಶನ್, ಕಾರ್ತಿಕ್, ಮಂಜು ರವಿಕುಮಾರ್ ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News