ರೈತ ಸಮಾಲೋಚನಾ ಸಭೆ

Update: 2017-08-16 16:53 GMT

ದಾವಣಗೆರೆ,ಆ.16: ಭದ್ರಾ ಅಚ್ಚುಕಟ್ಟು ಪ್ರದೇಶದ ಕೊನೆ ಭಾಗದ ರೈತರಿಗೆ ಕುಡಿಯುವ ನೀರು ಒದಗಿಸಲು ಎಷ್ಟೇ ಕೋಟಿ ಖರ್ಚಾದರೂ ಶಾಶ್ವತ ಪರಿಹಾರ ಕಲ್ಪಿಸುವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಭರವಸೆ ನೀಡಿದರು.

ತಾಲೂಕಿನ ಬಿ. ಕಲ್ಪನಹಳ್ಳಿ ಗ್ರಾಮದ ಶರಣಬಸವೇಶ್ವರ ಮಠದಲ್ಲಿ ಬುಧವಾರ ಭದ್ರಾ ಅಚ್ಚುಕಟ್ಟು ಕೊನೆ ಭಾಗದ ಐದು ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರು ತುಂಬಿಸುವ ಯೋಜನೆ ಕುರಿತ ರೈತರ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.

ಭದ್ರಾ ಅಚ್ಚುಕಟ್ಟು ಭಾಗದ ಮಾಗನಹಳ್ಳಿ, ರಾಂಪುರ, ಹಿರೇಮೇಗಳಗೇರಿ, ಕಾಡಜ್ಜಿ, ಬೇತೂರು ಗ್ರಾಮಗಳ 5 ಕೆರೆಗಳಿಗೆ ಶಾಶ್ವತ ನೀರಿನ ವ್ಯವಸ್ಥೆ ಕಲ್ಪಿಸಲು 100ರಿಂದ 150 ಕೋಟಿ ಹಣ ಖರ್ಚಾದರೂ ಸರಿಯೇ ಯೋಜನೆ ಅನುಷ್ಠಾನ ಮಾಡಿಸುವೆ. ನೀರಿಗಾಗಿ ಶಾಶ್ವತ ಯೋಜನೆ ಮಾಡಿದರೆ ಮಾತ್ರ ಗುಳೆ ತಪ್ಪಿಸಲು ಸಾಧ್ಯ. ಸತತ ಬರಗಾಲದಿಂದ ಅನೇಕರು ಗುಳೆ ಹೊರಟಿದ್ದರೂ ಆದರೆ ನಮ್ಮ ಸರ್ಕಾರ ಉಚಿತ ಅಕ್ಕಿಭಾಗ್ಯ ನೀಡುವ ಮೂಲಕ ಬರಗಾಲದ ತೀವ್ರತೆ ಹೆಚ್ಚಿನ ಮಟ್ಟದಲ್ಲಿ ತಟ್ಟುವುದನ್ನು ತಪ್ಪಿಸಿದೆ ಎಂದು ಅವರು ಹೇಳಿದರು.

22 ಕೆರೆಗಳ ಯೋಜನೆ ಕಳೆದ ನಾಲ್ಕು ವರ್ಷದ ಹಿಂದೆ ಆರಂಭಿಸಲಾಗಿತ್ತು. ಆದರೆ, ಅವೈಜ್ಞಾನಿಕ ಜಾಕ್‍ವೆಲ್ ನಿರ್ಮಾಣದಿಂದಾಗಿ ಮೊದಲ ವರ್ಷ 26 ದಿನ, ಎರಡನೇ ವರ್ಷ 15 ದಿನ, 3ನೇ ವರ್ಷ 38 ದಿನ ಮಾತ್ರ ನೀರೊದಗಿಸಿದೆ. ಹಾಗಾಗಿ, ಇನ್ಮುಂದೆ ಆಗಾಗದಂತೆ ಎಚ್ಚರ ವಹಿಸಿ ತಾಂತ್ರಿಕವಾಗಿ ಉತ್ತಮ ಯೋಜನೆ ರೂಪಿಸಬೇಕು ಎಂದು ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಿದರು.

ಗರ್ಭಗುಡಿ ಯೋಜನೆಗೆ ಈಗಾಗಲೇ ಅನುಮೋದನೆ ದೊರೆತಿದ್ದು, 60 ಕೆರೆ ಯೋಜನೆಗೆ 230 ಕೋಟಿಗಾಗಿ ಅನುಮೋದನೆ ದೊರೆತಿದೆ. ಇದಲ್ಲದೇ, ಅನೇಕ ಯೋಜನೆಗಳಿಗೆ ಕೋಟಿ ಕೋಟಿ ಅನುದಾನ ಬಿಡುಗಡೆ ಮಾಡಿಸಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ನಾನು ಸದಾ ಸಿದ್ಧನಿದ್ದೇನೆ ಎಂದ ಅವರು, 5 ಕೆರೆಗಳಿಗೆ ನೀರೊದಗಿಸುವ ಯೋಜನೆ ಕುರಿತು ನೀರಾವರಿ ಸಚಿವ ಎಂ.ಬಿ. ಪಾಟೀಲರೊಂದಿಗೆ ಮತ್ತೊಮ್ಮೆ ಮಾತನಾಡುವೆ. ನೀರಾವರಿ ಸಚಿವರು ವಿದೇಶಿ ಪ್ರವಾಸ ಮುಗಿಸಿ ಬಂದಕೂಡಲೇ ನೀವು ನನ್ನ ಜೊತೆ ಬಂದರೆ ಸಿಎಂ ಹಾಗೂ ನೀರಾವರಿ ಸಚಿವರೊಂದಿಗೆ ಸಭೆ ನಡೆಸಿ, ಈ ಕುರಿತು ಮನವಿ ಸಲ್ಲಿಸಬಹುದು ಎಂದು ಅವರು ರೈತರಿಗೆ ಸಲಹೆ ನೀಡಿದರು.

ಶೀಘ್ರವೇ ತುಂಗಭದ್ರಾದಿಂದ 13 ಟಿಎಂಸಿ ನೀರನ್ನು ಭದ್ರಾ ಜಲಾಶಯಕ್ಕೆ ಎತ್ತಿ ಹಾಕುವ ಯೋಜನೆ ಆರಂಭಿಸಲಾಗುವುದು. ನಿತ್ಯವೂ ಸಾಕಷ್ಟು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗುತ್ತಿದೆ. ಈ ಕೆರೆಗಳ ತುಂಬಿಸುವ ಯೋಜನೆಗೂ ಶೀಘ್ರವೇ ಹಣ ಮಂಜೂರು ಮಾಡಿಸುವೆ ಎಂದು ತಿಳಿಸಿದರು.

ಎಕ್ಸಿಕ್ಯೂಟಿವ್ ಎಂಜಿನಿಯರ್ ಪಾಟೀಲ್ ಮಾತನಾಡಿ, ಭದ್ರಾ ಯೋಜನೆ 1960ರಲ್ಲಿ ನಿರ್ಮಿಸಿದೆ. ಆದರೆ, ಎತ್ತರದ ಭಾಗಕ್ಕೆ ನೀರು ತಲುಪುತ್ತಿರಲಿಲ್ಲ. ಆದರೆ, ದಿನಕಳೆದಂತೆ ಎತ್ತರದ ಪ್ರದೇಶಕ್ಕೂ ನೀರು ಬಳಸಿಕೊಂಡ ಪರಿಣಾಮ ಕೊನೆ ಭಾಗದ ರೈತರಿಗೆ ನೀರು ಸಿಗುತ್ತಿಲ್ಲ. ಪ್ರಸ್ತುತ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕೈಗೊಂಡಿರುವುದು ಉತ್ತಮವಾಗಿದ್ದು, ಇದರ ಡಿಪಿಆರ್ ಮಾಡಲು 10 ಲಕ್ಷ ವೆಚ್ಚದಲ್ಲಿ ಟೆಂಡರ್ ಕರೆಯಲಾಗುತ್ತದೆ ಎಂದು ಮಾಹಿತಿ ನೀಡಿದರು.

ರೈತ ಮುಖಂಡ ರಾಘವೇಂದ್ರ ನಾಯ್ಕ ಮಾತನಾಡಿ, ಭದ್ರಾದಲ್ಲಿ ಸಂಪೂರ್ಣ ನೀರಿದ್ದರೂ ನಮಗೆ ನೀರು ಸಮರ್ಪಕವಾಗಿ ದೊರೆಯುತ್ತಿಲ್ಲ. ಇದರಿಂದ ನಾಲೆ ನಂಬಿ ನಾಟಿ ಮಾಡುವುದನ್ನೇ ಬಿಟ್ಟಿದ್ದೇವೆ. ಆದರೆ, ಇದೀಗ ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ಕೆ ಕೈಹಾಕಿರುವುದು ಖುಷಿ ತಂದಿದ್ದು, ಶೀಘ್ರ ಯೋಜನೆ ಅನುಷ್ಠಾನಗೊಳ್ಳಲಿ ಎಂದರು.

ರೈತ ಮುಖಂಡ ಕೆ.ಜಿ. ಶೇಖರಪ್ಪಗೌಡ,  ಡೂಡಾ ಅಧ್ಯಕ್ಷ ರಾಮಚಂದ್ರಪ್ಪ, ಎಚ್.ಎಸ್. ಉಜ್ಜಪ್ಪ, ಕೆ.ಟಿ. ದ್ಯಾಮಪ್ಪ, ಎಪಿಎಂಸಿ ಅಧ್ಯಕ್ಷ ಮುದೇಗೌಡ್ರ ಗಿರೀಶ್ ಮಾತನಾಡಿದರು.

ಪ್ರಗತಿಪರ ರೈತ ಎಂ. ನಾಗಪ್ಪ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯರಾದ ರೇಣುಕಮ್ಮ, ಈಶಪ್ಪ, ಬಿ. ಪ್ರಭು, ಎಸ್. ಹನುಮಂತಪ್ಪ, ಬಸಪ್ಪ, ಎಚ್.ಬಿ. ಬಸವರಾಜಪ್ಪ, ರೇವಣಸಿದ್ದಪ್ಪ, ಶಾಂತರಾಜ್, ಗೌರಿಬಾಯಿ, ಆಶಾಮುರುಳೀಧರ್, ಮುರುಳಿಕೃಷ್ಣ ಮತ್ತಿತರರಿದ್ದರು.

ಪರಶುರಾಮ್ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News