ವಿದ್ಯುತ್ ಮಗ್ಗಗಳ ಸಹಾಯ ಧನ ಹೆಚ್ಚಳಕ್ಕೆ ಚಿಂತನೆ: ಆರ್.ಗಿರೀಶ್

Update: 2017-08-16 17:22 GMT

ಬೆಂಗಳೂರು, ಆ.16: ವಿದ್ಯುತ್ ಮಗ್ಗಗಳ ಸಹಾಯ ಧನವನ್ನು 150ಎಚ್‌ಪಿವರೆಗೆ ಹೆಚ್ಚಿಸಲು ರಾಜ್ಯ ಸರಕಾರ ಚಿಂತನೆ ನಡೆಸುತ್ತಿದೆ ಎಂದು ರಾಜ್ಯ ಸರಕಾರದ ಜವಳಿ ಅಭಿವೃದ್ಧಿ ನಿಗಮದ ಆಯುಕ್ತ ಆರ್.ಗಿರೀಶ್ ತಿಳಿಸಿದ್ದಾರೆ.

 ಕೇಂದ್ರ ಜವಳಿ ಇಲಾಖೆ ನಗರದ ಕಾಸಿಯಾ ಸಭಾಂಗಣದಲ್ಲಿ ಆಯೋಜಿಸಿದ್ದ ‘ಸರಕು ಮತ್ತು ಸೇವಾ ತೆರಿಗೆ ’ ಕುರಿತು ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇದುವರೆಗೂ ವಿದ್ಯುತ್ ಮಗ್ಗಗಳಿಗೆ ಕೇವಲ 20ಎಚ್‌ಪಿವರೆಗೆ ಸಹಾಯ ಧನ ನೀಡಲಾಗುತ್ತಿದೆ. ಇದನ್ನು ಹೆಚ್ಚಳ ಮಾಡುವಂತೆ ಒತ್ತಡ ಬಂದಿದ್ದು, 150ಎಚ್‌ಪಿವರೆಗೆ ಹೆಚ್ಚಳ ಮಾಡಲು ಚಿಂನೆ ನಡೆಸಲಾಗಿದೆ ಎಂದು ತಿಳಿಸಿದರು.

 ಚೈನಾ ಮತ್ತಿತರ ದೇಶಗಳಿಂದ ರೇಷ್ಮೆ ಉತ್ಪನ್ನಗಳು ಆಮದಾಗುವುದರಿಂದ ಉಂಟಾಗುವ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಲಾಗುತ್ತಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಜವಳಿ ಕ್ಷೇತ್ರದ ಬಗ್ಗೆ ತರಬೇತಿ ನೀಡಲಾಗುವುದು. ರಾಜ್ಯದಲ್ಲಿ ಶೇ.10ರಷ್ಟು ಪಾಲು ಹೊಂದಿರುವ ಜವಳಿ ಉದ್ಯಮ 45 ದಶಲಕ್ಷ ಉದ್ಯೋಗ ಒದಗಿಸಿದೆ ಎಂದು ಅವರು ಮಾಹಿತಿ ನೀಡಿದರು.

ರಾಜ್ಯ ಜವಳಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ತಿಪ್ಪೇಶ್ ಮಾತನಾಡಿ, ವಿದ್ಯುತ್ ಸಬ್ಸಿಡಿಯನ್ನು ಶೇ.75ರಿಂದ ಶೇ.90ರಷ್ಟು ನೀಡಬೇಕು. ಲೇಪಿಯರ್ ಮತ್ತು ಏರ್‌ಜೆಟ್ ರೂಂಗೆ ದೊಡ್ಡ ಪ್ರಮಾಣದ ಬಂಡವಾಳ ಇರುವುದರಿಂದ ಕೇಂದ್ರ ಸರಕಾರ ಅನುದಾನ ನೀಡಬೇಕು ಎಂದು ಒತ್ತಾಯಿಸಿದರು.

ಜಿಎಸ್‌ಟಿ ಅನುಷ್ಠಾನಕ್ಕೂ ಮುನ್ನ ಅದರ ಸಾಧಕ-ಬಾಧಕಗಳ ಬಗ್ಗೆ ವ್ಯಾಪಕ ಚರ್ಚೆಯಾಗಬೇಕಿತ್ತು. ವ್ಯಾವಹಾರಿಕ ಮತ್ತು ವ್ಯಾವಹಾರೇತರ ತೆರಿಗೆ ಬಗ್ಗೆ ಚಿಂತನೆ ನಡೆಸಬೇಕಿತ್ತು. ಜವಳಿ ಉದ್ಯಮಕ್ಕೆ ತನ್ನದೇ ಆದ ಇತಿಹಾಸ ಮತ್ತು ಸಂಸ್ಕೃತಿ ಹೊಂದಿದ್ದು, ಇದರ ಸಮಸ್ಯೆಗಳಿಗೆ ಪೂರಕ ಪರಿಹಾರ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು.

  ಕೇಂದ್ರ ಜವಳಿ ಆಯುಕ್ತೆ ಕವಿತಾ ಗುಪ್ತಾ ಮಾತನಾಡಿ, ಅಭಿವೃದ್ಧಿಶೀಲ ರಾಷ್ಟ್ರವಾಗಿರುವ ಭಾರತ ಪ್ರಗತಿಯ ಮೆಟ್ಟಿಲು ಹತ್ತಲು ಆರ್ಥಿಕ ಸದೃಢತೆ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಜಿಎಸ್‌ಟಿ ಜಾರಿಗೆ ತಂದಿದ್ದು, ಇದನ್ನು ಜನತೆ ಹೃತ್ಪೂರ್ವಕವಾಗಿ ಬೆಂಬಲಿಸಬೇಕಾಗಿದೆ ಎಂದು ಅವರು ಹೇಳಿದರು.

ಈಗಾಗಲೇ ಜಿಎಸ್‌ಟಿ ಪದ್ಧತಿಯು 150 ದೇಶಗಳಲ್ಲಿ ಜಾರಿಯಲ್ಲಿದೆ. ಈಗ ಜಾರಿಯಲ್ಲಿರುವ ಬಹು ತೆರಿಗೆ ಪದ್ಧತಿಯನ್ನು ರದ್ದು ಪಡಿಸಿ ರಾಷ್ಟ್ರಾದ್ಯಂತ ಏಕರೂಪದ ತೆರಿಗೆ ವ್ಯವಸ್ಥೆ ಜಾರಿಗೆ ತರುವುದು ಹಾಗೂ ಇಡೀ ದೇಶದಲ್ಲಿ ಒಂದೇ ರೀತಿಯ ಅರ್ಥವ್ಯವಸ್ಥೆ ರೂಪಿಸುವುದು ಜಿಎಸ್‌ಟಿ ಅಳವಡಿಕೆಯ ಉದ್ದೇಶವಾಗಿದೆ ಎಂದು ಅವದು ಮಾಹಿತಿ ನೀಡಿದರು.

ಕಾಸಿಯಾ ಅಧ್ಯಕ್ಷ ಆರ್.ಹನುಮಂತೇಗೌಡ ಮಾತನಾಡಿ, ಜವಳಿ ವಲಯದ ನೆರವಿಗಾಗಿ ಸಹಾಯ ವಾಣಿಯೊಂದನ್ನು ಸ್ಥಾಪಿಸಬೇಕು. ಯುವ ಸಮುದಾಯ ಜವಳಿ ಉದ್ಯಮದತ್ತ ಆಸಕ್ತಿ ಮೂಡುವಂತೆ ಮಾಡಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಹೀಗಾಗಿ ವಿದ್ಯುತ್ ಮಗ್ಗಗಳ ಸಬ್ಸಿಡಿ ಪ್ರಮಾಣವನ್ನು ಹೆಚ್ಚಳ ಮಾಡಬೇಕು ಎಂದು ಅವರು ಮನವಿ ಮಾಡಿದರು. ಈ ವೇಳೆ ವಾಣಿಜ್ಯ ತೆರಿಗೆ ಆಯುಕ್ತ ರಿತ್ವಿಕ್ ಪಾಂಡೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News