ನಾಟಕ ಶಾಲೆಯ ಮೇಲೆ ಅಧಿಕಾರಿಗಳ ದಾಳಿಗೆ ತೀವ್ರ ಖಂಡನೆ

Update: 2017-08-16 18:17 GMT

ಬೆಂಗಳೂರು, ಆ.16: ವಸಂತನಗರದಲ್ಲಿರುವ ಗುರುನಾನಕ್ ಭವನ ರಂಗ ಮಂದಿರದಲ್ಲಿ ನಡೆಯುತ್ತಿದ್ದ ಬೆಂಗಳೂರು ರಾಷ್ಟ್ರೀಯ ನಾಟಕ ಶಾಲೆಯ ಮೇಲೆ ಯುವಜನ ಮತ್ತು ಕ್ರೀಡಾ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಶಾಲೆಯ ಪರಿಕರಗಳು ಹೊರಗೆ ಎಸೆದಿರುವುದಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು, ಇದನ್ನು ಖಂಡಿಸಿ ರಂಗಮಂದಿರದ ಎದುರು ರಂಗ ಕಲಾವಿದರು ಪ್ರತಿಭಟನೆ ನಡೆಸಿದರು.

ಕಳೆದ 15 ವರ್ಷಗಳಿಂದ ಗುರುನಾನಕ್ ಭವನದಲ್ಲಿ ರಾಷ್ಟ್ರೀಯ ನಾಟಕ ಶಾಲೆ ತನ್ನ ಕಾರ್ಯಚಟುವಟಿಕೆಗಳನ್ನು ನಡೆಸುತ್ತಿದೆ. ಆದರೆ, 3-4 ತಿಂಗಳಿಂದ ಬಾಡಿಗೆ ಕಟ್ಟಿಲ್ಲ ಎಂಬ ನೆಪವೊಡ್ಡಿ ಕ್ರೀಡಾ ಇಲಾಖೆಯ 70-80 ಅಧಿಕಾರಿಗಳು ಯಾವುದೇ ಮುನ್ಸೂಚನೆ ನೀಡದೆ ದಾಳಿ ನಡೆಸಿ ಹತ್ತಾರು ವರ್ಷಗಳ ಪರಿಕರಗಳನ್ನು ಬೀದಿಗೆ ಎಸೆದಿದ್ದಾರೆ ಎಂದು ರಂಗ ಕಲಾವಿದರ ಆರೋಪಿಸಿದರು

ಈ ವೇಳೆ ಮಾತನಾಡಿದ ರಂಗ ಕಲಾವಿದ ಲೋಕೇಶ್, ಕ್ರೀಡಾ ಇಲಾಖೆಗೆ ಸಂಬಂಧಿಸಿದ ಸ್ವತ್ತಾಗಿದ್ದರೂ ಕಾಲ ಕಾಲಕ್ಕೆ ಪ್ರತಿ ತಿಂಗಳೂ 55 ಸಾವಿರ ರೂ.ಗಳು ಬಾಡಿಗೆ ಪಾವತಿ ಮಾಡಲಾಗುತ್ತಿತ್ತು. ಪ್ರತಿ ವರ್ಷ ಈ ಶಾಲೆಯ ಮೂಲಕ 25-30 ವಿದ್ಯಾರ್ಥಿಗಳು ತರಬೇತಿಗೊಂಡು ಹೊರ ಹೋಗುತ್ತಿದ್ದಾರೆ. ಪ್ರಸಕ್ತ ಸಾಲಿನಲ್ಲಿ ದಕ್ಷಿಣ ಭಾರತದ ರಾಜ್ಯಗಳ 26 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಆದರೆ, ಈಗ ಅಧಿಕಾರಿಗಳ ಇಂತಹ ವರ್ತನೆಯಿಂದ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಂಗಭೂಮಿ ಜನರಿಗಾಗಿ ಸೀಮಿತವಾದ ಒಂದು ಮಾಧ್ಯಮವಾಗಿದೆ. ನಾಡಿನ ಅನೇಕ ಲೇಖಕರು, ಕವಿಗಳು, ಸಾಹಿತಿಗಳು ರಂಗಭೂಮಿಗಾಗಿ ಸಾಹಿತ್ಯ ರಚಿಸಿದ್ದಾರೆ ಎಂದ ಅವರು, ರಾಷ್ಟ್ರೀಯ ನಾಟಕ ಶಾಲೆ ಕೇಂದ್ರ ಸರಕಾರದ ಅಧೀನದಲ್ಲಿದೆ. ಹೀಗಾಗಿ, ಕೇಂದ್ರ ಮತ್ತು ರಾಜ್ಯ ಸರಕಾರಗಳ ರಾಜಕೀಯ ತಿಕ್ಕಾಟದಲ್ಲಿ ಶಾಲೆಯನ್ನು ಬಲಿಕೊಡುತ್ತಿದ್ದಾರೆ ಎಂದು ಅವರು ದೂರಿದರು.

ನಿರಂತರ ರಂಗ ಚಟುವಟಿಕೆಗಳನ್ನು ನಡೆಸುತ್ತಿರುವ ರಾಷ್ಟ್ರೀಯ ನಾಟಕ ಶಾಲೆಗೆ ಗುರುನಾನಕ್ ಭವನವನ್ನು 30 ವರ್ಷಗಳ ಕಾಲ ಗುತ್ತಿಗೆಗೆ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮನವಿ ಸಲ್ಲಿಸಲಾಗಿದೆ. ಆದರೆ, ಇಲಾಖೆಯ ಅಧಿಕಾರಿಗಳು ಯಾವುದೇ ಮುನ್ಸೂಚನೆ ನೀಡದೇ ರೌಡಿಗಳ ರೀತಿಯಲ್ಲಿ ಗುಂಪು ಕಟ್ಟಿಕೊಂಡು ಬಂದು ದಾಳಿ ಮಾಡಿರುವುದು ಖಂಡನೀಯ ಎಂದರು.

ಕನ್ನಡ ರಂಗಭೂಮಿಯ ಎಲ್ಲರೂ ರಂಗ ಮಂದಿರದ ಮೇಲಾದ ದಾಳಿಯನ್ನು ಒಗ್ಗಟ್ಟಿನಿಂದ ಖಂಡಿಸಬೇಕು. ಸರಕಾರ ಇದಕ್ಕೆ ಕೂಡಲೇ ಪರಿಹಾರ ಕೊಡಬೇಕು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಹಾಗೂ ಕ್ರೀಡಾ ಇಲಾಖೆಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ, ಗುರುನಾನಕ್‌ಭವನವನ್ನು ರಂಗಭೂಮಿ ಚಟುವಟಿಕೆಗಳಿಗೆ ಮೀಸಲಿಡಬೇಕು ಎಂದು ರಂಗಕರ್ಮಿ ಶಶಿಕಾಂತ ಯಡಹಳ್ಳಿ ಅಭಿಪ್ರಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News