ಕಡೂರು ಜನರಿಂದ ಬರಪರಿಸ್ಥಿತಿ ಮಧ್ಯೆ ದಸರಾ ದರ್ಬಾರ್ ಸಂತಸ ತಂದಿದೆ: ಸ್ವಾಮೀಜಿ

Update: 2017-08-17 11:55 GMT

ಕಡೂರು, ಆ. 17: ಕಳೆದ 4 ವರ್ಷಗಳ ಬರಪರಿಸ್ಥಿತಿ ಮಧ್ಯೆ ಕಡೂರು ತಾಲೂಕಿನ ಜನರು ದಸರಾ ದರ್ಬಾರ್ ಮಹೋತ್ಸವ ನಡೆಸಲು ಮುಂದೆ ಬಂದಿರುವುದು ಸಂತಸದ ವಿಷಯ ಎಂದು ಬಾಳೆಹೊನ್ನೂರು ರಂಭಾಪುರಿ ಮಠದ ಡಾ. ಶ್ರೀ ರೇಣುಕ ವೀರಸೋಮೇಶ್ವರ ಸ್ವಾಮೀಜಿ ಹೇಳಿದರು.

  ಅವರು ಪಟ್ಟಣದ ಎಪಿಎಂಸಿ ಅವರಣದಲ್ಲಿ ದಸರಾ ದರ್ಬಾರ್ ಮಹೋತ್ಸವದ ಮಹಾ ಮಂಟಪದ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಪ್ರಥಮ ಬಾರಿಗೆ ಕಡೂರು ಪಟ್ಟಣದಲ್ಲಿ ದಸರಾ ದರ್ಬಾರ್ ಮಹೋತ್ಸವ ನಡೆಯುತ್ತಿದೆ. ಇದು ಅತ್ಯಂತ ವೈಶಿಷ್ಟ್ಯಪೂರ್ಣ ಮತ್ತು ಧಾರ್ಮಿಕ ಸಮಾರಂಭ ಆಗಬೇಕೆಂಬ ಇಚ್ಚೆ ತಮಗಿದೆ. ಬರದ ನಡುವೆಯೂ ಈ ಮಹೋತ್ಸವ ಅದ್ದೂರಿಯಾಗಿ ನಡೆಸಲು ವಿವಿಧ ಸಮಿತಿಗಳನ್ನು ರಚಿಸಿಕೊಂಡು ಮುಂದುವರೆಯುತ್ತಿರುವ ಎಲ್ಲರನ್ನು ಶ್ಲಾಘಿಸಿದರು.

  ಮಹೋತ್ಸದಲ್ಲಿ ಉತ್ತಮ ವಿಷಯಗಳನ್ನು ಮಂಡಿಸುವ ವಿದ್ವಾಂಸರನ್ನು ಕರೆಸಬೇಕು. ಕಾರ್ಯಕ್ರಮದ ವಿವಿಧ ದಿನಗಳ ಸಭೆಗಳಿಗೆ ಎಲ್ಲಾ ಪಕ್ಷ, ಧರ್ಮಗಳ ಅತಿಥಿಗಳನ್ನು ಕರೆಸಬೇಕು. ಈ ಬಗ್ಗೆ ಎಲ್ಲರ ಸಲಹೆಗಳನ್ನು ಸಮಿತಿಯ ಮುಖಂಡರು ಪಡೆದುಕೊಳ್ಳಲಿ ಎಂದು ಸೂಚಿಸಿದರು.

  ಶಾಸಕ ಹಾಗೂ ಮಹೋತ್ಸವ ಸಮಿತಿ ಅಧ್ಯಕ್ಷ ವೈ.ಎಸ್.ವಿ. ದತ್ತ ಮಾತನಾಡಿ, ಕೆಲವು ಕೌಟುಂಬಿಕ ಸಮಸ್ಯೆಗಳಿಂದ ತಾವು ಪೂರ್ಣವಾಗಿ ತೊಡಗಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಇಂದಿನಿಂದ ದಸರಾ ದರ್ಬಾರ್ ಮಹೋತ್ಸವದ ಸಿದ್ದತೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತೇನೆ ಈ ಕಾರ್ಯಕ್ರಮವನ್ನು ಯಶಸ್ವಿ ಮಾಡಿಕೊಡುವ ಜವಾಬ್ದಾರಿ ತಮಗಿರಲಿ ಎಂದರು.

  ಮಾಜಿ ಶಾಸಕ ಮತ್ತು ಮಹೋತ್ಸವದ ಗೌರವಾಧ್ಯಕ್ಷ ಕೆ.ಬಿ. ಮಲ್ಲಿಕಾರ್ಜುನ ಮಾತನಾಡಿ ಮಹೋತ್ಸವದ ಸಿದ್ದತೆಗಳು ಇನ್ನೂ ಚಾಲನೆಯಾಗಿಲ್ಲ. ಹಣಕಾಸು ಸಂಗ್ರಹ ಆರಂಭವಾಗಿಲ್ಲ. ಸ್ವಲ್ಪಮಟ್ಟಿಗೆ ವಿಳಂಬವಾಗಿರುವುದು ನಿಜ. ಇದಕ್ಕೆ ವಿವಿಧ ಸಮಿತಿಯವರು ತಮ್ಮ ಕಾರ್ಯಗಳನ್ನು ಚುರುಕುಗೊಳಿಸಬೇಕು ಎಂದು ಹೇಳಿದರು.
  ಬರಗಾಲದಲ್ಲಿಯೂ ಇಂತಹ ಕಾರ್ಯಕ್ರಮಗಳ ಅಗತ್ಯವಿದೆಯೇ ಎಂಬ ಸಾರ್ವತ್ರಿಕ ಮಾತುಗಳು ಕೇಳಿ ಬರುತ್ತಿವೆ. ಈ ಮಹೋತ್ಸವದಿಂದ ಮುಂದಿನ ದಿನಗಳಲ್ಲಿ ಉತ್ತಮ ಮಳೆ ಬಂದು ಕ್ಷೇತ್ರದ ಬರ ನೀಗುವುದು ಎಂಬ ಸದ್ದುದೇಶದಿಂದ ಈ ಮಹೋತ್ಸವ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ಹೇಳಿದರು.

   ಈ ಸಂದರ್ಭ ಬಾಳೆಹೊನ್ನೂರು ರಂಭಾಪುರಿ ಶಾಖಾ ಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮಿ, ಮಾಜಿ ಶಾಸಕರಾದ ಗಾಯಿತ್ರಿಶಾಂತೇಗೌಡ, ಎಸ್.ಎಲ್. ಧಮೇಗೌಡ, ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷರಾದ ಬೆಳ್ಳಿಪ್ರಕಾಶ್, ಕೆ.ಎಂ. ಕೆಂಪರಾಜು, ದಸರಾ ಮಹೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಹೆಚ್.ಎಂ. ಲೋಕೇಶ್ ಮಾತನಾಡಿದರು. 

  ವೇದಿಕೆಯಲ್ಲಿ ಜಿಪಂ ಸದಸ್ಯ ಶರತ್‍ಕೃಷ್ಣಮೂರ್ತಿ, ಎಪಿಎಂಸಿ ಅಧ್ಯಕ್ಷ ಓಂಕಾರಪ್ಪ, ಬಾಬಣ್ಣ, ಟಿ.ಆರ್.ಲಕ್ಕಪ್ಪ, ಉಮೇಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News