ಆರೋಗ್ಯ ಕೇಂದ್ರಗಳಲ್ಲಿ ಅಶುಚಿತ್ವದ ವಾತಾವರಣ : ಜಿ.ಪಂ ಕೆಡಿಪಿ ಸಭೆಯಲ್ಲಿ ಅಸಮಾಧಾನ

Update: 2017-08-17 12:40 GMT

ಮಡಿಕೇರಿ ಆ.17 :ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಡೆಂಗ್ಯೂ ಸೇರಿದಂತೆ ವಿವಿಧ ರೋಗಗಳು ಹರಡುವ ಭೀತಿ ಇರುವ ಹಂತದಲ್ಲೇ ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಅಶುಚಿತ್ವದ ವಾತಾವರಣ ಕಂಡು ಬಂದಿದೆ. ಆಸ್ಪತ್ರೆಗಳ ತ್ಯಾಜ್ಯ ವಿಲೇವಾರಿ ಸಮರ್ಪಕವಾಗಿ ನಡೆಯುತ್ತಿಲ್ಲ ಎನ್ನುವ ಅಸಮಾಧಾನ ಜಿಲ್ಲಾ ಪಂಚಾಯ್ತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ವ್ಯಕ್ತವಾಗಿದೆ.

 ಜಿಲ್ಲಾ ಪಂಚಾಯ್ತಿ ಅಧ್ಯಕ್ಷರಾದ ಬಿ.ಎ. ಹರೀಶ್ ಅಧ್ಯಕ್ಷತೆಯಲ್ಲಿ ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಕುಟುಂಬ ಕಲ್ಯಾಣಾಧಿಕಾರಿ ಆಶಾ ಅವರು ಜಿಲ್ಲೆಯ ಆರೋಗ್ಯ ಜಾಗೃತಿಗೆ ಸಂಬಂಧಿಸಿದ ಮಾಹಿತಿ ನೀಡಿದರು. ಜಿಲ್ಲಾ ವ್ಯಾಪ್ತಿಯಲ್ಲಿ ಹೆಚ್1ಎನ್1ನ 15 ಪ್ರಕರಣ, ಇಲಿಜ್ವರದ 18 ಪ್ರಕರಣ, ಮಲೇರಿಯಾದ 1 ಪ್ರಕರಣ, ಡೆಂಗ್ಯೂವಿನ 190 ಮತ್ತು ಹೆಪಟೈಟಿಸ್‍ನ 83 ಪ್ರಕರಣಗಳು ಪತ್ತೆಯಾಗಿದ್ದು, ಯಾವುದೇ ಜೀವಹಾನಿಯಾಗಿಲ್ಲ, ರೋಗ ನಿಯಂತ್ರಣದಲ್ಲಿದೆ ಎಂದರು.

ಜಿಪಂ ಉಪಾಧ್ಯಕ್ಷರಾದ ಲೋಕೇಶ್ವರಿ ಗೋಪಾಲ್ ಮಾತನಾಡಿ, ಸೋಮವಾರಪೇಟೆ ತಾಲ್ಲೂಕಿನಲ್ಲಿ ಡೆಂಗ್ಯೂವಿನಿಂದ 2 ಸಾವು ಸಂಭವಿಸಿದೆ ಎಂದರು. 
 ಜಿಲ್ಲಾ ಆಸ್ಪತ್ರೆಯಲ್ಲಿ ದೃಢ ಪಟ್ಟಿಲ್ಲವೆಂದು ಅಧಿಕಾರಿ ಸಮಜಾಯಿಷಿಕೆ ನೀಡಿದ ಸಂದರ್ಭ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಮಾತನಾಡಿ, ರೋಗಿಗಳನ್ನು ಪರಿಶೀಲಿಸಿದರೆ ತಾನೆ ರೋಗ ಪತ್ತೆಯಾಗುವುದು ಎಂದರು. ಸೋಮವಾರಪೇಟೆ ಸೇರಿದಂತೆ ವಿವಿಧ ಆಸ್ಪತ್ರೆÉಗಳಲ್ಲಿ ಸ್ವಚ್ಛತಾ ಕಾರ್ಯ ನಡೆದಿದೆಯೆ ಎಂದು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕುಟುಂಬ ಕಲ್ಯಾಣಾಧಿಕಾರಿ ಆಶಾ, ಕುಶಾಲನಗರದಲ್ಲಿ ತ್ಯಾಜ್ಯ ವಿಲೇವಾರಿಯಾಗದಿರುವುದು, ಶನಿವಾರಸಂತೆ ಆಸ್ಪತ್ರೆಯ ತ್ಯಾಜ್ಯವನ್ನು ಸಂಬಂಧಪಟ್ಟ ಟೆಂಡರ್‍ದಾರ ಹಳೆಯ ಬಿಲ್ ಪಾವತಿಯಾಗದ್ದರಿಂದ ವಿಲೇವಾರಿ ಮಾಡದಿರುವ ವಿಚಾರವನ್ನು ಸಭೆಯ ಮುಂದಿಟ್ಟರು. 
ಈ ಸಂದರ್ಭ ಮಾತನಾಡಿದ ಜಿಲ್ಲಾಧಿಕಾರಿ ಡಾ| ರಿಚರ್ಡ್ ವಿನ್ಸೆಂಟ್ ಡಿಸೋಜ, ತ್ಯಾಜ್ಯ ವಿಲೇ ವಿಚಾರಕ್ಕೆ ಸಂಬಂಧಿಸಿದಂತೆ ಜಿಲ್ಲಾ ಆರೋಗ್ಯ ಇಲಾಖೆ ಮತ್ತು ಪಟ್ಟಣ ಪಂಚಾಯ್ತಿ ಜಂಟಿಯಾಗಿ ಆಸ್ಪತ್ರೆಯನ್ನು ಪರಿಶೀಲಿಸಿ ಎರಡು ಮೂರು ದಿನಗಳಲ್ಲಿ ಸಮಸ್ಯೆ ಬಗೆಹರಿಸುವಂತೆ ಸ್ಪಷ್ಟ ಸೂಚನೆ ನೀಡಿದರು.

ಆಸ್ಪತ್ರೆ ಮುಚ್ಚಿ

 ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಮುಕೊಂಡ ಸುಬ್ರಮಣಿ ಅವರು, ಶಾಂತಳ್ಳಿ ಆಸ್ಪತ್ರೆಯಲ್ಲಿ ಅಗತ್ಯ ನರ್ಸ್ ಮತ್ತು ‘ಡಿ’ ಗ್ರೂಪ್ ನೌಕರರು ಇಲ್ಲದಿರುವುದು. ವಿವಿಧ ಆಸ್ಪತ್ರೆಗಳಲ್ಲಿ ಆಯುಷ್ ವೈದ್ಯರುಗಳಿದ್ದರು ಅವರು ಅಲೋಪತಿ ಔಷಧಿಗಳನ್ನು ನೀಡಲು ಹಿಂದೇಟು ಹಾಕುವ ವಿಚಾರಗಳನ್ನು ಪ್ರಸ್ತಾಪಿಸಿದರು. ಈ ಹಂತದಲ್ಲಿ ಉಪಾಧ್ಯಕ್ಷೆ ಲೊಕೇಶ್ವರಿ ಗೋಪಾಲ್ ‘ವೈದ್ಯರುಗಳು ಇಲ್ಲದಿದ್ದರೆ ಆಸ್ಪತ್ರೆಯನ್ನೆ ಮುಚ್ಚಿ’ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಜಾಂಡೀಸ್ ಭೀತಿ

 ಜಿಲ್ಲಾಧಿಕಾರಿ ಡಾ| ರಿಚರ್ಡ್ ವಿನ್ಸೆಂಟ್ ಡಿಸೋಜ, ಗ್ರಾಮೀಣ ಭಾಗಗಳಲ್ಲಿ ಜಾಂಡೀಸ್‍ನ ಸಾಕಷ್ಟು ಪ್ರಕರಣಗಳು ದಾಖಲಾಗಿದ್ದು, ಕುಡಿಯುವ ನೀರಿನ ಶುಚಿತ್ವಕ್ಕೆ ಒತ್ತು ನೀಡಬೇಕೆಂದರು. ಈ ಸಂದರ್ಭ ಸ್ಥಾಯಿ ಸಮಿತಿ ಅಧ್ಯಕ್ಷ ಮೂಕೊಂಡ ಸುಬ್ರಮಣಿ, ನಾಪೋಕ್ಲು ಪಟ್ಟಣಕ್ಕೆ ನೀರನ್ನು ಶುದ್ಧೀಕರಿಸದೆ ನೇರವಾಗಿ ಸರಬರಾಜು ಮಾಡಲಾಗುತ್ತಿದೆ. ಅಗತ್ಯ ನೀರು ಶುದ್ಧೀಕರಣ ಘಟಕವನ್ನು ಸ್ಥಾಪಿಸುವಂತೆ ಆಗ್ರಹಿಸಿದರು. ಫೋಟೋ :: ಜಿಲ್ಲಾ ಪಂಚಾಯತ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News