ಶಿಡ್ಲಘಟ್ಟ : ‘ನನ್ನ ಮೆಚ್ಚಿನ ಪುಸ್ತಕ’ ಕಾರ್ಯಕ್ರಮ

Update: 2017-08-17 18:02 GMT

ಶಿಡ್ಲಘಟ್ಟ, ಆ. 17: ಪುಸ್ತಕ ಓದುವಿಕೆ ಒಬ್ಬ ಸಾಮಾನ್ಯನನ್ನು ಶ್ರೇಷ್ಠ ಮನುಷ್ಯನನ್ನಾಗಿ ಮಾಡುತ್ತದೆ. ಪುಸ್ತಕ ಓದುವ ಹವ್ಯಾಸವು ಮನುಷ್ಯನಲ್ಲಿ ಒಳ್ಳೆಯ ಗುಣಗಳನ್ನು ಬೆಳೆಸುತ್ತದೆ ಎಂದು ಜಿಲ್ಲಾ ಕಸಾಪ ನಿಕಟಪೂರ್ವ ಗೌರವ ಕಾರ್ಯದರ್ಶಿ ಅಮೃತಕುಮಾರ್ ತಿಳಿಸಿದರು.

ತಾಲ್ಲೂಕಿನ ಮೇಲೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ಕನ್ನಡ ಸಾರಸ್ವತ ಪರಿಚಾರಿಕೆ ವತಿಯಿಂದ ನಡೆದ ‘ನನ್ನ ಮೆಚ್ಚಿನ ಪುಸ್ತಕ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪುಸ್ತಕಗಳು ಜೀವನ ಕಟ್ಟುವ ಶಕ್ತಿಯನ್ನು ಹೊಂದಿದ್ದು ವಿದ್ಯಾರ್ಥಿಗಳು ಪುಸ್ತಕಗಳನ್ನು ಓದುವ ಅಭಿರುಚಿಯನ್ನು ಬೆಳೆಸಿಕೊಂಡು ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸುವ ಜೊತೆಗೆ ಜ್ಞಾನರ್ಜನೆಯನ್ನು ಹೆಚ್ಚಿಸಿಕೊಳ್ಳಬೇಕು. ಬದುಕು ಕಲಿಸುವುದು ಅನೌಪಚಾರಿಕ ಶಿಕ್ಷಣವಾಗಿದೆ. ಓದುವ ಪ್ರಕ್ರಿಯೆಯಲ್ಲಿ ಪುಸ್ತಕದ ತಿರುಳನ್ನು ಅರಿಯಬೇಕು. ನಮ್ಮ ನಿಜ ಸಂಪತ್ತು ಹಳ್ಳಿಗಳಲ್ಲಿದೆ. ಅನೇಕ ಸಾಧಕರು ಹಳ್ಳಿಯ ಮೂಲದವರಾಗಿದ್ದಾರೆ. ಸಾಧನೆ ಮಾಡಿ ಹುಟ್ಟಿದ ಊರನ್ನು ಮರೆಯಬಾರದು. ಸಂಬಂಧಗಳನ್ನು ಉಳಿಸಿಕೊಳ್ಳಬೇಕು. ಮನಮನಗಳ ನಡುವೆ ಪ್ರೀತಿ ಪ್ರೇಮದ ಸೇತುವೆ ಬೆಸೆಯಲಿ ಎಂದು ಹೇಳಿದರು.

ಗ್ರಾಮ ಪಂ. ಅಧ್ಯಕ್ಷೆ ಜಮುನಾ ಧರ್ಮೇಂದ್ರ ಮಾತನಾಡಿ, ಓದುವ ಹವ್ಯಾಸವನ್ನು ಮಕ್ಕಳಲ್ಲಿ ಬೆಳೆಸುವ ಉದ್ದೇಶದಿಂದ ನಡೆಸುವ ಇಂಥ ಕಾರ್ಯಕ್ರಮಗಳು ಸ್ವಾಗತಾರ್ಹ. ಈ ಮೂಲಕ ಮಕ್ಕಳ ವ್ಯಕ್ತಿತ್ವದಲ್ಲಿ ಅಗಾಧ ಬದಲಾವಣೆ ಸಾಧ್ಯವಿದೆ ಎಂದು ಹೇಳಿದರು.

ಶಾಲೆಯ ಗ್ರಂಥಾಲಯದಿಂದ ತಾವು ಓದಿದ ಪುಸ್ತಕಗಳ ಬಗ್ಗೆ ಮಾತನಾಡಿದ ವಿದ್ಯಾರ್ಥಿಗಳಲ್ಲಿ ಪ್ರಥಮ ಸ್ಥಾನವನ್ನು ಸಹನಾ, ದ್ವಿತೀಯ ಸ್ಥಾನ ಗೀತಾ ಹಾಗೂ ತೃತೀಯ ಸ್ಥಾನ ಪಡೆದ ಅಮೂಲ್ಯ ಅವರಿಗೆ ಕನ್ನಡ ಸಾರಸ್ವತ ಪರಿಚಾರಿಕೆ ವತಿಯಿಂದ ಪುಸ್ತಕ ಮತ್ತು ಪ್ರಮಾಣಪತ್ರವನ್ನು ವಿತರಿಸಲಾಯಿತು. ಶಾಲೆಯ ಗ್ರಂಥಾಲಯಕ್ಕೂ ಪುಸ್ತಕಗಳನ್ನು ನೀಡಲಾಯಿತು.

ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ಎಲ್‌ಐಸಿ ಅಧಿಕಾರಿ ಪ್ರಶಾಂತ್, ಶಿಕ್ಷಕರಾದ ಶಿವಕುಮಾರ್ ಪಟ್ಟೇದ, ಸುಜಾತ, ವಿದ್ಯಾ, ಪ್ರಸಾದ್, ಗ್ರಾಮಸ್ಥರಾದ ಸುಧೀರ್, ಸುದರ್ಶನ್, ಶಿವಾನಂದ್, ಪ್ರಭಾಕರ್ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News