ಬಿಡಾಡಿ ಕುದುರೆಗಳಿಂದ ಬೆಳೆಗಳಿಗೆ ಹಾನಿ: ಕುದುರೆಗಳನ್ನು ಕಟ್ಟಿಹಾಕಿ ರೈತರ ಆಕ್ರೋಶ

Update: 2017-08-17 18:06 GMT

ಹಾಸನ, ಆ. 17: ಬೆಳೆಯನ್ನು ನಾಶ ಮಾಡುತ್ತಿದ್ದ 20ಕ್ಕೂ ಹೆಚ್ಚು ಕುದುರೆಗಳನ್ನು ರೈತರು ಕಟ್ಟಿಹಾಕಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಗುರುವಾರ ಬೆಳಗ್ಗೆ ನಡೆದಿದೆ.

ನಗರದ ಸಮೀಪ ತಮ್ಲಾಪುರದಲ್ಲಿ ಕಳೆದ ಮೂರು ತಿಂಗಳಿನಿಂದ ಬಿಡಾಡಿ ಕುದುರೆಗಳ ಹಾವಳಿಗೆ ರೈತರು ಬೆಳೆದ ಜೋಳ, ರಾಗಿ, ಭತ್ತ ಮೊದಲಾದ ಬೆಳೆಗಳನ್ನು ನಾಶ ಮಾಡುತ್ತಿತ್ತು. ಬೇಸೆತ್ತ ತಮ್ಲಾಪುರದ ಗ್ರಾಮಸ್ಥರು ಎಲ್ಲಾ ಸೇರಿ ಕುದುರೆಯನ್ನು ತಾವೆ ಸ್ವತಃಹ ಹಿಡಿದು ಕಟ್ಟಿ ಹಾಕಲು ಮುಂದಾದರು. ಕುದುರೆ ಹಿಡಿಯುವಾಗ ಅನೇಕರು  ಬಿದ್ದು, ಮತ್ತೆ ಕೆಲವರಿಗೆ ಕುದುರೆ ಕಚ್ಚಿ ಗಾಯಗಳಾಗಿವೆ. ಹರಸಾಹಸದಲ್ಲಿ ಕಣ್ಣಿಗೆ ಕಂಡ ಎಲ್ಲಾ ಕುದುರೆಯನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಎಲ್ಲಾ ಕುದುರೆಯನ್ನು ಬೇರೆಡೆಗೆ ಸಾಗಿಸಬೇಕು. ಇಲ್ಲವಾದರೇ ನಾವೇ ದೂರದ ಸ್ಥಳಕ್ಕೆ ಬಿಡುವುದಾಗಿ ಎಚ್ಚರಿಸಿದ್ದಾರೆ.

ತಮ್ಲಾಪುರ ಗ್ರಾಮ ಪಂ. ಮಾಜಿ ಸದಸ್ಯ ಧರ್ಮೇಗೌಡ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ಎರಡು ವರ್ಷಗಳಿಂದ ಸರಿಯಾಗಿ ಮಳೆ ಆಗದೆ ರೈತರು ಬರಗಾಲದಲ್ಲಿ ಅಲ್ಪಸಲ್ಪ ಬೆಳೆ ಬೆಳೆಯುತ್ತಿದ್ದಾರೆ. ಅದರಲ್ಲಿ ಅನೇಕರು ಬಹುತೇಕ ನಷ್ಟ ಹೊಂದಿದ್ದಾರೆ. ಇಂತಹ ಸನ್ನಿವೇಶನದಲ್ಲಿ 20ಕ್ಕೂ ಹೆಚ್ಚು ಕುದುರೆಗಳು ತಮ್ಲಾಪುರ ರೈತರ ಜಮಿನಿಗೆ ತೆರಳಿ ಸಂಪೂರ್ಣ ಹಾಳು ಮಾಡಿದೆ. ಹಿಂದೆ ಇದ್ದ ಜಟಕಾ ಕುದುರೆ ಗಾಡಿಗಳು ಇಂದಿನ ದಿನಗಳಲ್ಲಿ ಕಣ್ಮರೆಯಾಗಿರುವ ಹಿನ್ನಲೆಯಲ್ಲಿ ಮಾಲಿಕರು ತಮ್ಮ ಕುದುರೆಯನ್ನು ಬೀದಿಗೆ ಬಿಟ್ಟಿದ್ದಾರೆ. ಇದರಿಂದ ರೈತರ ಬೆಳೆಗೆ ಹಾನಿಕರವಾಗುತ್ತಿದೆ ಎಂದು ದೂರಿದರು. ಜಿಲ್ಲೆಯ ವಿವಿಧ ಭಾಗಗಳಲ್ಲಿ ಕಾಡು ಪ್ರಾಣಿಗಳ ಹಾವಳಿಯಿಂದ ಬೆಳೆ ನಷ್ಟ ಎಂಬುದನ್ನು ಕೇಳುತ್ತಿದ್ದೆವು ಆದರೇ ಈಗ ಸಾಕು ಪ್ರಾಣಿಗಳಿಂದ ಬೆಳೆ ನಷ್ಟ ಎಂಬ ಕೂಗು ಕೇಳಿ ಬರುತ್ತಿದೆ ಎಂದು ಆತಂಕವ್ಯಕ್ತಪಡಿಸಿದರು.

ಕೂಡಲೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕುದುರೆ ಮಾಲಿಕರ ಮೇಲೆ ಶಿಸ್ತು ಕ್ರಮ ಕೈಗೊಂಡು, ಕುದುರೆ ಹಾವಳಿ ತಪ್ಪಿಸುವಂತೆ ಮನವಿ ಮಾಡಿದರು. ಇಲ್ಲವಾದರೇ ಉಗ್ರ ಹೋರಾಟವನ್ನು ಗ್ರಾಮಸ್ಥರು ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಇದೆ ವೇಳೆ ತಮ್ಲಾಪುರ ಗ್ರಾಮಸ್ಥರಾದ ರಘು, ಗಣೇಶ್, ಮಂಜು, ಸತೀಶ್ ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News