ಬಾಗೇಪಲ್ಲಿ : ಅಪರಿಚಿತ ವ್ಯಕ್ತಿಯ ಶವ ಪತ್ತೆ
ಬಾಗೇಪಲ್ಲಿ,ಆ.18: ಕೊಳೆತ ಸ್ಥಿತಿಯಲ್ಲಿದ್ದ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿರುವ ಘಟನೆ ತಾಲ್ಲೂಕಿನ ಪಾತಪಾಳ್ಯ ಪೊಲೀಸ್ ಠಾಣೆಯ ವ್ಯಾಪ್ತಿಯ ಬಿಳ್ಳೂರು ಗ್ರಾಮದ ಬಳಿ ಬೆಳಕಿಗೆ ಬಂದಿದೆ.
ತಾಲೂಕಿನ ಪಾತಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಬಿಳ್ಳೂರು ಗ್ರಾಮದ ಬಳಿ ಅಪರಿಚಿತ ವ್ಯಕ್ತಿಯ ಶವ ಶುಕ್ರವಾರ ಬೆಳಗ್ಗೆ ಪತ್ತೆಯಾಗಿದೆ. ಬಿಳ್ಳೂರು ಗ್ರಾಮದ ಕೆಲ ಯುವಕರು ಬಯಲು ಶೌಚಾಲಯಕ್ಕೆ ತೆರಳಿದ ಸಂದರ್ಭದಲ್ಲಿ ಗಬ್ಬು ವಾಸನೆ ಬಂದಿದ್ದು ಹತ್ತಿರಕ್ಕೆ ಹೋಗಿ ನೋಡಿದಾಗ ವ್ಯಕ್ತಿಯ ಶವ ಕಂಡುಬಂಡಿದೆ. ತಕ್ಷಣ ಪಾತಪಾಳ್ಯ ಪೊಲೀಸ್ ಠಾಣೆಗೆ ಮಾಹಿತಿ ತಿಳಿಸಿದ್ದಾರೆ.
ಮೃತ ವ್ಯಕ್ತಿ ಸುಮಾರು (40) ಕಳೆದ 2 ದಿನಗಳ ಹಿಂದೆ ಯಾವುದೋ ಕಾರಣಕ್ಕೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬುದಾಗಿ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಘಟನಾ ಸ್ಥಳಕ್ಕೆ ಬಾಗೇಪಲ್ಲಿ ಪೊಲೀಸ್ ವೃತ್ತನಿರೀಕ್ಷಕ ಬಾಲಾಜಿಸಿಂಗ್, ಪಾತಪಾಳ್ಯ ಪೊಲೀಸ್ ಉಪನಿರೀಕ್ಷಕ ರಂಜಿತ್ ಕುಮಾರ್ ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ್ದಾರೆ.