ವಿಟಿಯು ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ

Update: 2017-08-18 13:50 GMT

ಬೆಂಗಳೂರು, ಆ.18: ವಿಟಿಯು ಆಡಳಿತ ಮಂಡಳಿಯ ಬೇಜಾಬ್ದಾರಿ ತನದಿಂದಾಗಿ ವಿದ್ಯಾರ್ಥಿಗಳು 5 ಹಾಗೂ 6ನೇ ಸೆಮಿಸ್ಟರ್‌ಗಳ ಪರೀಕ್ಷೆಯನ್ನು ಒಂದೇ ಅವಧಿಗೆ ಬರೆಯುವಂತಾಗಿದೆ. ಇಂತಹ ಅನಿಷ್ಟ ಪರೀಕ್ಷಾ ಪದ್ಧತಿಯನ್ನು ತೆಗೆದು ಹಾಕಿ, ಪರೀಕ್ಷಾ ಪದ್ಧತಿಯಲ್ಲಿ ಸುಧಾರಣೆ ತರಬೇಕೆಂದು ಒತ್ತಾಯಿಸಿ ಎಐಡಿಎಸ್‌ಒ ನೇತೃತ್ವದಲ್ಲಿ ವಿಟಿಯು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

 ನಗರದ ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಿಂದ ಕೆ.ಆರ್.ಸರ್ಕಲ್‌ವರೆಗೆ ಪ್ರತಿಭಟನಾ ರ್ಯಾಲಿ ನಡೆಸಿದ ವಿದ್ಯಾರ್ಥಿಗಳು, ವಿಟಿಯು ವಿದ್ಯಾರ್ಥಿ ವಿರೋಧಿ ನೀತಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು. ನಾನ್ ಸಿಬಿಸಿಎಸ್ ವಿದ್ಯಾರ್ಥಿಗಳಿಗೆ ಇಯರ್ ಬ್ಯಾಕ್ ಮತ್ತು ಕ್ರಿಟಿಕಲ್ ಇಯರ್ ಬ್ಯಾಕ್ ವ್ಯವಸ್ಥೆಯನ್ನು ತೆಗೆದು ಹಾಕಬೇಕು ಹಾಗೂ ಸಿಬಿಸಿಎಸ್ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆಯನ್ನು ನಡೆಸಬೇಕೆಂದು ಒತ್ತಾಯಿಸಿದರು.

ಈ ವೇಳೆ ಎಐಡಿಎಸ್‌ಒನ ಮುಖಂಡ ರವಿನಂದನ್ ಮಾತನಾಡಿ, ಹೆಚ್ಚಿನ ಬಾರಿ ವಿಟಿಯು ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶವು ತಡವಾಗಿ ಪ್ರಕಟಗೊಳ್ಳುತ್ತದೆ. ಮುಂದಿನ ಪರೀಕ್ಷೆಗಳು ಕೆಲವೇ ದಿನಗಳು ದೂರವಿದ್ದರೂ ಸಾವಿರಾರು ವಿದ್ಯಾರ್ಥಿಗಳ ಫಲಿತಾಂಶವನ್ನು ತಡೆಹಿಡಿಯಲಾಗಿದೆ ಎಂದು ತೋರಿಸಲಾಗುತ್ತದೆ. ಹಾಗೂ ಮರುವೌಲ್ಯಮಾಪನದ ಫಲಿತಾಂಶವು ಪರೀಕ್ಷೆಗೆ ಇನ್ನು ಕೆಲವೇ ಗಂಟೆಗಳು ಉಳಿದಿರುವಂತೆ ಪ್ರಕಟಿಸಲಾಗುತ್ತದೆ. ಈ ಎಲ್ಲ ಗೊಂದಲಗಳಿಂದ ವಿದ್ಯಾರ್ಥಿಗಳು ಪರೀಕ್ಷೆಗಳಿಗೆ ತಯಾರಿ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ವಿಷಾದಿಸಿದರು.

ವಿಮರ್ಶಕ ಪ್ರೊ.ಪಿ.ವಿ.ನಾರಾಯಣ್ ಮಾತನಾಡಿ, ವಿಟಿಯು ಜಾರಿ ಮಾಡಿರುವ ಅವೈಜ್ಞಾನಿಕ ಪರೀಕ್ಷಾ ವಿಧಾನದಿಂದಾಗಿ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ಆತಂತ್ರವಾಗಿದೆ. ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ಎಚ್ಚರಿಕೆ ವಹಿಸಬೇಕೆಂದು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News