ಅಸಭ್ಯ ವರ್ತನೆ: ಟಿ.ಪಿ. ರಮೇಶ್ ರಾಜೀನಾಮೆಗೆ ಹೆಚ್ಚಿದ ಒತ್ತಡ

Update: 2017-08-18 14:47 GMT

ಮಡಿಕೇರಿ, ಆ.18: ಜಿಲ್ಲಾ ಕೇಂದ್ರ ಸ್ಥಾನ ಮಡಿಕೇರಿಯ ಕೋಟೆ ಆವರಣದಲ್ಲಿ ಜಿಲ್ಲಾಡಳಿತದ ವತಿಯಿಂದ ನಡೆದ ಸ್ವಾತಂತ್ರ್ಯೋತ್ಸವ ಸಮಾರಂಭದ ವೇದಿಕೆಯಲ್ಲಿ ರಾಜ್ಯ ರೇಷ್ಮೆ ಮಾರಾಟ ಮಂಡಳಿಯ ಅಧ್ಯಕ್ಷ ಟಿ.ಪಿ.ರಮೇಶ್ ಅಸಭ್ಯವಾಗಿ ನಡೆದುಕೊಂಡಿದ್ದಾರೆ ಎನ್ನುವ ಆರೋಪದ ಹಿನ್ನೆಲೆಯಲ್ಲಿ ಅವರು ರಾಜೀನಾಮೆ ನೀಡಬೇಕೆಂದು ಜಿಲ್ಲಾ ಬಿಜೆಪಿ ಒತ್ತಾಯಿಸಿದೆ.

ವಿಧಾನ ಪರಿಷತ್ ಸದಸ್ಯೆ  ವೀಣಾ ಅಚ್ಚಯ್ಯ ಅವರ ಕೈಯನ್ನು ಟಿ.ಪಿ.ರಮೇಶ್ ಕೈ ಹಿಡಿಯುವ ವೀಡಿಯೊ ಕ್ಲಿಪಿಂಗ್‌  ವೈರಲ್ ಆಗಿದ್ದು, ಪ್ರಕರಣದ ವಿರುದ್ಧ ಕೊಡಗು ಜಿಲ್ಲೆಯಲ್ಲೂ ಟೀಕೆಗಳು ವ್ಯಕ್ತವಾಗಿವೆ. ರಮೇಶ್  ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಮತ್ತು ಕಾಂಗ್ರೆಸ್ ಪಕ್ಷದಿಂದಲೇ ಅವರನ್ನು ಉಚ್ಛಾಟಿಸಬೇಕೆಂದು ಜಿಲ್ಲಾ ಬಿಜೆಪಿ ಒತ್ತಾಯಿಸಿದೆ.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಂತೆಯಂಡ ರವಿ ಕುಶಾಲಪ್ಪ ಪ್ರತಿಕ್ರಿಯೆ ನೀಡಿ ಈ ಘಟನೆ ಇಡೀ ಕೊಡಗು ಜಿಲ್ಲೆಗೆ ಮಾತ್ರವಲ್ಲದೆ ಮಹಿಳಾ ಸಮೂಹಕ್ಕೆ ಮಾಡಿರುವ ಅಪಮಾನವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಒಂದು ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ರಮೇಶ್ ಅವರು, ಈ ರೀತಿ ನಡೆದುಕೊಂಡಿರುವುದು ಅವರ ವ್ಯಕ್ತಿತ್ವಕ್ಕೆ ಶೋಭೆ ತರುವಂತಹ ವಿಚಾರವಲ್ಲ. ರೇಷ್ಮೆ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವವರೆಗೆ ಬಿಜೆಪಿ ಹೋರಾಟವನ್ನು ಮುಂದುವರಿಸಲಿದೆ ಎಂದು ರವಿ ಕುಶಾಲಪ್ಪ ತಿಳಿಸಿದ್ದಾರೆ.

ಮುಜುಗರವಾಗಿದೆ: ವೀಣಾ ಅಚ್ಚಯ್ಯ

ರಮೇಶ್ ಅವರು ವೇದಿಕೆಯಲ್ಲಿ ನನ್ನ ಕೈ ಮುಟ್ಟಿದ್ದಾರೆ, ಸಾರ್ವಜನಿಕ ವೇದಿಕೆಯಲ್ಲಿ ಈ ರೀತಿ ನಡೆದುಕೊಂಡಿರುವುದು ನನಗೆ ಮುಜುಗರವಾಗಿದೆ. ಈ ಹಿನ್ನೆಲೆಯಲ್ಲಿ ತಾನು ಅವರ ಕೈಯ್ಯನ್ನು ತಕ್ಷಣ ಸರಿಸಿದ್ದೇನೆ ಎಂದು ವೀಣಾ ಅಚ್ಚಯ್ಯ ತಿಳಿಸಿದ್ದಾರೆ.

ವಿಷಾದಿಸುತ್ತೇನೆ
ನಾನು ವೀಣಾ ಅಚ್ಚಯ್ಯ ಅವರನ್ನು ಸಹೋದರಿ ಎಂದೇ ಭಾವಿಸಿದ್ದೇನೆ. ಆದರೂ ನನ್ನಿಂದ ಅವರಿಗೆ ಮುಜುಗರವಾಗಿದ್ದಲ್ಲಿ ವಿಷಾದಿಸುತ್ತೇನೆ ಎಂದು ಟಿ.ಪಿ.ರಮೇಶ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News