×
Ad

ಜಿಎಸ್‌ಟಿಯಿಂದ ದೇಶದಲ್ಲಿ ಒಂದೇ ಅರ್ಥ ವ್ಯವಸ್ಥೆ : ಡಾ.ಪಾರ್ಥಸಾರಥಿ ಷೋಮೆ

Update: 2017-08-18 20:44 IST

ಬೆಂಗಳೂರು, ಆ.18: ಜಿಎಸ್‌ಟಿ ತೆರಿಗೆಯ ಮೂಲಕ ದೇಶದಲ್ಲಿ ಏಕರೂಪ ಅರ್ಥ ವ್ಯವಸ್ಥೆಯನ್ನು ಜಾರಿಗೊಳಿಸಲು ಸಹಾಯಕವಾಗಲಿದೆ ಎಂದು ಐಟಿಆರ್‌ಎಎಫ್ ಅಧ್ಯಕ್ಷ ಡಾ.ಪಾರ್ಥಸಾರಥಿ ಷೋಮೆ ಅಭಿಪ್ರಾಯಪಟ್ಟಿದ್ದಾರೆ.

ಶುಕ್ರವಾರ ನಗರದ ಎಫ್‌ಕೆಸಿಸಿಐ ಆಯೋಜಿಸಿದ್ದ ಸರಕು ಸೇವಾ ತೆರಿಗೆ(ಜಿಎಸ್‌ಟಿ) ಜಾರಿಯಿಂದ ಆಗಿರುವ ಪರಿಣಾಮ ಕುರಿತ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

 ಸರಕು ಮತ್ತು ಸೇವಾ ತೆರಿಗೆಗೆ ಆರಂಭದಲ್ಲಿ ದೇಶದಲ್ಲಿ ಅಭೂತಪೂರ್ವ ಮನ್ನಣೆ ಸಿಕ್ಕಿದೆ. ಈಗಾಗಲೇ ಲಕ್ಷಾಂತರ ಜನರು ನೋಂದಣಿ ಮಾಡಿದ್ದಾರೆ. ಜಿಎಸ್‌ಟಿ ಬಗೆಗಿನ ಗೊಂದಲಗಳನ್ನು ನಿವಾರಣೆ ಮಾಡಲು ಈ ರೀತಿಯ ವಿಚಾರ ಸಂಕಿರಣಗಳು ಸಹಕಾರಿ ಎಂದು ತಿಳಿಸಿದರು.

ಇಂದು 160 ದೇಶದಲ್ಲಿ ಜಿಎಸ್‌ಟಿ ತೆರಿಗೆ ಪದ್ಧತಿಯಿದೆ. ಈ ಪದ್ದತಿಯನ್ನು ಅಳವಡಿಸಿಕೊಂಡಿರುವ ದೇಶಗಳು ಕ್ರಾಂತಿಕಾರಿ ಬೆಳವಣಿಗೆ ಕಂಡಿವೆ. ದೇಶದಲ್ಲಿ ಕೆಲವೇ ವರ್ಷಗಳಲ್ಲಿ ಜಿಎಸ್‌ಟಿಯಿಂದ ಮಹೋನ್ನತ್ತ ಆರ್ಥಿಕ ಬೆಳವಣಿಗೆ ಕಾಣಲಿದ್ದೇವೆ ಎಂದು ಆಶಾವಾದ ವ್ಯಕ್ತಪಡಿಸಿದರು.

 ರಾಜ್ಯ ವಾಣಿಜ್ಯ ತೆರಿಗೆಗಳ ವಿಭಾಗದ ಆಯುಕ್ತ ಋತ್ವಿಕ್ ಪಾಂಡೆ ಮಾತನಾಡಿ, ಜಿಎಸ್‌ಟಿಯಿಂದ ಮಾರಾಟಗಾರರಿಗೆ ಹಾಗೂ ಗ್ರಾಹಕರಿಗೆ ಮಾರುಕಟ್ಟೆಯ ಅಗತ್ಯ ಮಾಹಿತಿ ದೊರಕಲಿದೆ. ಇದರಿಂದ ಜನರಿಗೆ ಯಾವುದೇ ಹೊರೆಯಾಗುವುದಿಲ್ಲ ಎಂದು ತಿಳಿಸಿದರು.

ಐಟಿ ಆಧಾರಿತವಾಗಿ ಸಿದ್ಧಪಡಿಸಿರುವ ಜಿಎಸ್‌ಟಿಯನ್ನು ವಾಣಿಜ್ಯ ಮತ್ತು ವಹಿವಾಟು ಕ್ಷೇತ್ರದಲ್ಲಿ ಅಧಿಕಾರಿಗಳು ಹೆಚ್ಚು ಪಾರದರ್ಶಕವಾಗಿ ಕೆಲಸ ಮಾಡಲು ಸಹಾಯಕವಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಕೀಲ ಜಿ.ಶಿವದಾಸ್, ದೆಹಲಿಯ ಐಟಿ ನೆಟ್‌ವರ್ಕ್ ಉಪಾಧ್ಯಕ್ಷ ಪಂಕಜ್ ದೀಕ್ಷಿತ್, ಎಫ್‌ಕೆಸಿಸಿಐನ ಅಧ್ಯಕ್ಷ ಕೆ.ರವಿ ಸೇರಿದಂತೆ ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News