ಸಿದ್ದರಾಮಯ್ಯರನ್ನು ಜೈಲಿಗೆ ಕಳುಹಿಸಿಯೇ ಸಿದ್ಧ: ಯಡಿಯೂರಪ್ಪ
ಬೆಂಗಳೂರು, ಆ.18: ಭ್ರಷ್ಟಾಚಾರ ಆರೋಪ ಹೊತ್ತಿರುವ ಸಚಿವರನ್ನು ಸಂಪುಟದಿಂದ ಕೈಬಿಡುವಂತೆ ಆಗ್ರಹಿಸಿ ಶುಕ್ರವಾರ ಬಿಜೆಪಿ ನಗರ ಘಟಕ ಸ್ವಾತಂತ್ರ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಿತು. ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಭ್ರಷ್ಟ ಸಚಿವರನ್ನು ಸಂಪುಟದಿಂದ ವಜಾಗೊಳಿಸುವಂತೆ ಆಗ್ರಹಿಸಲಾಯಿತು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ತಮ್ಮ ಕುರ್ಚಿಗೆ ಎಲ್ಲಿ ಪೆಟ್ಟು ಬೀಳುತ್ತದೋ ಎಂದು ಹೆದರಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವರಾದ ಡಿ.ಕೆ. ಶಿವಕುಮಾರ್ ಮತ್ತು ರಮೇಶ್ ಜಾರಕಿಹೊಳಿ ಅವರನ್ನು ಸಚಿವ ಸಂಪುಟದಿಂದ ಕೈಬಿಡಲು ಹೆದರುತ್ತಿದ್ದಾರೆ. ಅಲ್ಲದೆ, ಸಿದ್ದರಾಮಯ್ಯ ಅವರ ಎಲ್ಲ ಭ್ರಷ್ಟಾಚಾರಗಳ ಬಗ್ಗೆ ತನಿಖೆ ನಡೆಸಿ ಜೈಲಿಗೆ ಕಳುಹಿಸದಿದ್ದರೆ ನನ್ನ ಹೆಸರು ಯಡಿಯೂರಪ್ಪನೆ ಅಲ್ಲ ಎಂದು ಗುಡುಗಿದ್ದಾರೆ.
ಕಳೆದ ನಾಲ್ಕುವರೆ ವರ್ಷಗಳಿಂದ ಹಲವಾರು ಭ್ರಷ್ಟಾಚಾರ ನಡೆಸಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಮನೆಗೆ ಕಳುಹಿಸಲು ಪ್ರಧಾನಿ ನರೇಂದ್ರಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ಶಾ ಅವರು ಇಲ್ಲಿಗೆ ಬರಬೇಕಾಗಿಲ್ಲ. ರಾಜ್ಯದ ಆರೂವರೆ ಕೋಟಿ ಜನರೇ ಮುಂದಿನ ಚುನಾವಣೆಯಲ್ಲಿ ನಿಮ್ಮನ್ನು ಮನೆಗೆ ಕಳುಹಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಬಗ್ಗೆ ತಮ್ಮ ಭಾಷಣದುದ್ದಕ್ಕೂ ಏಕವಚನದಲ್ಲೇ ವಾಗ್ದಾಳಿ ನಡೆಸಿದ ಯಡಿಯೂರಪ್ಪ, ಹತ್ತು ವರ್ಷಗಳ ಹಿಂದೆ ಬಡವರ ಬದುಕು ಹಸನಾಗಲು ಮಾಡಿದ ಡಿನೋಟಿಫೈ ವಿಚಾರವನ್ನೇ ಮುಂದಿಟ್ಟುಕೊಂಡು ಹಗೆ ಸಾಧಿಸಲು ಹೊರಟರೆ ನಿಮ್ಮನ್ನು ಬಿಡುವುದಿಲ್ಲ. ಇಂತಹ ನೂರು ಕೇಸುಗಳನ್ನು ಹಾಕಿದರೂ ನಿಮ್ಮನ್ನು ಕೆಳಗಿಳಿಸುವ ತನಕ ಹೋರಾಟ ನಿಲ್ಲಿಸುವುದಿಲ್ಲ. ಎಸಿಬಿಯಲ್ಲಿ ಎಫ್‌ಐಆರ್ ಹಾಕಿದರೆ ಹೋರಾಟ ನಿಲ್ಲಿಸುತ್ತಾರೆ ಎಂದು ಭ್ರಮೆ ಇಟ್ಟುಕೊಳ್ಳಬೇಡಿ ಎಂದು ಹೇಳಿದರು.
ಲೋಕೋಪಯೋಗಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರ ಮಗ ನಡೆಸಿದ ಮರಳು ದಂಧೆ, ಶಾಸಕ ಮುನಿರತ್ನ ಅವರ ಕಟ್ಟಡವೊಂದರಲ್ಲಿ ಸಾವಿರಾರು ಕಡತಗಳಿಗೆ ಏನು ಉತ್ತರ ಕೊಟ್ಟಿದ್ದೀರಿ. ನಗರದಲ್ಲಿ ಮಳೆ ಬಂದು ಜನ ಸಾಯುತ್ತಿದ್ದಾರೆ. ಸಚಿವ ಸಂಪುಟ ವಿಸ್ತರಣೆ ಎಂದು ಸಿದ್ಧರಾಮಯ್ಯ ಮೋಜು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ಶಾ ಅವರು ಕೇಂದ್ರದಿಂದ ಬಿಡುಗಡೆಯಾದ 2900 ಕೋಟಿ ರೂ.ಅನುದಾನವನ್ನು ಏನಾಯಿತು ಎಂದು ಪ್ರಶ್ನಿಸಿದರೆ, ಅದನ್ನು ಕೇಳಲು ಅವರ್ಯಾರು ಎಂದು ಪ್ರಶ್ನೆ ಮಾಡುತ್ತೀರಿ. ದೇಶದ ಯಾವುದೇ ಪ್ರಜೆ ಇಂತಹ ಪ್ರಶ್ನೆ ಕೇಳಬಹುದು. ಲೂಟಿ ಮಾಡಲು ನಿಮ್ಮನ್ನು ಮುಖ್ಯಮಂತ್ರಿಯಾಗಿ ಜನತೆ ಆಯ್ಕೆ ಮಾಡಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.
ವಿಧಾನಸಭೆಯ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್ ಮಾತನಾಡಿ, ಡಿ.ಕೆ. ಶಿವಕುಮಾರ್ ಅವರನ್ನು ಕಳಂಕಿತ ಎಂದು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳದ ಮುಖ್ಯಮಂತ್ರಿ ಸಿದ್ದರಾಮಯ್ಯ ವರಿಷ್ಠರ ಒತ್ತಡಕ್ಕೆ ಮಣಿದು ಎರಡನೇ ಬಾರಿ ಸೇರಿಸಿಕೊಂಡರು. ಈಗ ಡಿಕೆಶಿ ಕಳಂಕಿತ ಎಂದು ಸಾಬೀತಾಗಿದೆ. ಅವರನ್ನು ಸಚಿವ ಸಂಪುಟದಿಂದ ಕಿತ್ತುಹಾಕಬೇಕು ಎಂದು ಒತ್ತಾಯಿಸಿದರು.
ಡಿ.ಕೆ. ಶಿವಕುಮಾರ್, ರಮೇಶ್ ಜಾರಕಿಹೊಳಿ ವಿರುದ್ದ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸುವ ಮೂಲಕ ಅವರ ಶಾಸಕ ಸ್ಥಾನ ರದ್ದುಪಡಿಸಲು ಆಗ್ರಹಿಸುವುದಾಗಿ ಹೇಳಿದರು.
ಸಂಸದೆ ಶೋಭಾಕರಂದ್ಲಾಜೆ ಮಾತನಾಡಿ, ಎಸಿಬಿ ಸಂಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಎಸಿಬಿ ಪೊಲೀಸರೆ ನೀವು ಸತ್ಯವಂತರಾಗಿದ್ದರೆ ವಾಚ್ ಹಗರಣ, ಲೋಕೋಪಯೋಗಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರ ವಿರುದ್ದದ ಪ್ರಕರಣ, ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆ ವಿಚಾರಣೆ ಮತ್ತಿತರ ದೂರುಗಳ ವಿರುದ್ಧ ಎಫ್‌ಐಆರ್ ದಾಖಲಿಸುವ ತಾಕತ್ತು ತೋರಬೇಕು ಎಂದು ಆಗ್ರಹಿಸಿದರು.
ವಿಧಾನಪರಿಷತ್‌ನ ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಮಾತನಾಡಿ, ಇದೊಂದು ಕಳ್ಳರ ಸರಕಾರ. ಡಿ.ಕೆ.ಶಿವಕುಮಾರ್, ರಮೇಶ್ ಜಾರಕಿಹೊಳಿ ಅವರ ಮನೆಯಲ್ಲಿ ಎಷ್ಟು ಹಣ ದೊರಕಿತು. ಸದ್ಯದಲ್ಲೇ ಆದಾಯ ತೆರಿಗೆ ಮೂಲಕ ಜಾರಿ ನಿರ್ದೇಶನಾಲಯವು ಕ್ರಮ ಕೈಗೊಂಡು ಡಿಕೆಶಿ ಅವರನ್ನು ಜೈಲಿಗೆ ತಳ್ಳುತ್ತದೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಮುರುಳೀಧರ್‌ರಾವ್, ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್, ಶಾಸಕರಾದ ಸಿ.ಟಿ. ರವಿ, ಅರವಿಂದ ಲಿಂಬಾವಳಿ, ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ, ಮಾಜಿ ಸಚಿವ ಗೋವಿಂದಕಾರಜೋಳ ಮತ್ತಿತರರು ಪಾಲ್ಗೊಂಡಿದ್ದರು.