ಜಲಸಮಾವೇಶದಲ್ಲಿ ಕೈಗೊಂಡ ನಿರ್ಧಾರಗಳು ಕಾರ್ಯರೂಪಕ್ಕೆ ಬರಲಿ: ಸಿಎಂ
ವಿಜಯಪುರ, ಆ.18: ರಾಷ್ಟ್ರೀಯ ಜಲ ಸಮಾವೇಶದಲ್ಲಿ ಕೈಗೊಂಡ ನಿರ್ಧಾರಗಳು ನೀತಿ ಆಯೋಗದಲ್ಲಿ ಚರ್ಚೆ ಆಗುವ ಜೊತೆಗೆ ಸಮರ್ಪಕವಾಗಿ ಕಾರ್ಯರೂಪಕ್ಕೆ ಬರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ನಗರದ ಬಿಎಲ್‌ಡಿಇ ವಿಶ್ವವಿದ್ಯಾಲಯದ ಆವರಣದಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಂಡಿದ್ದ ಬರ ಮುಕ್ತ ಭಾರತಕ್ಕಾಗಿ ರಾಷ್ಟ್ರೀಯ ಜಲ ಸಮಾವೇಶದ ಸಮಾರೋಪ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಅರಣ್ಯ ಸಂಪತ್ತನ್ನು ಕಾಪಾಡುವುದರ ಮೂಲಕ ಪ್ರಕೃತಿ ಸಮತೋಲನ ಕಾಯ್ದುಕೊಳ್ಳಬೇಕು. ಲಭ್ಯ ನೀರನ್ನು ಸಾಧ್ಯವಾದಷ್ಟು ಹೆಚ್ಚು ಜನರಿಗೆ ದೊರೆಯುವಂತೆ ಮಾಡಬೇಕು. ಆಧುನಿಕ ಜಲ ತಂತ್ರಜ್ಞಾನ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯ ಕೇವಲ ಶೇ.34 ನಷ್ಟು ಮಾತ್ರ ನೀರಾವರಿ ಹೊಂದಿದೆ. ಮಳೆಯಾಧಾರಿತ ವ್ಯವಸಾಯವೇ ಹೆಚ್ಚಾಗಿದೆ. ಪ್ರಕೃತಿ ಸಮತೋಲನಕ್ಕೆ ಮೂರನೇ ಒಂದರಷ್ಟು ಅರಣ್ಯವನ್ನು ಸಂರಕ್ಷಿಸಬೇಕಿದೆ ಎಂದು ತಿಳಿಸಿದರು. ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ, ವಿಜಯಪುರ ಘೋಷಣೆ ಪ್ರಕಟಿಸಿದ ಬಳಿಕ ಮಾತನಾಡಿದ ಅವರು, ಜಲ ಸಾಕ್ಷರತೆಯ ಧ್ಯೇಯೋದ್ದೇಶಗಳನ್ನು ಸಾಧಿಸಲು ದೇಶಾದ್ಯಂತ 21 ನದಿ ಸಂಸತ್ತನ್ನು ರಚಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ದೇಶದ 101 ನದಿಗಳ ನೀರು ತುಂಬಿದ ಕಳಶವನ್ನು ಜಲಸಂಪನ್ಮೂಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅವರು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಗೆ ಹಸ್ತಾಂತರಿಸಿದರು.
ಇದೇ ವೇಳೆ ಕೃಷ್ಣಾ ನದಿ ನೀರು ತುಂಬಿದ ಕಳಶವನ್ನು ಜಲ ತಜ್ಞ ರಾಜೇಂದ್ರಸಿಂಗ್ ಅವರಿಗೆ ಹಸ್ತಾಂತರಿಸಲಾಯಿತು. ಕರ್ನಾಟಕ ಅಂಚೆ ಇಲಾಖೆಯಿಂದ ಜಲವೇ ಸಂಪತ್ತು ವಿಶೇಷ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಕೂಡಲಸಂಗಮದ ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳು, ಮಮದಾಪುರ ವೀರಕ್ತಮಠದ ಅಭಿನವ ಮುರುಘೇಂದ್ರ ಮಹಾಸ್ವಾಮೀಜಿ, ಸಂಸದೀಯ ಕಾರ್ಯದರ್ಶಿ ಡಾ.ಮಕ್ಬೂಲ್ ಭಗವಾನ್ ಇತರರು ಪಾಲ್ಗೊಂಡಿದ್ದರು.
‘ಡಿನೋಟಿಫೈ ಮಾಡುವ ಪ್ರಸ್ತಾಪ ಸರಕಾರದ ಮುಂದಿಲ್ಲ. ಯಾವುದೇ ಕಾರಣಕ್ಕೂ ಕೆರೆಗಳನ್ನು ಡಿನೋಟಿಫೈ ಮಾಡುವುದಿಲ್ಲ. ಈ ವಿಚಾರದಲ್ಲಿ ಅನಗತ್ಯವಾಗಿ ಅಪಪ್ರಚಾರ ಮಾಡುವುದು ಸರಿಯಲ್ಲ’
- ಸಿದ್ದರಾಮಯ್ಯ,ಮುಖ್ಯಮಂತ್ರಿ