ಸಾಗಡೆ ಗ್ರಾಮ ಪಂಚಾಯಿತಿ ಮತ್ತೇ ‘ಕೈ’ ವಶ
ಚಾಮರಾಜನಗರ, ಆ. 18: ತಾಲೂಕಿನ ಸಾಗಡೆ ಗ್ರಾಮ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನ ಕಾಂಗ್ರೆಸ್ ಬೆಂಬಲಿಗರ ಪಾಲಾಗಿದ್ದು, ನೂತನ ಅಧ್ಯಕ್ಷರಾಗ ಕುಮಚಹಳ್ಳಿ ಸ್ವಾಮಿ ಹಾಗೂ ಉಪಾಧ್ಯಕ್ಷರಾಗಿ ರೇವಣ್ಣ ಬಹುಮತವನ್ನು ಪಡೆದು ಆಯ್ಕೆಯಾಗಿದ್ದಾರೆ.
ಇಲ್ಲಿನ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದ ಮಹದೇವಸ್ವಾಮಿ ಮತ್ತು ಉಪಾಧ್ಯಕ್ಷೆ ಮಂಗಳಮ್ಮ ಅವರ ರಾಜೀನಾಮೆ ತೆರವಾಗಿದ್ದ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ವರ್ಗಕ್ಕು, ಉಪಾಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ ಮಹಿಳೆಗೆ ನಿಗಧಿಯಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತರಾಗಿ ಕುಮಚಹಳ್ಳಿ ಸ್ವಾಮಿ, ಉಪಾಧ್ಯಕ್ಷ ಸ್ಥಾನಕ್ಕೆ ರೇವಮ್ಮ ನಾಮಪತ್ರ ಸಲ್ಲಿಸಿದ್ದರೆ, ಬಿಜೆಪಿ ಬೆಂಬಲಿತ ಮಹದೇವಸ್ವಾಮಿ ಕೆ. ಹಾಗೂ ಪುಟ್ಟಸಿದ್ದಮ್ಮ ಸ್ಪರ್ಧೆ ಮಾಡಿದ್ದರು.
19 ಸದಸ್ಯರ ಬಲ ಹೊಂದಿರುವ ಪಂಚಾಯಿತಿಯಲ್ಲಿ ಮತದಾನ ನಡೆದು ಕಾಂಗ್ರೆಸ್ ಬೆಂಬಲಿತ ಸ್ವಾಮಿಗೆ 12 ಮತ ಹಾಗೂ ರೇವಮ್ಮ ಅವರಿಗೆ 11 ಮತಗಳು ಬಂದು ಅಧ್ಯಕ್ಷ-ಉಪಾಧ್ಯಕ್ಷರಾಗಿ ಆಯ್ಕೆಯಾದರು. ಬಿಜೆಪಿ ಬೆಂಬಲಿತರಾದ ಮಹದೇವಸ್ವಾಮಿಗೆ 7 ಹಾಗೂ ಪುಟ್ಟಸಿದ್ದಮ್ಮ ಅವರಿಗೆ 8 ಮತಗಳು ಬಂದವು. ಚುನಾವಣಾಧಿಕಾರಿಯಾಗಿ ಬಿಸಿಯೂಟ ಯೋಜನೆಯ ಸಹಾಯಕ ನಿರ್ದೇಶಕ ಡಿ. ಸೋಮಣ್ಣೇಗೌಡ ಕರ್ತವ್ಯ ನಿರ್ವಹಿಸಿದರು. ಪಿಡಿಓ ಮಹದೇವಯ್ಯ ಉಪಸ್ಥಿತರಿದ್ದರು.