×
Ad

ಭ್ರಷ್ಟರಿಂದಲೇ ಭ್ರಷ್ಟಾಚಾರದ ವಿರುದ್ದ ಆರ್ಭಟ : ಎ.ಕೆ. ಸುಬ್ಬಯ್ಯ ಕಿಡಿ

Update: 2017-08-18 22:28 IST

ಮಡಿಕೇರಿ, ಆ.18 : ಮಹಾಭ್ರಷ್ಟರೆನಿಸಿಕೊಂಡವರೆ ಇಂದು ಭ್ರಷ್ಟಾಚಾರದ ವಿರುದ್ದ ಬೊಬ್ಬಿಡುತ್ತಿದ್ದಾರೆ. ಭ್ರಷ್ಟಾಚಾರದ ಪ್ರತಿರೂಪವೆ ಆಗಿರುವ ಬಿ.ಜೆ.ಪಿ. ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಮಾತುಗಳು ಇದಕ್ಕೊಂದು ಜೀವಂತ ಉದಾಹರಣೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯರಾದ ಎ.ಕೆ.ಸುಬ್ಬಯ್ಯ ಆರೋಪಿಸಿದ್ದಾರೆ.

ಪತ್ರಿಕಾ ಹೇಳಿಕೆ ಬಿಡುಗಡೆಗೊಳಿಸಿರುವ ಅವರು, ಇತ್ತೀಚೆಗೆ ಬೆಂಗಳೂರಿಗೆ ಬಂದ ಅಮಿತ್ ಶಾ ಬಿ.ಜೆ.ಪಿ.ಯ ಭವಿಷ್ಯದ ಬಗ್ಗೆ ಜ್ಯೋತಿಷ್ಯರನ್ನು ಕೇಳಿ ಭ್ರಷ್ಟಾಚಾರದ ವಿರುದ್ದ ಗುಡುಗುತ್ತಾರೆ. ಕೆಲ ದಿನಗಳ ಹಿಂದೆ ಆದಾಯ ತೆರಿಗೆ ಅಧಿಕಾರಿಗಳ ದಾಳಿಗೊಳಗಾದ ರಾಜ್ಯದ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರ ರಾಜಿನಾಮೆ ಕೇಳದೇ ಇದ್ದದಕ್ಕೆ ರಾಜ್ಯ ಬಿ.ಜೆ.ಪಿ. ಮುಖಂಡರನ್ನು ತರಾಟೆಗೆ ತೆಗೆದುಕೊಂಡ ಅಮಿತ್‍ಶಾ ರಾಜ್ಯದಲ್ಲಿ ಇನ್ನಷ್ಟು ಐ.ಟಿ ದಾಳಿಗಳ ಬಗ್ಗೆ ಮುನ್ಸೂಚನೆ ನೀಡಿದ್ದಾರೆ. ಆದಾಯ ತೆರಿಗೆ ಇಲಾಖೆ ನಡೆಸುವ ದಾಳಿಗಳು ಯಾವುದು ಸ್ವತಂತ್ರ ದಾಳಿಗಳಲ್ಲ. ಈ ಎಲ್ಲಾ ದಾಳಿಗಳನ್ನು ಪ್ರಧಾನಿ ಮೋದಿ ಮತ್ತು ಬಿ.ಜೆ.ಪಿ. ರಾಷ್ಟ್ರೀಯ ಅಧ್ಯಕ್ಷ ಅಮಿತ್‍ಶಾ ಜೋಡಿ ನಿಯಂತ್ರಿಸುತ್ತಿದ್ದಾರೆ ಎಂಬುವುದು ಇದರಿಂದ ಬಹಿರಂಗವಾಗಿದೆ ಎಂದು ಆರೋಪಿಸಿದ್ದಾರೆ.

ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಆದಾಯ ತೆರಿಗೆ ಇಲಾಖೆ ಮತ್ತು ಸಿ.ಬಿ.ಐ. ಅಂತಹ ಸ್ವಾಯತ್ತ ಸಂಸ್ಥೆಗಳನ್ನು ತಮ್ಮ ಕೈಗೊಂಬೆಯಾಗಿ ಮಾಡಿಕೊಳ್ಳುವುದಾದರೆ ಅದಕ್ಕಿಂತಲೂ ದೊಡ್ಡ ಭ್ರಷ್ಟಾಚಾರ ಮತ್ತೊಂದು ಇರಲಾರದು. ಇಂತಹ ಭ್ರಷ್ಟ ಮಾರ್ಗಗಳ ಮೂಲಕವೆ ನರೇಂದ್ರ ಮೋದಿ ಮತ್ತು ಅಮಿತ್ ಶಾ ಜೋಡಿ 2002 ಗುಜರಾತ್ ಹತ್ಯಾಕಾಂಡ ಮತ್ತು ನಂತರದ ನಕಲಿ ಎನ್‍ಕೌಂಟರ್‍ಗಳಂತಹ ಘೋರ ಅಪರಾಧಗಳಿಂದ ಪಾರಾಗಿದ್ದಾರೆ ಎಂದು ಕಿಡಿಕಾರಿದ್ದಾರೆ.

ಬಸವಧರ್ಮಕ್ಕೆ ಮಾನ್ಯತೆ ಅಗತ್ಯವಿದೆ : ಎ.ಕೆ. ಸುಬ್ಬಯ್ಯ

ಜಗಜ್ಯೋತಿ ಬಸವಣ್ಣ ಪ್ರಚಾರ ಪಡಿಸಿದ ವಿಚಾರ ಅದೊಂದು ಪ್ರತ್ಯೇಕ ಧರ್ಮವೆ ಆಗಿದೆ. ಅದನ್ನು ಬಸವ ಧರ್ಮ ಅಥವಾ ಲಿಂಗಾಯಿತ ಧರ್ಮ ಎಂದು ಮಾನ್ಯತೆ ನೀಡಬೇಕೆಂದು ಮಾನ್ಯರಾದ ಬಸವಪಥದ ಲಿಂಗಾಯಿತರು ಮುಂದಿಟ್ಟಿರು ಬೇಡಿಕೆ ಸಮಂಜಸವಾಗಿದೆ. ಇದನ್ನು ತಾವು ಹೃತ್ಪೂರ್ವಕವಾಗಿ ಬೆಂಬಲಿಸುವುದಾಗಿ ಹಿರಿಯ ಕಾನೂನು ತಜ್ಞರೂ ಆಗಿರುವ ಎ.ಕೆ. ಸುಬ್ಬಯ್ಯ ಹೇಳಿದ್ದಾರೆ. ರಾಜ್ಯದ ಮುಖ್ಯಮಂತ್ರಿಗಳು ಇನ್ನು ಮೀನಾಮೇಷ ಎಣಿಸದೆ ಶೀಘ್ರವೇ ಬಸವ ಧರ್ಮಕ್ಕೆ ಮಾನ್ಯತೆ ನೀಡುವಂತೆ ಶಿಪಾರಸ್ಸು ಮಾಡಬೇಕೆಂದು ಆಗ್ರಹಿಸುವುದಾಗಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವೀರಶೈವರು ಮತ್ತು ಲಿಂಗಾಯಿತರು ಇಬ್ಬರೂ ಒಂದೇ ಆಗಿದ್ದಾರ?. ಅಥವಾ ಬೇರೆಯ? ಎಂಬ ಪ್ರಶ್ನೆ ಇಲ್ಲಿ ಉದ್ಭವಿಸುವುದೇ ಇಲ್ಲ. ಜಗಜ್ಯೋತಿ ಬಸವಣ್ಣನವರು ಸ್ಥಾಪಿಸಿದ್ದು ಒಂದು ಪ್ರತ್ಯೇಕ ಧರ್ಮ ಎನ್ನುವುದಾದರೆ ಅದು ಬಸವಧರ್ಮ ಅಥವಾ ಲಿಂಗಾಯಿತ ಧರ್ಮವಾಗುತ್ತದೆ. ಭಗವಾನ್ ಬುದ್ದ ಸ್ಥಾಪಿಸಿದ್ದು ಹೇಗೆ ಬೌದ್ದ ಧರ್ಮವಾಯಿತೋ, ಜೈನ ತೀರ್ಥಂಕರರು ಸ್ಥಾಪಿಸಿದ್ದು ಹೇಗೆ ಜೈನ ಧರ್ಮವಾಯಿತೋ, ಗುರುನಾನಕ್ ಅವರು ಸ್ಥಾಪಿಸಿದ್ದು, ಹೇಗೆ ಸಿಕ್ಕ ಧರ್ಮವಾಯಿತೋ ಹಾಗೆಯೇ ಬಸವಣ್ಣ ಸ್ಥಾಪಿಸಿದ್ದು ಬಸವ ಧರ್ಮ ಅಥವಾ ಲಿಂಗಾಯಿತ ಧರ್ಮ ಎಂದಾಗಬೇಕಾಗಿರುವುದು ನ್ಯಾಯಸಮ್ಮತವಾಗಿದೆ.

ಇದಕ್ಕೆ ಸರಕಾರ ಮಾನ್ಯತೆ ನೀಡಿ ‘ಪ್ರತ್ಯೇಕ ಧರ್ಮ’ ಎಂಬ ಘೋಷಣೆ ಮಾಡಿದಾಗ ಅದನ್ನು ಒಪ್ಪಿಕೊಳ್ಳುವ ಎಲ್ಲರೂ ಲಿಂಗಾಯಿತ ಧರ್ಮಾನುಯಾಯಿಗಳಾಗುತ್ತಾರೆ. ವೀರಶೈವರು ಜಗಜ್ಯೋತಿ ಬಸವಣ್ಣ ಸ್ಥಾಪಿಸಿದ ಧರ್ಮವನ್ನೆ ಒಪ್ಪಿಕೊಂಡರೆ ಅವರೂ ಲಿಂಗಾಯಿತರೆ ಆಗುತ್ತಾರೆ. ಇಲ್ಲವಾದಲ್ಲಿ ಇಲ್ಲ. ಇದರಲ್ಲಿ ವಿವಾದಕ್ಕೆ ಆಸ್ಪದವೆ ಇಲ್ಲ. ಆದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರಕಾರ ಇನ್ನು ಮೀನಾಮೇಷ ಎಣಿಸದೆ ಬಸವಣ್ಣ ಸ್ಥಾಪಿಸಿದ ಬಸವ ಧರ್ಮವೆಂದು ಮಾನ್ಯತೆ ನೀಡಿ ಶೀಘ್ರಗತಿಯ ಘೋಷಣೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಎ.ಕೆ. ಸುಬ್ಬಯ್ಯ ಅವರು ಕರ್ನಾಟಕ ಸರಕಾರವನ್ನು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News