×
Ad

ಆ.21ರಂದು ದಿಲ್ಲಿ ಚಲೋ : ನೇತಾಜಿ ಸಾವಿನ ರಹಸ್ಯ ಬಯಲುಗೊಳಿಸಲು ಆಗ್ರಹ

Update: 2017-08-18 23:17 IST

ಬೆಂಗಳೂರು, ಆ.18: ನೇತಾಜಿ ಸುಭಾಷ್ ಚಂದ್ರಬೋಸ್‌ರ ನಿಗೂಢ ಸಾವಿಗೆ ಸಂಬಂಧಿಸಿದ ನಿರ್ದಿಷ್ಟ ದಾಖಲೆಗಳನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಹಾಗೂ ನೇತಾಜಿ ನೇತೃತ್ವದಲ್ಲಿ ಆ.21, 1943 ರಲ್ಲಿ ನಡೆದ ದಿಲ್ಲಿ ಚಲೋದಲ್ಲಿ ಮಡಿದ ಸ್ಮರಣಾರ್ಥವಾಗಿ ಆ.21 ರಂದು ಸುಭಾಷಚಂದ್ರಬೋಸ್ ರಿಸರ್ಚ್ ಮತ್ತು ಅಭಿವೃದ್ಧಿ ಟ್ರಸ್ಟ್ ವತಿಯಿಂದ ದಿಲ್ಲಿ ಚಲೋ ಹಮ್ಮಿಕೊಳ್ಳಲಾಗಿದೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟ್ರಸ್ಟ್‌ನ ಉಪಾಧ್ಯಕ್ಷ ಜಿ.ಶಿವಶಂಕರ್, ಇತ್ತೀಚಿಗೆ ಕೇಂದ್ರ ಸರಕಾರ ಬೋಸ್‌ರ ಸಾವಿಗೆ ಸಂಬಂಧಿಸಿದಂತೆ ಹಲವು ದಾಖಲೆಗಳನ್ನು ಬಿಡುಗಡೆ ಮಾಡಿದೆ. ಆದರೆ, ಅವು ಸಂಪೂರ್ಣವಾದ ದಾಖಲೆಗಳು ಅಲ್ಲ. ಹೀಗಾಗಿ ಅವರು ವಿಮಾನ ಅಪಘಾತದಲ್ಲಿ ಮರಣ ಹೊಂದಿದ್ದಾರೆ ಎಂಬುದರ ಕುರಿತು ಸೂಕ್ತ ದಾಖಲೆಗಳನ್ನು ಬಹಿರಂಗ ಪಡಿಸಬೇಕು ಎಂದು ಆಗ್ರಹಿಸಿದರು.

ಬೋಸ್‌ಜಪಾನಿನ ಟೈಕೋನ್ನಲ್ಲಿ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಹೇಳಿರುವುದು ಶುದ್ಧ ಸುಳ್ಳು. ಈ ಕುರಿತು ವಾಜಪೇಯಿ ಪ್ರಧಾನಮಂತ್ರಿಯಾಗಿದ್ದ ಅವಧಿಯಲ್ಲಿ ನ್ಯಾಯಮೂರ್ತಿ ಮುಖರ್ಜಿ ವಿಚಾರಣಾ ಆಯೋಗದಲ್ಲಿ ಉಲ್ಲೇಖಿಸಲಾಗಿದೆ ಮತ್ತು ಅಲ್ಲದೆ, ತೈವಾನ್ ಸರಕಾರ 1945ರ ಆಗಸ್ಟ್ 18 ರಂದು ಆ ಸ್ಥಳದಲ್ಲಿ ಯಾವುದೇ ವಿಮಾನ ಅಪಘಾತ ನಡೆದಿಲ್ಲ ಎಂದು ಲಿಖಿತವಾಗಿ ನೀಡಿದೆ. ಆದರೆ, ಭಾರತ ಸರಕಾರ ನೇತಾಜಿ ಸಾವಿನ ಬಗ್ಗೆ ಯಾವುದೇ ನಿರ್ದಿಷ್ಟ ತೀರ್ಮಾನ ಕೈಗೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹೀಗಾಗಿ, ನೇತಾಜಿ ಸಾವಿನ ರಹಸ್ಯ ಬಯಲು ಮಾಡಬೇಕು ಎಂದು ಆಗ್ರಹಿಸಿ ಪಂಜಾಬ್, ಅಸ್ಸಾಂ, ಕರ್ನಾಟಕ, ಉತ್ತರಾಖಂಡ್, ತಮಿಳುನಾಡು, ಹರ್ಯಾಣ ಸೇರಿದಂತೆ ಹಲವೆಡೆ ಸಮಾವೇಶ ನಡೆಸಲಾಗಿದೆ. ಅದರ ಭಾಗವಾಗಿ ಆ.21 ರಂದು ದಿಲ್ಲಿ ಚಲೋ ಹಮ್ಮಿಕೊಂಡಿದ್ದು, ಬೃಹತ್ ಸಮಾವೇಶ ನಡೆಸಲಾಗುತ್ತಿದೆ ಎಂದು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್‌ನ ಅಧ್ಯಕ್ಷ ವಿ.ಪಿ.ಸನಿ, ಉಪಾಧ್ಯಕ್ಷ ಕೋಮಲದತ್ತ, ಪ್ರಧಾನ ಕಾರ್ಯದರ್ಶಿ ಆರ್.ಕೆ.ಮಿಶ್ರಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News