×
Ad

ನ.3ರಿಂದ ದಿಲ್ಲಿಯಲ್ಲಿ ‘ವರ್ಲ್ಡ್ ಫುಡ್ ಇಂಡಿಯಾ’: ಕೇಂದ್ರ ಸಚಿವೆ ಹರ್ಸಿಮ್ರತ್ ಕೌರ್ ಬಾದಲ್

Update: 2017-08-18 23:21 IST

ಬೆಂಗಳೂರು, ಆ. 18: ಹೊಸದಿಲ್ಲಿಯಲ್ಲಿ ನವೆಂಬರ್ 3ರಿಂದ ಆರಂಭಗೊಳ್ಳಲಿರುವ ‘ವರ್ಲ್ಡ್ ಫುಡ್ ಇಂಡಿಯಾ-2017’ ಭಾರತದ ಆಹಾರ ಸಂಸ್ಕರಣಾ ಸಾಮರ್ಥ್ಯವನ್ನು ಪ್ರದರ್ಶನ, ಆಹಾರ ಸಂಸ್ಕರಣೆ ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿ ಅಂತಾರಾಷ್ಟ್ರೀಯ ಮತ್ತು ಭಾರತೀಯ ಸಂಸ್ಥೆಗಳೊಂದಿಗೆ ಸಂಪರ್ಕ ಕಲ್ಪಿಸಲು ಅವಕಾಶ ಕಲ್ಪಿಸುವ ಉತ್ತಮ ವೇದಿಕೆ ಎಂದು ಕೇಂದ್ರ ಆಹಾರ ಸಂಸ್ಕರಣಾ ಸಚಿವೆ ಹರ್ಸಿಮ್ರತ್ ಕೌರ್ ಬಾದಲ್ ತಿಳಿಸಿದ್ದಾರೆ.

ಶುಕ್ರವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಏರ್ಪಡಿಸಿದ್ದ ರೋಡ್ ಶೋನಲ್ಲಿ ಮಾತನಾಡಿದ ಅವರು, ಆಹಾರ ಸಂಸ್ಕರಣೆಯ ವಿಭಾಗದಲ್ಲಿ 10ಬಿಲಿಯನ್ ವಿದೇಶಿ ಹೂಡಿಕೆಯನ್ನು ನಾವು ಎದುರು ನೋಡುತ್ತಿದ್ದೇವೆ. ಮುಂಬರುವ ವರ್ಷಗಳಲ್ಲಿ ಆಹಾರ ಸಂಸ್ಕರಣಾ ಉದ್ಯಮವು ಅನೇಕ ಪಟ್ಟು ಬೆಳೆಯಲಿದೆ ಎಂದರು.

ಸರಕಾರವು ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸಲು ಅನೇಕ ಯೋಜನೆಗಳನ್ನು ಪರಿಚಯಿಸಿದೆ. 42 ಬೃಹತ್ ಫುಡ್‌ಪಾರ್ಕ್‌ಗಳ ಸ್ಥಾಪನೆ, 5ಲಕ್ಷ ಜನರಿಗೆ ನೇರ ಉದ್ಯೋಗವನ್ನು ಒದಗಿಸಲಿದೆ. ಮಾತ್ರವಲ್ಲ, ಇದರಿಂದ 25ಲಕ್ಷ ರೈತರಿಗೆ ಪ್ರಯೋಜನವಾಗಲಿದೆ. ಈ ಬೃಹತ್ ಫುಡ್ ಪಾರ್ಕ್‌ಗಳು ಹಾಗೂ ಸಂಪದ ಯೋಜನೆಯ ಗುರಿ ರೈತರ ಆದಾಯವನ್ನು ದ್ವಿಗುಣಗೊಳಿಸುವುದಾಗಿದೆ ಎಂದರು.

ರೈತರ ಕಷ್ಟಗಳನ್ನು ಕಡಿಮೆ ಮಾಡಿ, ದೇಶವನ್ನು ಜಾಗತಿಕ ಆಹಾರ ಕಾರ್ಖಾನೆಯನ್ನಾಗಿ ಮಾಡುತ್ತಿರುವ ಕೇಂದ್ರವು ಕೃಷಿ ಯಂತ್ರ ಉತ್ಪಾದನಾ, ಸಂಸ್ಕರಣೆ ಹಾಗೂ ಕೃಷಿ ಸಂಸ್ಕರಣೆ ಸಮುಚ್ಛಯಗಳನ್ನು (ಸಂಪದ) ಪ್ರಾರಂಭಿಸಿದೆ ಹಾಗೂ ಇದು 2020ರ ವೇಳೆಗೆ ಶೇ.2.5ಪಟ್ಟು ಉತ್ಪಾದನೆಯನ್ನು ಹೆಚ್ಚಿಸುವ ಗುರಿ ಹೊಂದಿದೆ. ಪ್ರಸ್ತುತ ನಾವು ಒಟ್ಟು ಕಚ್ಚಾ ವಸ್ತುಗಳ ಕೇವಲ ಶೇ.10ರಷ್ಟಿನ್ನು ಮಾತ್ರ ಸಂಸ್ಕರಣೆ ಮಾಡುತ್ತಿರುವುದರಿಂದ ಆಹಾರ ಸಂಸ್ಕರಣಾ ವಲಯವು ಈ ಗುರಿಯನ್ನು ಸಾಧಿಸಲು ಸಹಾಯ ಮಾಡಬಹುದು ಎಂದರು.

ನಾವು ನಮ್ಮ ದೇಶದಲ್ಲಿ ಆಹಾರ ವ್ಯರ್ಥವಾಗುವುದನ್ನು ತಡೆಯಲು ಕಟ್ಟುನಿಟ್ಟಾಗಿ ಪ್ರಯತ್ನಿಸಬೇಕು. ಪ್ರತಿವರ್ಷ ನಾವು 1ಲಕ್ಷ ಕೋಟಿ ರೂ.ಗಳ ಮೌಲ್ಯದ ಬೆಳೆಯನ್ನು ಕಳೆದುಕೊಳ್ಳುತ್ತಿದ್ದು, ಇದನ್ನು ನಾವು ದೇಶದಾದ್ಯಂತ ಸೂಕ್ತವಾದ ಆಹಾರ ಸಂಸ್ಕರಣಾ ಸೌಲಭ್ಯಗಳನ್ನು ಹೊಂದಿದಲ್ಲಿ ಉಳಿಸಬಹುದಾಗಿದೆ ಎಂದರು.

ಕರ್ನಾಟಕ ರಾಜ್ಯವು ‘ವರ್ಲ್ಡ್ ಫುಡ್ ಇಂಡಿಯಾ-2017’ರಲ್ಲಿ ಕೇಂದ್ರೀಕೃತ ರಾಜ್ಯವಾಗಿರಲಿದೆ. ಪ್ರಧಾನಿ ಮೋದಿ ಹೊಸದಿಲ್ಲಿಯ ವಿಜ್ಞಾನ ಭವನದಲ್ಲಿ ನವೆಂಬರ್ 3ರಿಂದ ಆರಂಭಗೊಳ್ಳಲಿರುವ ವರ್ಲ್ಡ್ ಫುಡ್ ಇಂಡಿಯಾವನ್ನು ಉದ್ಘಾಟಿಸಲಿದ್ದಾರೆ ಎಂದರು.

80ಅಂತಾರಾಷ್ಟ್ರೀಯ ಕಂಪೆನಿಗಳು ವರ್ಲ್ಡ್‌ಫುಡ್ ಇಂಡಿಯಾದಲ್ಲಿ ಪಾಲ್ಗೊಳ್ಳಲಿದ್ದು, 30 ಜಾಗತಿಕ ಸಿಇಓಗಳು ಭಾಗವಹಿಸಲಿದ್ದಾರೆ. ಆಹಾರ ತಜ್ಞರು, ಆಹಾರ ಸಂಸ್ಕರಣಾ ಕಂಪೆನಿಗಳು ಸೇರಿದಂತೆ 25ಕ್ಕಿಂತ ಹೆಚ್ಚು ದೇಶಗಳ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಹಾಜರಿದ್ದ ಕೃಷಿ ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, ಆಹಾರ ಸಂಸ್ಕರಣಾ ಸಚಿವಾಲಯದ ‘ವರ್ಲ್ಡ್ ಫುಡ್ ಇಂಡಿಯಾ’ವನ್ನು ಸ್ವಾಗತಿಸುತ್ತೇವೆ. ಕರ್ನಾಟಕವು ಇದರಲ್ಲಿ ಅತ್ಯಂತ ಉತ್ಸಾಹದಿಂದ ಪಾಲ್ಗೊಳ್ಳಲಿದೆ. ಇದನ್ನು ಯಶಸ್ವಿಯಾಗಿಸಲು ಅಗತ್ಯ ಬೆಂಬಲವನ್ನೂ ನೀಡುತ್ತೇವೆ ಎಂದರು.

ವರ್ಲ್ಡ್ ಫುಡ್ ಇಂಡಿಯಾ ಆಹಾರ ಸಂಸ್ಕರಣಾ ವಲಯದ ಬಲ ಹಾಗೂ ಅವಕಾಶಗಳನ್ನು ಪ್ರದರ್ಶಿಸಲು ಒಂದು ವೇದಿಕೆ. ಕರ್ನಾಟಕವು ಆಹಾರ ಸಂಸ್ಕರಣಾ ಉದ್ಯಮದಲ್ಲಿ ವಿಫುಲ ಅವಕಾಶಗಳನ್ನು ಹೊಂದಿದೆ. ಏಕೆಂದರೆ ರಾಜ್ಯವು ಅನೇಕ ರೀತಿಯ ಹಣ್ಣುಗಳು, ತರಕಾರಿ, ಬೇಳೆಕಾಳುಗಳನ್ನು ಉತ್ಪಾದಿಸುತ್ತದೆ. ಮಾತ್ರವಲ್ಲ ಸೂರ್ಯಕಾಂತಿ, ಕಾಫಿ, ಈರುಳ್ಳಿ, ಅರಿಶಿನ, ದಾಲ್ಚಿನ್ನಿ, ಟೊಮಾಟೋ, ಲವಂಗ ಸೇರಿ ಇನ್ನಿತರ ಪದಾರ್ಥಗಳ ಉತ್ಪಾದನೆಯನ್ನು ಮುಂಚೂಣಿಯಲ್ಲಿದೆ ಎಂದು ವಿವರಿಸಿದರು.

ಆಹಾರದ ಸಗಟು ಮಾರಾಟವು ಸಂಘಟಿತವಾದಾಗ ರೈತರಿಗೆ ಲಾಭವಾಗುತ್ತದೆ ಹಾಗೂ ನಾವು ದೇಶದಲ್ಲಿ ಸಂಘಟಿತ ಆಹಾರ ಸಗಟು ಮಾರಾಟಕ್ಕೆ ಒತ್ತು ನೀಡಬೇಕು. ಆಹಾರ ಸಂಸ್ಕರಣೆ ಕಂಪೆನಿಗಳು ಈ ಸಮ್ಮೇಳನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಅವರು ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News