×
Ad

ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಮುಖ್ಯ ಕಾರ್ಯ ನಿರ್ವಾಹಕರ ಪ್ರಾದೇಶಿಕ ಸಭೆ

Update: 2017-08-18 23:26 IST

ಚಿಕ್ಕಬಳ್ಳಾಪುರ,ಆ.18: ಮಳೆಯ ಕೊರತೆಯಿಂದಾಗಿ ಬಿತ್ತನೆ ಮಾಡಿರುವ ಬೀಜಗಳು ಮೊಳಕೆ ಬಾರದೆ ರೈತರಲ್ಲಿ ಆತಂಕ ಮನೆಮಾಡಿದ್ದು, ಆದ್ದರಿಂದ ರೈತರಿಗೆ ರಿಯಾಯಿತಿ ದರದಲ್ಲಿ ಪಶು ಆಹಾರದ ಜೊತೆಗೆ ಮೇವನ್ನು ವಿತರಿಸಲು ಕೋಚಿಮುಲ್ ನಿರ್ದೇಶಕ ಕೆ.ವಿ. ನಾಗರಾಜ್ ಸರ್ಕಾರವನ್ನು ಒತ್ತಾಯಿಸಿದರು.

ನಗರದ ಕೆಇಬಿ ಸಭಾಂಗಣದಲ್ಲಿ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರಿ ಹಾಲು ಒಕ್ಕೂಟದಿಂದ ಆಯೋಜಿಸಿದ್ದ ಚಿಕ್ಕಬಳ್ಳಾಪುರ ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಮುಖ್ಯ ಕಾರ್ಯ ನಿರ್ವಾಹಕರ ಪ್ರಾದೇಶಿಕ ಸಭೆಯಲ್ಲಿ ಮಾತನಾಡಿದ ಅವರು, ಸತತ ಬರದಿಂದ ಕಂಗೆಟ್ಟಿರುವ ತಾಲೂಕಿನ ನೆರವಿಗೆ ಧಾವಿಸಬೇಕೆಂದು ಸರ್ಕಾರವನ್ನು ಆಗ್ರಹಿಸಿದರು.

ಕಳೆದ 8 ವರ್ಷಗಳಿಂದ ಸತತವಾಗಿ ಹಾಲಿನ ಗುಣಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಕಾಯ್ದುಕೊಂಡಿರುವ ಚಿಕ್ಕಬಳ್ಳಾಪುರ ತಾಲೂಕಿನ ಒಕ್ಕೂಟವು ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಚಾಂಪಿಯನ್ ಪುರಸ್ಕಾರ ಹಾಗೂ ಪ್ರಥಮ ಸ್ಥಾನವನ್ನು ಮುಂದುವರೆಸಲು ಅಧ್ಯಕ್ಷರ ಹಾಗೂ ಸಮಿತಿ ಮತ್ತು ಕಾರ್ಯದರ್ಶಿಗಳ ಸಹಕಾರಿಸಬೇಕೆಂದು ಕೋರಿದರು.

ಕಳೆದ ವರ್ಷ ಬರಗಾಲದಲ್ಲಿ ಉಚಿತವಾಗಿ ಮೇವಿನ ಜೋಳ, ಕಡಿಮೆ ದರದಲ್ಲಿ ಪಶು ಆಹಾರ ಮತ್ತು ಪ್ರತಿ ಲೀಟರ್ ಹಾಲಿಗೆ ಹೆಚ್ಚುವರಿಯಾಗಿ ರೂ. 2.30 ಪೈಸೆಗಳನ್ನು ನೀಡುವ ಮೂಲಕ ರೈತರ ಹಿತವನ್ನು ಒಕ್ಕೂಟ ಕಾಪಾಡಿದೆ ಎಂದ ಅವರು, ಸಂಘಗಳ ಅಧ್ಯಕ್ಷರುಗಳ ಮತ್ತು ಮುಖ್ಯ ಕಾರ್ಯ ನಿರ್ವಾಹಕರ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸವು ಭರವಸೆಯನ್ನು ನೀಡಿದರು.

ಒಕ್ಕೂಟದ ಅಧ್ಯಕ್ಷ ಎನ್.ಜಿ. ಬ್ಯಾಟಪ್ಪ ಮಾತನಾಡಿ, ತಾಲ್ಲೂಕಿನಲ್ಲಿ ಕಳೆದ ವರ್ಷ ಬರದ ಪರಿಸ್ಥಿತಿಯಲ್ಲಿ ಉಚಿತ ಮೇವಿನ ಜೋಳವನ್ನು ನೀಡುವ ಮೂಲಕ ಮೇವಿನ ಕೊರತೆ ನೀಗಿಸಿ ಹಾಲಿನ ಗುಣಮಟ್ಟದ ಪ್ರಮಾಣವನ್ನು ಕಡಿಮೆ ಯಾಗದಂತೆ ಮಾಡಿದಂತೆ ಈ ವರ್ಷವೂ ಮುಂದುವರೆಸಲು ಆಡಳಿತ ಸಮಿತಿಯ ಸಭೆಯಲ್ಲಿ ಚರ್ಚಿಸುವುದಾಗಿ ತಿಳಿಸಿದರು.

ಪ್ರಾಥಮಿಕ ಹಾಲು ಉತ್ಪಾದಕ ಸಹಕಾರ ಸಂಘಗಳ ಅಧ್ಯಕ್ಷರುಗಳಿಗೆ ಗೌರವ ಧನವನ್ನು ಒದಗಿಸಲು ಸರ್ಕಾರಕ್ಕೆ ಪ್ರಸ್ಥಾವನೆಯನ್ನು ಕಳುಹಿಸಿ, ಬೈಲಾ ತಿದ್ದುಪಡಿಗೆ ಕ್ರಮ ಕೈಗೊಳ್ಳುವುದು ಎಂದ ಅವರು. ಮುಖ್ಯ ಕಾರ್ಯನಿರ್ವಾಹಕರಿಗೆ ಒಕ್ಕೂಟದ ಮತ್ತು ಸರ್ಕಾರದಿಂದ ಹಲವು ಸವಲತ್ತುಗಳ ಒದಗಿಸಲು ಕ್ರಮ ಕೈಗೊಂಡಿರುವ ಬಗ್ಗೆ ತಿಳಿಸಿದರು.

ಕೋಚಿಮುಲ್‍ನ ಡಾ. ವಿ.ಎಂ. ರಾಜು, ಡಾ. ರಾಘವನ್, ಡಾ. ಪಾಪೇಗೌಡ, ಗೋಪಾಲ್‍ರಾವ್, ರಮೇಶ್‍ಬಾಬು, ಜಯಚಂದ್ರ, ಸದಾಶಿವ, ಮಂಜುನಾಥ್ ಮತ್ತು ವೇಣು, ನೌಕರರ ಸಂಘದ ಅಧ್ಯಕ್ಷ ರಾಮಕೃಷ್ಣಾರೆಡ್ಡಿ ಮತ್ತಿತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News