ಆತ್ಮವೇ ದೇಹದಲ್ಲಿನ ಚೈತನ್ಯ ಶಕ್ತಿ: ಬಿ.ಕೆ. ವಿಜಯ
ಚಿಕ್ಕಬಳ್ಳಾಪುರ,ಆ.18: ನಗರದಲ್ಲಿನ ಕೆ.ಟಿ. ರಸ್ತೆಯಲ್ಲಿನ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ರಕ್ಷಾ ಬಂಧನ ಹಾಗೂ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ವಿಶ್ವವಿದ್ಯಾಲಯದ ನೆಲಮಂಗಲ ಸೇವಾ ಕೇಂದ್ರದ ಮುಖ್ಯ ಸಂಚಾಲಕರಾದ ಬಿ.ಕೆ. ವಿಜಯ, ಆತ್ಮವೇ ದೇಹದಲ್ಲಿನ ಚೈತನ್ಯ ಶಕ್ತಿಯಾಗಿದ್ದು, ಆದ್ಯಾತ್ಮಿಕತೆಯ ಮೂಲಕ ಆತ್ಮೋನ್ನತಿ ಪಡೆಯುವ ಜೊತೆಗೆ ಪ್ರತಿಯೊಬ್ಬರು ಸದ್ವಿಚಾರಗಳನ್ನು ಅರಿಯಬೇಕು. ಅಲ್ಲದೆ ಜೀವನದ ಜಂಜಾಟದಲ್ಲಿ ಲೌಕಿಕಿ ಸಂಪಾದನೆಯ ಜೊತೆಗೆ ಅಲೌಕಿಕ ಸಂಪಾದನೆಯ ಕಡೆಗೆ ಗಮನ ಹರಿಸಬೇಕು, ಆತ್ಮಿಕ ಸಂಪಾದನೆಯೇ ಅಲೌಕಿಕ ಸಂಪಾದನೆಯಾಗಿದೆ ಎಂದರು.
ದೇವನಹಳ್ಳಿ ಸೇವಾ ಕೇಂದ್ರದ ಸಂಚಾಲಕ ಬಿಕೆ ಸುಖನ್ಯ ಮಾತನಾಡಿ ನಾವೆಲ್ಲರೂ ಒಂದೇ, ನಮಗೆಲ್ಲರಿಗೂ ತಂದೆ ಭಗವಂತ ಒಬ್ಬರೇ ಆಗಿದ್ದಾರೆ ಎನ್ನುವ ಭಾವನೆಯನ್ನು ಬೆಳೆಸಿಕೊಂಡು ವಿಶ್ವ ಭಾತೃತ್ವದ ಸಂಕೇತವಾಗಿರುವ ರಕ್ಷಾ ಬಂಧನವನ್ನು ಎಲ್ಲರೂ ಕಟ್ಟಿಕೊಳ್ಳಬೇಕು. ಉತ್ತಮ ಹವ್ಯಾಸವನ್ನು ಪ್ರತಿಯೊಬ್ಬರೂ ರೂಢಿಸಿಕೊಳ್ಳುವ ದೃಢ ನಿರ್ಧಾರವನ್ನು ಕೈಗೊಳ್ಳಬೇಕಿದೆ ಎಂದರು.
ಸ್ಥಳೀಯ ಸಂಸ್ಥೆ ಸಂಚಾಲಕಿ ರಾಜಯೋಗಿನಿ ಬಿ.ಕೆ. ಲಲಿತ ಮಾತನಾಡಿ, ಶ್ರೀಕೃಷ್ಣ ತನ್ನ ಬಾಲ್ಯದಿಂದಲೇ ಕಾಲಾನುಕ್ರಮವಾಗಿ ಎದುರಾಗುವ ಪರಿಸ್ಥಿತಿಗಳನ್ನು ಸಮರ್ಥ ಹಾಗೂ ಹಸನ್ಮುಖಿಯಾಗಿ ಇತ್ಯರ್ಥ ಮಾಡಿಕೊಳ್ಳುವ ಚಾಕಚಕ್ಯತೆ ಹೊಂದಿದ್ದರು. ಇಂತಹ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಪರಿಸ್ಥಿತಿಗಳನ್ನು ಹಸನ್ಮುಖಿಯಿಂದಲೇ ಎದುರಿಸಬೇಕೆಂದು ತಿಳಿಸಿದರು.