ಜಿಲ್ಲಾ ಕಾಂಗ್ರೆಸ್ ಕಚೇರಿ ಉದ್ಘಾಟನೆ : ಪಕ್ಷ ಸಂಘಟನೆಗೆ ಒಗ್ಗಟ್ಟು ಪ್ರದರ್ಶಿಸಲು ಕರೆ

Update: 2017-08-19 14:45 GMT

ಮಡಿಕೇರಿ,ಆ.19: ಹಿರಿಯರು, ಕಿರಿಯರು, ಜಾತಿ, ಬೇಧವಿಲ್ಲದೆ ಒಗ್ಗಟ್ಟಿನಿಂದ ಪಕ್ಷವನ್ನು ಸಂಘಟಿಸುವ ಮೂಲಕ ಮುಂಬರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಜಿಲ್ಲೆಯ ಎರಡೂ ಕ್ಷೇತ್ರವನ್ನು ತಂತ್ರಗಾರಿಕೆಯಿಂದ ಗೆಲ್ಲಲು ಸಂಕಲ್ಪ ಹೊಂದಿರುವುದಾಗಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಶಿವು ಮಾದಪ್ಪ ತಿಳಿಸಿದ್ದಾರೆ.

 ನಗರದ ರೇಸ್‍ಕೋರ್ಸ್ ಬಳಿಯ ಕಟ್ಟಡದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ನೂತನ ಕಾರ್ಯಾಲಯವನ್ನು ಉದ್ಘಾಟಿಸಿ ಅವರು ಮಾತನಾಡಿದರು. ತಾನು ಕೇವಲ ಯುವಕರನ್ನು ಸಂಘಟಿಸಿ, ಹಿರಿಯರನ್ನು ಕಡೆಗಣಿಸಿ ಪಕ್ಷದ ಚಟುವಟಿಕೆಗಳನ್ನು ಮಾಡುತ್ತಿರುವುದಾಗಿ ತಪ್ಪು ಅಭಿಪ್ರಾಯ ಕೇಳಿ ಬಂದಿದೆ. ಆದರೆ ಹಿರಿಯರನ್ನು ಭೇಟಿಯಾಗಿ ಆಶೀರ್ವಾದ ಪಡೆದು, ಪಕ್ಷದಲ್ಲಿ ಮತ್ತೆ ಸಕ್ರಿಯರಾಗಿ ಅಗತ್ಯ ಸಲಹೆ-ಸೂಚನೆಗಳನ್ನು ನೀಡುವಂತೆ ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದರು.

 2018 ರ ವಿಧಾನ ಸಭಾ ಚುನಾವಣೆಯನ್ನು ಸಮರ್ಥವಾಗಿ ಎದುರಿಸುವ ಮೂಲಕ ಕೊಡಗಿನ ಎರಡೂ ಕ್ಷೇತ್ರಗಳನ್ನು ಗೆದ್ದೇ ತೀರುತ್ತೇವೆ ಎಂದು ಸಂಕಲ್ಪ ಮಾಡಿರುವುದಾಗಿ ಶಿವು ಮಾದಪ್ಪ ಪುನರುಚ್ಚರಿಸಿದರು. ನಮ್ಮ ಈ ದೃಢ ಸಂಕಲ್ಪಕ್ಕೆ ಎಲ್ಲರೂ ಸಹಕಾರ ನೀಡಿ ಒಗ್ಗಟ್ಟನ್ನು ಪ್ರದರ್ಶಿಸಬೇಕೆಂದು ಹೇಳಿದರು.
 ರಾಜ್ಯ ಅರಣ್ಯ ನಿಗಮದ ಉಪಾಧ್ಯಕ್ಷರಾದ ಪದ್ಮಿನಿ ಪೊನ್ನಪ್ಪ ಮಾತನಾಡಿ, ಭಿನ್ನಾಬಿಪ್ರಾಯ, ಆಂತರಿಕ ಮನಸ್ತಾಪಗಳನ್ನು ಬಿಟ್ಟು ಪಕ್ಷದ ಬಲವರ್ಧನೆಗೆ ಒಗ್ಗೂಡಿ ಶ್ರಮಿಸಬೇಕೆಂದರು.

 ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಪಿ.ಕೆ.ಪೊನ್ನಪ್ಪ ಮಾತನಾಡಿದರು. ವೇದಿಕೆಯಲ್ಲಿ ನಗರಸಭಾಧ್ಯಕ್ಷರಾದ ಕಾವೇರಮ್ಮ ಸೋಮಣ್ಣ, ಸೋಮವಾರಪೇಟೆ ಅಧ್ಯಕ್ಷ ಕೆ.ಎಂ.ಲೋಕೇಶ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಪುಷ್ಪಲತಾ, ಕಾರ್ಮಿಕ ಘಟಕದ ನಾಪಂಡ ಮುತ್ತಪ್ಪ, ನಟೇಶ್ ಗೌಡ, ಜಿಲ್ಲಾ ಕಾಂಗ್ರೆಸ್‍ನ ಪ್ರಧಾನ ಕಾರ್ಯದರ್ಶಿ ವಿ.ಪಿ.ಸುರೇಶ್ ಮತ್ತಿತರ ಪ್ರಮುಖರು ಹಾಜರಿದ್ದರು. ಫೋಟೋ :: ಕಾಂಗ್ರೆಸ್ ಆಫೀಸ್ 1, 2

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News