ಆ.22 ರಂದು ಬೆಂಗಳೂರಿನ ಶಿಕ್ಷಣ ಆಯುಕ್ತರ ಕಛೇರಿ ಮುತ್ತಿಗೆ
ಕಡೂರು ಆ. 19: ಕಳೆದ ಹಲವು ವರ್ಷಗಳಿಂದ ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿರುವ ಅಧ್ಯಾಪಕರನ್ನು ಸರ್ಕಾರ ಬೀದಿಪಾಲು ಮಾಡಿದೆ ಎಂದು ಆರೋಪಿಸಿ ಆ.22 ರಂದು ಬೆಂಗಳೂರಿನ ಶಿಕ್ಷಣ ಆಯುಕ್ತರ ಕಛೇರಿ ಮುತ್ತಿಗೆ ಕಾರ್ಯಕ್ರಮ ನಡೆಸಲಾಗುವುದು.
ಈ ಬಗ್ಗೆ ಅತಿಥಿ ಉಪನ್ಯಾಸಕರುಗಳಾದ ಬಿ.ಜಿ. ಚಂದ್ರಮೌಳಿ, ರವಿ, ಶಿವಕುಮಾರ್, ಚಂದ್ರಶೇಖರ್, ರಾಜಪ್ಪ ಅವರುಗಳು ಪತ್ರಿಕಾ ಹೇಳಿಕೆಯನ್ನು ನೀಡಿ, ಸುಮಾರು 10 ಮತ್ತು 15 ವರ್ಷಗಳಿಂದ ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದೇವೆ. ಆದರೆ ಗುಣಮಟ್ಟದ ಶಿಕ್ಷಣ ಹೆಸರಿನಲ್ಲಿ ಸೇವಾ ಹಿರಿತನ ಮತ್ತು ವಯೋಮಿತಿಯನ್ನು ಕಡೆಗಳಿಸಲಾಗಿದೆ. ಕಳೆದ ಹಲವು ವರ್ಷಗಳಿಂದ ಉಪನ್ಯಾಸಕರು ಸೇವಾ ಭದ್ರತೆಯನ್ನು ನೀಡಲು ಒತ್ತಾಯಿಸಿ ಪ್ರತಿಭಟನೆಗಳನ್ನು ನಡೆಸಿದ್ದರೂ ಪ್ರಯೋಜನವಾಗಿಲ್ಲ ಎಂದು ದೂರಿದ್ದಾರೆ.
ಈ ಸಂಬಂಧ ಅತಿಥಿ ಉಪನ್ಯಾಸಕರು ಆಯುಕ್ತರ ಕಛೇರಿ ಮತ್ತು ಶಿಕ್ಷಣ ಸಚಿವಾಲಯದ ಕಛೇರಿಗೆ ಸಾಕಷ್ಟು ಬಾರಿ ಸುತ್ತಿದರೂ ಅತಿಥಿ ಉಪನ್ಯಾಸಕರ ಮುಂದುವರಿಕೆ ಮರೀಚಿಕೆಯಾಗಿದೆ. ವಾರದೊಳಗೆ ಪರಿಶೀಲಿಸಲಾಗುವುದು ಎಂಬ ಉತ್ತರ ಅಧಿಕಾರಿಗಳಿಂದ ಸಿಕ್ಕ ಭರವಸೆಯಾಗಿದೆ ಎಂದಿದ್ದಾರೆ.
ಆದ್ದರಿಂದ ರಾಜ್ಯದ ಎಲ್ಲಾ ಜಿಲ್ಲೆಗಳ ಅತಿಥಿ ಉಪನ್ಯಾಸಕರು ಆಯುಕ್ತರ ಕಛೇರಿ ಮುತ್ತಿಗೆ ಕಾರ್ಯಕ್ರಮಕ್ಕೆ ಪಾಲ್ಗೊಳ್ಳಲು ಕೋರಿರುವ ಇವರುಗಳು ಕಳೆದ ಸಾಲಿನಲ್ಲಿ ಸೇವೆ ಸಲ್ಲಿಸಿದ ಅತಿಥಿ ಉಪನ್ಯಾಸಕರುಗಳನ್ನು ಸೇವಾ ಜ್ಯೇಷ್ಠತೆ ಮತ್ತು ವಯೋಮಿತಿ ಆಧಾರದ ಮೇಲೆ ಪರಿಗಣಿಸಲಾಗುವುದು ಹಾಗೂ ಅಂಗವಿಕಲರಿಗೆ ಆದ್ಯತೆ ನೀಡುವುದರ ಬಗ್ಗೆ ಒತ್ತಾಯಿಸಲಾಗುವುದು ಎಂದು ತಿಳಿಸಿದ್ದಾರೆ.