ಇತಿಹಾಸವನ್ನು ತಿರುಚಿ ಸುಳ್ಳು ಬರೆಯುವುದರಲ್ಲಿ ಚಿದಾನಂದಮೂರ್ತಿ ನಿಸ್ಸೀಮ: ನಾಡೋಜ ಡಾ.ಪಾಟೀಲ ಪುಟ್ಟಪ್ಪ
ದಾವಣಗೆರೆ, ಆ. 19: ಟಿಪ್ಪು ಸುಲ್ತಾನ್ ಯಾರನ್ನೂ ಮತಾಂತರ ಮಾಡಿಲ್ಲ. ಇತಿಹಾಸವನ್ನು ತಿರುಚಿ ಸುಳ್ಳು ಬರೆಯುವುದರಲ್ಲಿ ಚಿದಾನಂದಮೂರ್ತಿ ನಿಸ್ಸೀಮ ಎಂದು ನಾಡೋಜ ಡಾ. ಡಾ.ಪಾಟೀಲ ಪುಟ್ಟಪ್ಪ ಹೇಳಿದರು.
ನಗರದ ಕುವೆಂಪು ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಆರೂಢ ದಾಸೋಹಿ ಶರಣ ಮಾಗನೂರು ಬಸಪ್ಪ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಟಿಪ್ಪುಸುಲ್ತಾನ್ ಯಾವುದೇ ಧರ್ಮದವರನ್ನು ಮತಾಂತರವಾಗುವಂತೆ ಪ್ರೇರೇಪಿಸಿರಲಿಲ್ಲ. ಅವನೊಬ್ಬ ಅದ್ಭುತ ಅಭಿವೃದ್ಧಿಕಾರ. ಕುಡಿತಕ್ಕೆ ದಾಸರಾಗಿ ನೆಮ್ಮದಿ ಹಾಳು ಮಾಡಿಕೊಳ್ಳುತ್ತಿದ್ದವರನ್ನು ಕಂಡು ಮದ್ಯಪಾನಕ್ಕೆ ಬಹಿಷ್ಕಾರ ಹಾಕಿದ್ದ. ಲಾಲ್‍ಬಾಗ್ ನಿರ್ಮಿಸಿದ್ದು, ಮೈಸೂರ್ ಸಿಲ್ಕ್ ತಂದಿದ್ದು ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದವನು ಟಿಪ್ಪುಸುಲ್ತಾನ್ ಎಂದರು.
ಇಂತಹ ಮಹಾನ್ ನಾಯಕನ ನೆನಪಿಸುವ ಕಾರ್ಯ ಇಂದು ಆಗುತ್ತಿಲ್ಲ. ಟಿಪ್ಪುವಿನ ದಿನಾಚರಣೆ ಮಾಡಿದರೆ ಅಂತಹವರನ್ನು ದ್ವೇಷಿಸಲಾಗುತ್ತಿದೆ. ಉತ್ತಮ ಕೆಲಸವನ್ನು ಯಾರೇ ಮಾಡಿದರೂ ಅದನ್ನು ಬೆಂಬಲಿಸುವ ಗುಣ ಸಮಾಜದಲ್ಲಿ ಬೆಳೆಯಬೇಕಿದೆ ಎಂದು ಹೇಳಿದರು.
ಇತ್ತೀಚಿನ ಪತ್ರಿಕೋದ್ಯಮ ತನ್ನ ಮೌಲ್ಯವನ್ನೇ ಕಳೆದುಕೊಳ್ಳುತ್ತಿದೆ. ಉತ್ತಮವಾದುದ್ದನ್ನು ಮರೆಮಾಚಿ, ಕೆಟ್ಟದ್ದನ್ನೇ ಪದೇಪದೇ ವೈಭವೀಕರಿಸುವ ಗುಣ, ಪ್ರವೃತ್ತಿ ಹೆಚ್ಚಾಗುತ್ತಿದೆ. ಇತ್ತೀಚಿನ ಸಮೀಕ್ಷೆ ಪ್ರಕಾರ ಭಾರತದ ಪತ್ರಿಕೋದ್ಯಮದಲ್ಲಿ ಅತೀ ಹೆಚ್ಚಿನ ಭ್ರಷ್ಟತೆ ಇರುವುದಾಗಿ ತಿಳಿದುಬಂದಿದೆ. ಆದರೆ, ಈ ವರದಿಯನ್ನು ಅನೇಕ ಮಾಧ್ಯಮಗಳು ಪ್ರಸಾರ ಮಾಡಲೇ ಇಲ್ಲ. ಮಾಧ್ಯಮ ಎಂದಿಗೂ ಮಾರಾಟದ ವಸ್ತುವಾಗಬಾರದು ಎಂದ ಅವರು, ಮುಂದಿನ ದಿನಗಳಲ್ಲಿ ಪತ್ರಿಕೆಗಳು ಇಲ್ಲವಾಗುವ ಸ್ಥಿತಿ ಕಾಣಿಸಿಕೊಂಡಿದೆ. ಈಗಾಗಲೇ ಅಮೇರಿಕಾದಲ್ಲಿ ಪತ್ರಿಕೆಗಳು ಉಳಿದಿಲ್ಲ. ಆದ್ದರಿಂದ ಪತ್ರಿಕೆಗಳನ್ನು ಜನರು ನಂಬುವಂತಾಗಲೂ ಸದಾ ವಸ್ತುನಿಷ್ಠ ವರದಿಗಳನ್ನು ಜನತೆಗೆ ತಿಳಿಸಬೇಕು. ಆಗ ಮಾತ್ರ ಉತ್ತಮ ಚಾರಿತ್ರ್ಯವುಳ್ಳ ಪತ್ರಿಕೆಗಳು ಉಳಿಯಲು ಸಾಧ್ಯವೆಂದರು.
ಸರ್ಕಾರಕ್ಕೆ 27 ಹಳ್ಳಿಗಳನ್ನಾಳಿದ ಪಾಳೆಗಾರ ಕೆಂಪೇಗೌಡರ ಹೆಸರು ಮಾತ್ರ ನೆನಪಿದ್ದು, ಕೆಂಪೇಗೌಡರ ಹೆಸರನ್ನು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಇಡಲಾಗಿದೆ. ಆದರೆ, ದೊಡ್ಡ ದೊಡ್ಡ ಸಾಮ್ರಾಜ್ಯವನ್ನಾಳಿದ ಚಾಲುಕ್ಯರು, ಕದಂಬರು, ಹೊಯ್ಸಳರಂತವರ ಹೆಸರು ನೆನಪಿಗೆ ಬರುವುದಿಲ್ಲ ಎಂದರು.
ಕಮ್ಮತ್ತಹಳ್ಳಿ ಪಾಂಡೋಮಟ್ಟಿ ವಿರಕ್ತಮಠದ ಗುರುಬಸವ ಶ್ರೀಗಳು ಪಾಟೀಲ ಪುಟ್ಟಪ್ಪರಿಗೆ ಪ್ರಶಸ್ತಿ ಪ್ರದಾನ ಮಾಡಿ, ಮಾತನಾಡಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಎಚ್.ಎಸ್. ಮಂಜುನಾಥ ಕುರ್ಕಿ ಪರಿಚಯ ನುಡಿಗಳನ್ನಾಡಿದರು. ಮಾಗನೂರು ಬಸಪ್ಪ ಪ್ರತಿಷ್ಠಾನದ ಅಧ್ಯಕ್ಷ ಎಂ.ಬಿ. ಸಂಗಮೇಶ್ವರಗೌಡರು ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಎಸ್.ಟಿ. ಶಾಂತಗಂಗಾಧರ್ ಅಭಿನಂದನಾ ನುಡಿಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಸುನಂದಾದೇವಿ ಮತ್ತಿತರರಿದ್ದರು. ಮಾಗನೂರು ಬಸಪ್ಪ ಶಾಲಾ ಮಕ್ಕಳು ಪ್ರಾರ್ಥಿಸಿದರು. ವಾಮದೇವಪ್ಪ ಸ್ವಾಗತಿಸಿದರು.