×
Ad

ನಾಲ್ಕನೇ ದಿನವೂ ಮುಂದುವರೆದ ಅಂಚೆ ಸೇವಕರ ಧರಣಿ

Update: 2017-08-19 23:06 IST

ಚಿಕ್ಕಬಳ್ಳಾಪುರ, ಆ. 19: ಜಿಡಿಎಸ್ ನೌಕರರಿಗೆ 8 ಗಂಟೆ ಕೆಲಸವನ್ನು ಖಾಯಂಗೊಳಿಸುವುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಸಲು ಒತ್ತಾಯಿಸಿ ಅಖಿಲ ಭಾರತ ಗ್ರಾಮೀಣ ಅಂಚೆ ಸೇವಕರ ಸಂಘವು ಕೈಗೊಂಡಿರುವ ಅನಿಧಿಷ್ಟಾವಧಿ ಧರಣಿಯ ನಾಲ್ಕನೇ ದಿನವಾದ ಶನಿವಾರದಂದು ಜಿಡಿಎಸ್ ನೌಕರರು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಕಳೆದ ಆ.16 ರಿಂದ ಸೇವೆಯನ್ನು ಸ್ಥಗಿತಗೊಳಿಸುವ ಮೂಲಕ ಅಂಚೆ ನೌಕರರ ಬೇಡಿಕೆಗಳ ಈಡೇರಿಸಲು ಒತ್ತಾಯಿಸಿ ನಗರದ ಪ್ರಧಾನ ಅಂಚೆ ಕಚೇರಿ ಎದುರು ಅನಿರ್ಧಿಷ್ಟಾವಧಿ ಧರಣಿಯ ಆರಂಭಿಸಿದ್ದ ಜಿಡಿಎಸ್ ನೌಕರರು, ನಾಲ್ಕನೇ ದಿನವಾದ ಶನಿವಾರದಂದು ಪ್ರಧಾನ ಅಂಚೆ ಕಚೇರಿಯಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಅಲ್ಲದೆ ನಗರದ ಸರ್‍ಎಂವಿ ವೃತ್ತ ಹಾಗೂ ಅಂಬೇಡ್ಕರ್ ವೃತ್ತಗಳಲ್ಲಿ ಮಾನವ ಸರಪಳಿ ನಿರ್ಮಿಸುವ ಮೂಲಕ ರಸ್ತೆ ತಡೆ ನಡೆಸುವ ಮೂಲಕ ಆಕ್ರೋಷ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ವಿ. ಬಾಲಕೃಷ್ಣ, ಕಳೆದ ನಾಲ್ಕು ದಿನಗಳಿಂದ ಕೈಗೊಂಡಿರುವ ಅನಿಧಿಷ್ಟಾವಧಿ ಧರಣಿಗೆ ಯಾವುದೇ ರೀತಿಯಲ್ಲಿ ಸ್ಪಂಧಿಸದ ಸರ್ಕಾರದ ಧೋರಣೆಯನ್ನು ಖಂಡಿಸಿದ ಅವರು, ಇನ್ನಾದರೂ ಸರ್ಕಾರ ಎಚ್ಚೆತ್ತುಕೊಳ್ಳದಿದ್ದಲ್ಲಿ ಉಗ್ರ ಹೋರಾಟಕ್ಕೆ ಮುಂದಾಗುವುದಾಗಿ ಎಚ್ಚರಿಸಿದರು.

7ನೇ ವೇತನ ಆಯೋಗದ ವರದಿಯಲ್ಲಿ ಅಖಿಲ ಭಾರತ ಗ್ರಾಮೀಣ ಅಂಚೆ ಸೇವಕರ ಸಂಘ ನೀಡುವ ಮಾರ್ಪಾಡುಗಳನ್ನು ಜಾರಿಗೊಳಿಸುವುದು, 4 ಗಂಟೆಗಳ ಬದಲಾಗಿ 8 ಗಂಟೆಗಳ ಕೆಲಸ ನಿಗಧಿಗೊಳಿಸುವುದು, ದೆಹಲಿ ಮತ್ತು ಮದ್ರಾಸ್ ನ್ಯಾಯಲಯ(ಸಿಎಟಿ)ಗಳ ತೀರ್ಪಿನಂತೆ ಜಿಡಿಪಿ ನೌಕರರಿಗೆ ಪಿಂಚಣಿ ನೀಡುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಗೋಪಾಲ್, ಖಜಾಂಚಿ ವಿಜಯ್ ಶಂಕರ್, ಜಿ.ಎಂ. ವೆಂಕಟರೆಡ್ಡಿ, ಕುಮಾರ್, ಶ್ರೀನಿವಾಸ್, ಎಂ.ವೆಂಕಟೇಶ್, ನರಸಿಂಹಮೂರ್ತಿ, ಮಂಜು, ಶಾಂತಕುಮಾರಿ, ಲಕ್ಷ್ಮೀ, ಪ್ರಭಾವತಿ, ಉಮಾ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News