ಶಿವಮೊಗ್ಗ: ಅಪಾಯಕಾರಿ ಫುಟ್‍ಪಾತ್ ಸ್ಲ್ಯಾಬ್‍ಗೆ ಪಾಲಿಕೆಯಿಂದ ಕೊನೆಗೂ ಸಿಕ್ಕಿತು ಮುಕ್ತಿ!
ಶಿವಮೊಗ್ಗ, ಆ. 20: ನಗರದ ಗಾಂಧಿಬಜಾರ್ ರಸ್ತೆಯ ಪ್ರವೇಶ ದ್ವಾರದ ಸಮೀಪ ಪಾದಚಾರಿಗಳ ಪಾಲಿಗೆ ಅಪಾಯಕಾರಿಯಾಗಿ ಪರಿಣಮಿಸಿದ್ದ ಫುಟ್‍ಪಾತ್ ಕಾಂಕ್ರಿಟ್ ಸ್ಲ್ಯಾಬ್‍ನ್ನು ಮಹಾನಗರ ಪಾಲಿಕೆ ಆಡಳಿತ ಕೊನೆಗೂ ದುರಸ್ತಿಗೊಳಿಸಿದೆ. ಇದು ಸ್ಥಳೀಯರ ಮೆಚ್ಚುಗೆಗೆ ಪಾತ್ರವಾಗಿದೆ.
ನಗರದಲ್ಲಿ ಅತೀ ಹೆಚ್ಚು ಪಾದಚಾರಿಗಳು ಓಡಾಡುವ ರಸ್ತೆ ಎಂಬ ಖ್ಯಾತಿ ಗಾಂಧಿ ಬಜಾರ್‍ದ್ದಾಗಿದೆ.
ಕಳೆದ ಕೆಲ ತಿಂಗಳುಗಳ ಹಿಂದೆ ಕಾಂಕ್ರಿಟ್ ಸ್ಲ್ಯಾಬ್‍ವೊಂದು ಹಾಳಾಗಿ ಗುಂಡಿ ಬಿದ್ದಿತ್ತು. ಸ್ಥಳೀಯರು ಈ ವಿಷಯವನ್ನು ವಾರ್ಡ್ ಎಂಜಿನಿಯರ್ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಇದರಿಂದ ದುಃಸ್ಥಿತಿಯಲ್ಲಿದ್ದ ಸ್ಲ್ಯಾಬ್ ಬಳಿ ಗೊತ್ತಿಲ್ಲದೆ ಕಾಲಿಟ್ಟು ಎಷ್ಟೋ ಪಾದಚಾರಿಗಳು ಗಾಯಗೊಂಡಿದ್ದರು.
ಪಾಲಿಕೆಯ ನಿರ್ಲಕ್ಷ್ಯದ ಬಗ್ಗೆ ಇತ್ತೀಚೆಗೆ ಸ್ಥಳೀಯರು ಪತ್ರಕರ್ತರಿಗೆ ಮಾಹಿತಿ ನೀಡಿದ್ದರು. ಈ ಕುರಿತಂತೆ ಪತ್ರಿಕೆಗಳಲ್ಲಿ ಸಚಿತ್ರ ವರದಿ ಕೂಡ ಬಿತ್ತರವಾಗಿತ್ತು. ಈ ವರದಿಯನ್ನು ಗಮನಿಸುತ್ತಿದ್ದಂತೆ ಪಾಲಿಕೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಚಾಮರಾಜ್‍ರವರು ಸಂಬಂಧಿಸಿದ ವಾರ್ಡ್ ಇಂಜಿನಿಯರ್‍ನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕಾಲಮಿತಿಯೊಳಗೆ ಸಮಸ್ಯೆ ಪರಿಹರಿಸಿ ತಮಗೆ ಮಾಹಿತಿ ನೀಡುವಂತೆ ಸೂಚಿಸಿದ್ದಾರೆ.
ಇದರಿಂದ ಎಚ್ಚೆತ್ತುಕೊಂಡ ಸಂಬಂಧಿಸಿದ ಇಂಜಿನಿಯರ್ ಕೆಲವೇ ಗಂಟೆಗಳಲ್ಲಿ ದುರಸ್ತಿಗೀಡಾದ ಕಾಂಕ್ರಿಟ್ ಸ್ಲ್ಯಾಬ್‍ನ್ನು ತೆಗೆದು, ಹೊಸ ಸ್ಲ್ಯಾಬ್ ಅಳವಡಿಸಿದ್ದಾರೆ. ಸಮಸ್ಯೆ ಗಮನಕ್ಕೆ ಬರುತ್ತಿದ್ದಂತೆ ತ್ವರಿತಗತಿಯಲ್ಲಿ ಸ್ಪಂದಿಸುವ ಕೆಲಸ ಮಾಡಿದ ಪಾಲಿಕೆ ಇಂಜಿನಿಯರ್ ಚಾಮರಾಜ್‍ರವರ ಕ್ರಮಕ್ಕೆ ಸ್ಥಳೀಯರು ಅತೀವ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.