×
Ad

ರಕ್ತದಾನ ಮಾಡುವ ಮೂಲಕ ರಾಜೀವ್ ಗಾಂಧಿ ಜನ್ಮ ದಿನ ಆಚರಿಸಿದ ಶಿವಮೊಗ್ಗ ಯುವ ಕಾಂಗ್ರೆಸ್ ಕಾರ್ಯಕರ್ತರು

Update: 2017-08-20 17:22 IST

ಶಿವಮೊಗ್ಗ, ಆ. 20: ಮಾಜಿ ಪ್ರಧಾನಮಂತ್ರಿ, ದಿವಂಗತ ರಾಜೀವ್ ಗಾಂಧಿಯವರ 73 ನೆ ಹುಟ್ಟು ಹಬ್ಬದ ಅಂಗವಾಗಿ ಭಾನುವಾರ ನಗರದ ರೋಟರಿ ರಕ್ತನಿಧಿ ಕೇಂದ್ರದಲ್ಲಿ ರಕ್ತದಾನ ಶಿಬಿರವನ್ನು ಶಿವಮೊಗ್ಗ ಯುವ ಕಾಂಗ್ರೆಸ್ ಘಟಕ ಹಮ್ಮಿಕೊಂಡಿತ್ತು. ರಕ್ತದಾನ ಮಾಡುವ ಮೂಲಕ ಕಾರ್ಯಕರ್ತರು ಅರ್ಥಪೂರ್ಣವಾಗಿ ರಾಜೀವ್ ಗಾಂಧಿ ಹುಟ್ಟುಹಬ್ಬ ಆಚರಿಸಿದರು.

ರಾಜ್ಯ ಮುಖಂಡ ಕೆ. ರಂಗನಾಥ್‍ರವರು ಮಾತನಾಡಿ, 'ಎಂ.ಪ್ರವೀಣ್‍ಕುಮಾರ್ ನೇತೃತ್ವದಲ್ಲಿ ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ಘಟಕವು ನಿರಂತರವಾಗಿ ಅರ್ಥಪೂರ್ಣ ಹಾಗೂ ಸಮಾಜಮುಖಿ ಕಾರ್ಯಕ್ರಮ ಆಯೋಜಿಸಿಕೊಂಡು ಬರುವ ಮೂಲಕ ಇತರೆ ಸಂಘಟನೆಗಳಿಗೆ ಮಾದರಿಯಾಗಿ ನಿಂತಿದೆ. ದಿವಂಗತ ರಾಜೀವ್ ಗಾಂಧಿಯವರ ಜನ್ಮ ದಿನದಂದು ಸಂಘಟನೆಯ ಕಾರ್ಯಕರ್ತರು ರಕ್ತದಾನ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಸಂಗತಿಯಾಗಿದೆ. ಮುಂದಿನ ದಿನಗಳಲ್ಲಿ ಪಕ್ಷದ ಸಂಘಟನೆಯ ಜೊತೆ ಜೊತೆಯಲ್ಲಿಯೇ ಈ ರೀತಿಯ ಮತ್ತಷ್ಟು ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಿ' ಎಂದು ಕಾರ್ಯಕರ್ತರಿಗೆ ತಿಳಿಸಿದರು.

 ಜಿಲ್ಲಾಧ್ಯಕ್ಷ ಎಂ. ಪ್ರವೀಣ್‍ಕುಮಾರ್ ಮಾತನಾಡಿ, 'ಕಾರ್ಯಕರ್ತರೇ ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಲು ಮುಂದೆ ಬರುತ್ತಿದ್ದಾರೆ. ಇದು ಯುವ ಕಾಂಗ್ರೆಸ್ ಕಾರ್ಯಕರ್ತರ ಸಾಮಾಜಿಕ ಕಳಕಳಿಗೆ ಸಾಕ್ಷಿಯಾಗಿದೆ. ಜೊತೆಗೆ ಸಂಕಷ್ಟದಲ್ಲಿರುವವರ ಜೊತೆಗೆ ಕಾರ್ಯಕರ್ತರು ಸದಾ ಕಾಲ ನಿಲ್ಲುತ್ತಾರೆಂಬುವುದಕ್ಕೆ ಈ ಕಾರ್ಯಕ್ರಮ ಸಾಕ್ಷಿಯಾಗಿದೆ. ರಕ್ತದಾನ ಮಾಡಿದ ಎಲ್ಲ ಕಾರ್ಯಕರ್ತರಿಗೂ ತಾವು ಅಭಿನಂದನೆ ಸಲ್ಲಿಸುವುದಾಗಿ' ಹೇಳಿದರು. 

ಶಿವಮೊಗ್ಗ ನಗರ ಘಟಕದ ಅಧ್ಯಕ್ಷ ಹೆಚ್.ಪಿ.ಗಿರೀಶ್ ಮಾತನಾಡಿ, 'ಪಕ್ಷದ ಸಂಘಟನೆಯ ಜೊತೆ ಜೊತೆಗೆ ವಿಭಿನ್ನ ಹಾಗೂ ಜನಪರ ಕಾರ್ಯಕ್ರಮಗಳನ್ನು ಸಂಘಟನೆ ಹಮ್ಮಿಕೊಳ್ಳುತ್ತಿದೆ. ಇದಕ್ಕೆ ಪಕ್ಷದ ಮುಖಂಡರು ಕೂಡ ಸಹಕಾರ ನೀಡುತ್ತಿದ್ದು, ಸಾರ್ವಜನಿಕರು ಕೂಡ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ' ಎಂದರು.

ಈ ವೇಳೆ ಪಕ್ಷದ ರಾಜ್ಯ ಮುಖಂಡ ಕೆ. ರಂಗನಾಥ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಪ್ರವೀಣ್‍ಕುಮಾರ್, ನಗರಾಧ್ಯಕ್ಷ ಹೆಚ್.ಪಿ.ಗಿರೀಶ್, ರಾಜ್ಯ ಕಾರ್ಯದರ್ಶಿಗಳಾದ ಕಿರಣ್, ಟಿ.ವಿ.ರಂಜಿತ್, ಯುವ ಮುಖಂಡ ಚಂದು ಸೇರಿದಂತೆ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಹಲವು ಮುಖಂಡರು, ಕಾರ್ಯಕರ್ತರು ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News