ಮೂರು ಮದುವೆ: ನಾದಿನಿಯ ಜೊತೆ ಪರಾರಿಯಾದ ಆರೋಪಿ ಬಂಧನ
ಬಣಕಲ್, ಆ.20: ಮೂವರು ಯುವತಿಯರನ್ನು ಪ್ರೇಮಿಸಿ ವಿವಾಹವಾಗಿದ್ದ ಚಪಲಗಾರ ಆರೋಪಿ ಎನ್.ಆರ್.ಪುರ ತಾಲೂಕಿನ ಮಡಬೂರು ಗ್ರಾಮದ ರವಿ ಗುತ್ತಪ್ಪ ಎಂಬಾತನನ್ನು ಬಣಕಲ್ ಪೋಲಿಸರು ಬಂಧಿಸಿದ್ದಾರೆ.
ಎನ್.ಆರ್.ಪುರ ತಾಲೂಕಿನ ಮಡಬೂರು ವಾಸಿ ರವಿಗುತ್ತಪ್ಪ ಆರಂಭದಲ್ಲಿ ಒಬ್ಬಾಕೆಯನ್ನು ಮದುವೆಯಾಗಿದ್ದರು. ಕೆಲವು ಕಾಲ ಸಂಸಾರ ನಡೆಸಿ ಅವರಿಗೆ ಮೂವರು ಮಕ್ಕಳಿದ್ದಾರೆ. ಅವರನ್ನು ಬಿಟ್ಟು ಅಲ್ಲಿಂದ ಮೂಡಿಗೆರೆ ತಾಲೂಕಿನ ಬಣಕಲ್‍ಗೆ ಕೆಲಸ ಅರಸಿಕೊಂಡು ಬಂದಿದ್ದ. ಬಣಕಲ್ ಬಳಿಯ ದಾಸರಹಳ್ಳಿಯ ಸುಬ್ಬಯ್ಯ ಅವರ ಪುತ್ರಿಯನ್ನು (ಪವಿತ್ರಾ) ಪ್ರೀತಿ ಮಾಡಿ ನಂಬಿಸಿ ಮದುವೆಯಾಗಿದ್ದಾನೆ.
ಅಲ್ಲಿಂದ ಛಪಲಗಾರ ರವಿಗುತ್ತಪ್ಪ ತನ್ನ ಎರಡನೇ ಪತ್ನಿಯ ತಂಗಿ ನಾದಿನಿ (ಚೈತ್ರಾ) ಜೊತೆ ಪ್ರೀತಿಸುವುದಾಗಿ ನಂಬಿಸಿ ಅಲ್ಲಿಂದ ಪರಾರಿಯಾಗಿದ್ದ. ಆಕೆಯನ್ನು ತರೀಕೆರೆಯ ದೇವಸ್ಥಾನದಲ್ಲಿ ವಿವಾಹವಾಗಿ ಒಂದು ಮಗುವಿನ ತಂದೆಯಾಗಿ ತರೀಕೆರೆಯಲ್ಲಿ ತಲೆಮರೆಸಿಕೊಂಡಿದ್ದನು. ಅಳಿಯ ರವಿಗುತ್ತಪ್ಪ ಹಾಗೂ ತನ್ನ ಮಗಳು ಕಾಣೆಯಾಗಿರುವುದಾಗಿ ದಾಸರಹಳ್ಳಿಯ ಸುಬ್ಬಯ್ಯ ಡಿಸೆಂಬರ್ ತಿಂಗಳಲ್ಲಿ ಬಣಕಲ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಆದರೆ ಈವರೆಗೂ ಮೂವರು ಪತ್ನಿಯರ ಪತಿ ರವಿ ಗುತ್ತಪ್ಪ ಪೋಲಿಸರಿಗೆ ಚಳ್ಳೆಹಣ್ಣು ತಿನ್ನಿಸಿ ತಲೆಮರೆಸಿಕೊಂಡಿದ್ದ. ಆದರೆ ಬಣಕಲ್ ಪೋಲಿಸರು ಶನಿವಾರ ಆರೋಪಿ ರವಿಗುತ್ತಪ್ಪನನ್ನು ತರೀಕೆರೆಯಲ್ಲಿ ಪತ್ತೆ ಹಚ್ಚಿ ಬಂಧಿಸಿದ್ದಾರೆ. ರವಿ ಗುತ್ತಪ್ಪನೇ ನನ್ನನ್ನು ಬಲವಂತಾಗಿ ಕರೆದೊಯ್ದು ಮದುವೆಯಾದ ಎಂದು ಸುಬ್ಬಯ್ಯರವರ ಪುತ್ರಿ ರವಿ ಗುತ್ತಪ್ಪನ ನಾದಿನಿಯು ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಪೊಲೀಸರು ರವಿಗುತ್ತಪ್ಪನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಪಿಎಸ್ಸೈ ಮೂರ್ತಿ, ಸಿಬ್ಬಂದಿಗಳಾದ ಸುರೇಶ್, ಚಾಲಕ ಯೋಗೀಶ್, ಕವಿತಾ, ರುದ್ರೇಶ್ ಭಾಗವಹಿಸಿದ್ದರು.