ಭೂಮಿ ಒಡೆತನಕ್ಕಾಗಿ ಕೊಳಗೇರಿ ನಿವಾಸಿಗಳಿಂದ ಸಿಎಂಗೆ ಮನವಿ
ತುಮಕೂರು,ಆ.20:ಸ್ಲಂ ನಿವಾಸಿಗಳಿಗೆ ಭೂಒಡೆತನ ಮತ್ತು ವಸತಿ ಹಕ್ಕು ಕಾಯ್ದೆ ಜಾರಿಗಾಗಿ ಒತ್ತಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ವತಿಯಿಂದ ಮನವಿ ಸಲ್ಲಿಸಲಾಯಿತು.
ತುಮಕೂರು ವಿಧಾನ ಸಭಾ ಕ್ಷೇತ್ರದ ವಿವಿಧ ಕಾಮಗಾರಿಗಳ ಉಧ್ಘಾಟನೆ ಮತ್ತು ಕರ್ನಾಟಕ ಕೊಳಗೇರಿ ಅಭೀವೃದ್ದಿ ಮಂಡಳಿಯಿಂದ ದಿಬ್ಬೂರಿನಲ್ಲಿ ನಿರ್ಮಿಸಿರುವ 1200 ವಸತಿಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಲು ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರಿಗೆ ಸ್ಲಂ ಜನಾಂದೋಲನಾ ಕರ್ನಾಟಕ ಮತ್ತು ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯಿಂದ ಮನವಿ ಸಲ್ಲಿಸಿದರು.
ಕರ್ನಾಟಕ ರಾಜ್ಯದಲ್ಲಿರುವ ಕೊಳಗೇರಿ ಜನರಿಗೆ ವಸತಿ ಹಕ್ಕು ಖಾತ್ರಿಗಾಗಿ ಮಾನವ ಘನತೆಯ ವಸತಿ ಕಾಯ್ದೆಯ ಜಾರಿಗಾಗಿ ಮತ್ತು 94ಸಿಸಿ ಅಕ್ರಮ-ಸಕ್ರಮದಡಿಯಲ್ಲಿ ನಗರದ ಮುನಿಸಿಪಾಲಿಟಿಗಳ ಅಧಿನದಲ್ಲಿರುವ 1184 ಕೊಳಗೇರಿಗಳ ಘೋಷಣೆ ಮತ್ತು ಸ್ಲಂ ನಿವಾಸಿಗಳ ಜನಸಂಖ್ಯೆಗೆ ಅನುಗುಣವಾಗಿ ಭೂಮಿಯನ್ನು ಮೀಸಲಿಡುವ ಲ್ಯಾಂಡ್ ಬ್ಯಾಂಕ್ ಯೋಜನೆಯನ್ನು ಜಾರಿಗೊಳಿಸಿ ಹಕ್ಕು ಪತ್ರ ನೀಡಲು ಒತ್ತಾಯಿಸಿ ಹಾಗೂ ರಾಜೀವ್ ಆವಾಸ್ ಯೋಜನೆಯಾಡಿಯಲ್ಲಿ ಮನೆ ಪಡೆಯಲು ಶೇ10%ರಷ್ಟು ಫಲಾನುಭವಿ ಶುಲ್ಕವನ್ನು ರಾಜ್ಯ ಸರ್ಕಾರವೇ ಪವಾತಿಸಲು ಕೋರಲಾಯಿತ್ತು.ಕೊಳಗೇರಿ ಜನರ ಕಲ್ಯಾಣಕ್ಕಾಗಿ ತೆಲಂಗಾಣದಲ್ಲಿರುವ ರೀತಿ ಪ್ರತ್ಯೇಕ ಸಚಿವಾಲಯ ಸ್ಥಾಪನೆಗೆ ಒತ್ತಾಯಿಸಲಾಯಿತ್ತು.
ಇದೇ ಸಂದರ್ಭದಲ್ಲಿ ಕೊಳಗೇರಿ ಜನರ ಸಾಲಮನ್ನಾ, ಸ್ಲಂ ನೀತಿ ಜಾರಿ ಮತ್ತು ಪಡಿತರಕ್ಕೆ ಯೂನಿಟ್ ಪದ್ದತಿ ರದ್ದತಿ ಹಾಗೂ 94ಸಿಸಿ ಜಾರಿ ಮಾಡಿದ್ದಕ್ಕೆ ಮಾನ್ಯ ಮುಖ್ಯಮಂತ್ರಿಗಳನ್ನು ಸನ್ಮಾನಿಸಲಾಯಿತ್ತು. ಈ ಸಂದರ್ಭದಲ್ಲಿ ಕೊಳಗೇರಿ ಜನರ ಹೋರಾಟ ಮತ್ತು ಸರಕಾರದ ಬಗ್ಗೆ ನಗರ ಶಾಸಕರಾದ ಡಾ.ಎಸ್.ರಫೀಕ್ ಅಹಮ್ಮದ್ ಪರಿಚಯಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರಾದ ಟಿ.ಬಿ.ಜಯಚಂದ್ರ,ಸ್ಲಂಜನಾಂದೋಲನಾ-ಕರ್ನಾಟಕದ ರಾಜ್ಯ ಸಂಚಾಲಕರಾದ ಎ.ನರಸಿಂಹಮೂರ್ತಿ,ಕೊಳಗೇರಿ ಸಮಿತಿಯ ಉಪಾಧ್ಯಕ್ಷರಾದ ದೀಪಿಕಾ,ಕಾರ್ಯದರ್ಶಿ ಶೆಟ್ಟಳಯ್ಯ,ಪದಾಧಿಕಾರಿಗಳಾದ ಅರುಣ್,ರಘು, ಲತಾ, ಶೃತಿ, ಸುಬ್ಬ, ಅಟೇಕರ್, ಕಾಶೀರಾಜ್, ಜೈಪಾಲ್ ಕೆಂಪರಾಜ್ ಮತ್ತು ಪುಟ್ಟರಾಜ್ ಹಾಜರಿದ್ದರು.