×
Ad

ರಾಜ್ಯ ಸರಕಾರದ ಜನ ವಿರೋಧಿ ಮತ್ತು ದ್ವೇಷ ರಾಜಕಾರಣದ ಆರೋಪ: ಬಿಜೆಪಿ ಪ್ರತಿಭಟನೆ

Update: 2017-08-20 19:43 IST

ಕಡೂರು, ಆ. 20: ರಾಜ್ಯ ಸರ್ಕಾರದ ಜನ ವಿರೋಧಿ ಆಡಳಿತ ಮತ್ತು ದ್ವೇಷ ರಾಜಕಾರಣ ನಡೆಸುತ್ತಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ತಾಲೂಕು ಬಿಜೆಪಿ ಅಧ್ಯಕ್ಷ ಬೆಳ್ಳಿಪ್ರಕಾಶ್ ನೇತೃತ್ವದಲ್ಲಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಭಾನುವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನಾಕಾರರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರತಿಕೃತಿ ದಹಿಸಿ. ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ತಡೆ ಮತ್ತು ಮಾನವ ಸರಪಳಿ ನಿರ್ಮಾಣ ಮಾಡಿ ರಾಜ್ಯ ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗಿದರು.

ತಾಲೂಕು ಬಿಜೆಪಿ ಅಧ್ಯಕ್ಷ ಬೆಳ್ಳಿಪ್ರಕಾಶ್ ಮಾತನಾಡಿ, ಸದಾ ನಿದ್ದೆ ಮಾಡಲು ಪ್ರಸಿದ್ದಿಯಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ರಾಜ್ಯಕ್ಕೆ ಬಂದಾಗ ಎಚ್ಚೆತ್ತು ಕುಳಿತಿದ್ದಾರೆ. ಬಿಜೆಪಿ ರಾಜಾಧ್ಯಕ್ಷ ಯಡಿಯೂರಪ್ಪ ಅವರ ಮೇಲೆ ಕೇಸು ಹಾಕಲು 4 ವರ್ಷ ಬೇಕಾಯಿತೇ? ನಿಮ್ಮ ಸಚಿವ ಸಂಪುಟದ ಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮನೆಯ ಮೇಲೆ ಐಟಿ ದಾಳಿ ನಡೆಸಿದ ನಂತರ ಎಫ್‍ಐಆರ್ ದಾಖಲಿಸುವ ಅಗತ್ಯವಿತ್ತೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದರು.

ಕಳೆದ ನಾಲ್ಕೂವರೆ ವರ್ಷಗಳಲ್ಲಿ ಮುಖ್ಯಮಂತ್ರಿಗಳು ರಾಜ್ಯದ ಜನರಿಗೆ ಹಲವಾರು ಭಾಗ್ಯಗಳನ್ನು ಕರುಣಿಸಿದ್ದಾರೆ. ಈ ಭಾಗ್ಯ ಯೋಜನೆಗಳು ಎಷ್ಟರ ಮಟ್ಟಿಗೆ ಬಡಜನರಿಗೆ ತಲುಪಿವೆ ಎಂದು ಜನಸಾಮಾನ್ಯರಿಗೆ ಗೊತ್ತಿದೆ. ಈಗ ಮುಖ್ಯಮಂತ್ರಿಗಳ ಹೊಸ ಭಾಗ್ಯ, ವಿರೋಧ ಪಕ್ಷದ ಮುಖಂಡರಿಗೆ ಕೇಸಿನ ಭಾಗ್ಯ ಕೊಟ್ಟು ದಾಖಲೆ ಬರೆದಿದ್ದಾರೆ ಎಂದು ವ್ಯಂಗವಾಡಿದರು.

ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಹೆಚ್.ಸಿ.ಕಲ್ಮರುಡಪ್ಪ ಮಾತನಾಡಿ, ರಾಜ್ಯ ಸರ್ಕಾರ ರಾಜಕೀಯ ಪ್ರೇರಿತ, ರಾಜಕೀಯ ದುರುದ್ದೇಶದಿಂದ ಕೂಡಿದ ಆಡಳಿತ ನಡೆಸುತ್ತಿರುವುದು ಸ್ಪಷ್ಟವಾಗಿದೆ. ಜನಸಾಮಾನ್ಯರು ಇದನ್ನು ಆರ್ಥ ಮಾಡಿಕೊಳ್ಳಬೇಕು. ಲೋಕಾಯುಕ್ತ ಸಂಸ್ಥೆಯನ್ನು ಮುಚ್ಚಿ ಮುಖ್ಯಮಂತ್ರಿಗಳಿಗೆ ಬೇಕಾದ ರೀತಿಯಲ್ಲಿ ಎಸಿಬಿ ರಚಿಸಿ ಇದರ ಮೂಲಕ ಆಡಳಿತ ದುರ್ಬಲತೆ ಮಾಡಿಕೊಂಡು ವಿರೋಧ ಪಕ್ಷದ ಮುಖಂಡರ ಮೇಲೆ ಅಸ್ತ್ರ ಮಾಡಿಕೊಂಡಿರುವ ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ನೀಡುವಂತೆ ಆಗ್ರಹಿಸಿದರು.

ಎಸಿಬಿಗೆ ಮುಖ್ಯಮಂತ್ರಿ ಅವರ ಮಗನೂ ಸೇರಿದಂತೆ 32 ಜನರ ಮೇಲೆ ಕೇಸುಗಳನ್ನು ನೀಡಿದ್ದಾರೆ, ಅವುಗಳನ್ನು ಪರಿಗಣಿಸದೆ ಶಿವರಾಮ ಕಾರಂತರ ಬಡಾವಣೆಯ ಡಿನೋಟಿಪಿಕೇಷನ್ ವಿಚಾರದಲ್ಲಿ ಹುರುಳಿಲ್ಲದ ಕೇಸನ್ನು ಯಡಿಯೂರಪ್ಪ ಅವರ ಮೇಲೆ ರಾಜಕೀಯ ಉದ್ದೇಶದಿಂದ ಹಾಕಲಾಗಿದೆ ಎಂದು ದೂರಿದರು.

 ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರಾದ ಬಿ.ಎಲ್. ಶ್ರೀನಿವಾಸ್, ಕೆ.ಬಿ. ಸೋಮೇಶ್, ಬಂಕ್ ಮಂಜು, ಆರ್. ಶಿವಕುಮಾರ್, ಎಪಿಎಂಸಿ ನಿರ್ದೇಶಕರಾದ ಶಿವಕುಮಾರ್. ಎನ್.ಓ. ರವಿ. ಹೆಚ್.ಎಂ. ತಮ್ಮಯ್ಯ, ತಾಲೂಕು ಪಂಚಾಯತಿ ಸದಸ್ಯ ಪುಟ್ಟಸ್ವಾಮಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News