ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಸ್ಥಾನಮಾನಕ್ಕೆ ಆಗ್ರಹಿಸಿ ಬೃಹತ್ ಬೈಕ್ ರ‍್ಯಾಲಿ
ಬೆಳಗಾವಿ, ಆ.20: ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಸ್ಥಾನಮಾನ ನೀಡಬೇಕು ಎಂದು ಆಗ್ರಹಿಸಿ ಕುಂದಾನಗರಿ ಬೆಳಗಾವಿಯಲ್ಲಿ ಲಿಂಗಾಯತ ಸ್ವಾಮಿಜೀಗಳಿಂದ ಬೃಹತ್ ಬೈಕ್ ರ‍್ಯಾಲಿ ನಡೆಸಲಾಯಿತು.
ಇದೇ 22 ರಂದು ಲಿಂಗಾಯತ ಬೃಹತ್ ಸಮಾವೇಶ ನಡೆಯಲಿದ್ದು, ಇದರ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿವಾರ ರ‍್ಯಾಲಿ ಹಮ್ಮಿಕೊಳ್ಳಲಾಗಿತ್ತು.
ರ‍್ಯಾಲಿ ಬಳಿಕ ಮಾತನಾಡಿದ ರುದ್ರಾಕ್ಷಿ ಮಠದ ಸಿದ್ದರಾಮ ಸ್ವಾಮಿಜಿ, ಆ.22 ರಂದು ನಡೆಯಲಿರುವ ಸಮಾವೇಶದಲ್ಲಿ ನಾಲ್ಕು ಲಕ್ಷ ಜನರನ್ನು ಸೇರಿಸಲಾಗುತ್ತಿದೆ. ಹೀಗಾಗಿ, ರಾಜ್ಯ, ಹೊರ ರಾಜ್ಯದಿಂದ ಅನೇಕ ಲಿಂಗಾಯತರು ಸಮಾವೇಶದಲ್ಲಿ ಭಾಗವಹಿಸಿಬೇಕು ಎಂದರು.
ಲಿಂಗಾಯತ ಸ್ವತಂತ್ರ ಧರ್ಮ ಹೋರಾಟ ಸಮಿತಿ ವತಿಯಿಂದ ಬೆಳಗಾವಿ ನಾಗನೂರು ಮಠದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೌದ್ಧ, ಸಿಖ್, ಜೈನ ಧರ್ಮಕ್ಕೆ ದೊರೆತಿರುವ ಹಾಗೆ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮ ಮಾನ್ಯತೆ ನೀಡಬೇಕು. ಈಗಾಗಲೆ ಸಮಾವೇಶಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಸಮಾವೇಶಕ್ಕೆ ಎಲ್ಲರನ್ನೂ ಆಹ್ವಾನ ನೀಡಲಾಗಿದೆ ಎಂದರು.