ಹಿಂದುಳಿದ ವರ್ಗಗಳ ರಾಜಕೀಯ ಮೀಸಲಾತಿಗೆ ಹೋರಾಟ ಅವಶ್ಯಕ
ಮಂಡ್ಯ, ಆ.20: ಲೋಕಸಭೆ, ವಿಧಾನಸಭೆ ಚುನಾವಣೆಯಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ದೊರೆಯಬೇಕಿದ್ದು, ರಾಷ್ಟ್ರೀಯಮಟ್ಟದಲ್ಲಿ ಹೋರಾಟ ನಡೆಸುವ ಅನಿವಾರ್ಯತೆ ಇದೆ ಎಂದು ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್.ಸಂದೇಶ್ ಹೇಳಿದ್ದಾರೆ.
ನಗರದ ಸಂಜಯ ವೃತ್ತದಲ್ಲಿ ವೇದಿಕೆ ವತಿಯಿಂದ ರವಿವಾರ ನಡೆದ ಅರಸು 102 ಜನ್ಮ ದಿನೋತ್ಸವ ಕಾರ್ಯಕ್ರಮದಲ್ಲಿ ಅರಸು ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ, ಪುಸ್ತಕಗಳನ್ನು ವಿತರಿಸಿ ಅವರು ಮಾತನಾಡಿದರು.
ಜನಸಂಖ್ಯೆಗೆ ಅನುಗುಣವಾಗಿ ಹಿಂದುಳಿದ ವರ್ಗದ ಶಾಸಕರು, ಸಂಸದರು ಇಲ್ಲ. ತಳಸಮುದಾಯಗಳ ಅಂತರಾಳದ ಅಳಲುಗಳಿಗೆ ಧ್ವನಿ ಇಲ್ಲದಂತಾಗಿದ್ದು. ಹಿಂದುಳಿದವರ ರಾಜಕೀಯ ಮೀಸಲಾತಿಗಾಗಿ ಗಂಭೀರ ಹೋರಾಟ ನಡೆಸಬೇಕಿದೆ ಎಂದು ಅವರು ಕರೆ ನೀಡಿದರು.
ಡಿ. ದೇವರಾಜ ಅರಸು ಅವರ ಅಧಿಕಾರಾವಧಿಯಲ್ಲಿ 60ಕ್ಕಿಂತ ಹೆಚ್ಚು ಮಂದಿ ಹಿಂದುಳಿದ ವರ್ಗದ ಶಾಸಕರಿದ್ದರು. ಆದರೆ, ಈಗ 30ಕ್ಕೆ ಇಳಿದಿದೆ. ಇದು ರಾಜಕೀಯ ಹಿನ್ನಡೆಯನ್ನು ತೋರುತ್ತದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳಿಂದ 100 ಕ್ಷೇತ್ರಗಳಲ್ಲಿ ಹಿಂದುಳಿದವರಿಗೆ ಟಿಕೆಟ್ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಬಸವಣ್ಣ, ಅಂಬೇಡ್ಕರ್, ನಾಲ್ವಡಿ, ಅರಸು ಅವರ ಸಾಮಾಜಿಕ ನ್ಯಾಯದ ಆಶಯವನ್ನು ಮುನ್ನಡೆಸುವುದು ಎಲ್ಲರ ಹೊಣೆಗಾರಿಕೆ ಎಂದ ಅವರು, ಅಂದು ಅರಸು ಅವರು ಜಾರಿಗೆ ತಂದ ಕಾರ್ಯಕ್ರಮಗಳ ಫಲವನ್ನು ಇಂದು ನಾವುಗಳು ಅನುಭವಿಸುತ್ತಿದ್ದೇವೆ. ಅರಸುರವರ ದೂರದೃಷ್ಠಿ ಇಂದಿನ ಜನಪ್ರತಿನಿಧಿಗಳಿಗೆ ಮಾದರಿಯಾಗಿದೆ ಎಂದರು.
ರಾಜ್ಯದಲ್ಲಿ `ಅಹಿಂದ' ವರ್ಗವನ್ನು ಸಾಮಾಜದ ಮುಖ್ಯವಾಹಿನಿಗೆ ತರುವಲ್ಲಿ ಅರಸರ ಬಳುವಳಿ ಅಪಾರವಾದದ್ದು. ಆ ಪರಂಪರೆಯನ್ನು ಮುಖ್ಯಮಂತ್ರಿ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಸಾಮಾಜಿಕ ನ್ಯಾಯದ ಘನತೆಯನ್ನು ಎತ್ತಿ ಹಿಡಿದಿದ್ದಾರೆ. `ಅಹಿಂದ' ಎಂಬುದು ಒಂದು ಜಾತಿಯಲ್ಲ, ಶೋಷಿತ ಸಮಾಜಗಳ ಸಮಗ್ರ ರೂಪ ಎಂದು ಅವರು ಹೇಳಿದರು.
ಪ್ರಧಾನ ಕಾರ್ಯದರ್ಶಿ ಎಂ.ಕೃಷ್ಣ, ಉಪಾಧ್ಯಕ್ಷ ಸಿ.ಸಿದ್ದಶೆಟ್ಟಿ, ಹಿಂದುಳಿದ ಸಮಾಜದ ಮುಖಂಡರಾದ ಬಸವರಾಜು, ರಾಜಣ್ಣ, ಜಯರಾಂ, ಚನ್ನವೀರಶೆಟ್ಟಿ, ಕಾಂತರಾಜು, ಪುಟ್ಟಸ್ವಾಮಿ, ಪ್ರಕಾಶ್, ದೊಡ್ಡಯ್ಯ, ಸಾತನೂರು ಕೃಷ್ಣ, ಸೋಮಶೇಖರ್, ದಾಸ್‍ಪ್ರಕಾಶ್, ಮಂಜುನಾಥ್, ಗೋವಿಂದರಾಜ್, ಅರ್ಕೇಶ್ವರಚಾರ್, ಎಚ್.ಪಿ. ಸತೀಶ್, ರಾಜೇಂದ್ರ ಇತರರು ಹಾಜರಿದ್ದರು.