ನಾವು ಕಾಂಗ್ರೆಸ್ ಸೇರುತ್ತಿದ್ದೇವೆ:ಎನ್.ಚಲುವರಾಯಸ್ವಾಮಿ
ಮದ್ದೂರು, ಆ.20: ಜೆಡಿಎಸ್‍ನ ಏಳು ಮಂದಿ ಬಂಡಾಯ ಶಾಸಕರು ಕಾಂಗ್ರೆಸ್ ಸೇರಲು ಪಕ್ಷದ ರಾಷ್ಟ್ರೀಯ ಉಪಾದ್ಯಕ್ಷ ರಾಹುಲ್‍ಗಾಂಧಿ ಅವರಿಂದಲೇ ಷರತ್ತು ರಹಿತವಾಗಿ ಗ್ರೀನ್ ಸಿಗ್ನಲ್ ದೊರಕಿದ್ದು, ನಾವು ಕಾಂಗ್ರೆಸ್ ಸೇರಲು ಸಿದ್ದರಿದ್ದೇವೆ ಎಂದು ಶಾಸಕ ಎನ್.ಚಲುವರಾಯಸ್ವಾಮಿ ಹೇಳಿದ್ದಾರೆ.
ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಕೆ.ಟಿ.ಶ್ರೀಕಂಠೇಗೌಡ ಅವರ ಟೀಕೆಗೆ ಪ್ರತಿಕ್ರಿಯಿಸಲು ಸಿದ್ದರಿಲ್ಲ. ಅವರು ಬಾಯಿಗೆ ಬಂದಂತೆ ಏನಾದರೂ ಹೇಳಿಕೊಳ್ಳಲಿ ಅದರೆ ಅದಕ್ಕೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದರು.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮದ್ದೂರು ಕ್ಷೇತ್ರಕ್ಕೆ ಮಧು ಜಿ.ಮಾದೇಗೌಡ, ಕಲ್ಪನ ಸಿದ್ದರಾಜು, ಗುರುಚರಣ್, ಬಿ.ರಾಮಕೃಷ್ಣ, ಮಹೇಶಚಂದ್ ಸೇರಿದಂತೆ ಯಾರೇ ಅಭ್ಯರ್ಥಿಯಾದರೂ ಒಗ್ಗಟ್ಟಿನಿಂದ ಅಭ್ಯರ್ಥಿ ಗೆಲುವಿಗೆ ಶ್ರಮಿಸಲಿದ್ದಾರೆ ಎಂದು ಅವರು ಹೇಳಿದರು.
ಯಾವುದೇ ಯೋಜನೆ ಸಫಲಗೊಳ್ಳಬೇಕಾದರೆ ಕಾಲಾವಕಾಶ ಬೇಕು ಎಂದು ಶಾಸಕ ಎನ್.ಚಲುವರಾಯಸ್ವಾಮಿ ತಿಳಿಸಿದರು.
ರಾಜ್ಯ ಸರಕಾರ ಜಾರಿಗೊಳಿಸಿರುವ ಇಂದಿರಾ ಕ್ಯಾಂಟಿನ್ ಯೋಜನೆ ಉತ್ತಮವಾಗಿದ್ದು, ಇದರಿಂದ ಬಡವರಿಗೆ ಕಡಿಮೆ ದುಡ್ಡಿನಲ್ಲಿ ಉತ್ತಮ ಊಟ, ತಿಂಡಿ ದೊರಕುತ್ತದೆ. ವಿಪಕ್ಷಗಳು ಅನಾವಶ್ಯಕ ಟೀಕೆ ಮಾಡುವುದು ಸರಿಯಲ್ಲ ಎಂದವರು ಪ್ರತಿಕ್ರಿಯಿಸಿದರು.
ತಾಪಂ ಸದಸ್ಯ ತೋಯಾಜಾಕ್ಷಿ, ಪಣ್ಣೇದೊಡ್ಡಿ ಹರ್ಷ, ರಾಮಕೃಷ್ಣೇಗೌಡ, ಇತರ ಮುಖಂಡರು ಉಪಸ್ಥಿತರಿದ್ದರು.