ಆತ್ಮವಿಶ್ವಾಸ ಕಳೆದುಕೊಳ್ಳಬಾರದು:ಡಿಸಿ ಮಂಜುಶ್ರೀ
ಮಂಡ್ಯ, ಆ.20: ಯಾವುದೇ ಕಾರಣಕ್ಕೂ ಆತ್ಮವಿಶ್ವಾಸ ಕಳೆದುಕೊಳ್ಳದೇ, ಹಿಡಿದ ಕೆಲಸ ಪೂರ್ಣಗೊಳಿಸುತ್ತೇನೆ ಎಂಬ ಸಂಕಲ್ಪವನ್ನು ಪ್ರತಿಯೊಬ್ಬರು ಮಾಡಬೇಕು ಎಂದು ಜಿಲ್ಲಾಧಿಕಾರಿ ಎನ್.ಮಂಜುಶ್ರೀ ಸಲಹೆ ಮಾಡಿದ್ದಾರೆ.
ನಗರದ ಕೃಷಿಕ್ ಸ್ಪರ್ಧಾಸೌಧದ ಸಭಾಂಗಣದಲ್ಲಿ ಮಂಡ್ಯ ಕೃಷಿಕ್ ಸರ್ವೋದಯ ಟ್ರಸ್ಟ್ ವತಿಯಿಂದ ರವಿವಾರ ನಡೆದ ಸ್ಪರ್ಧಾತ್ಮಕ ಪರೀಕ್ಷೆಗಳ ಬುನಾದಿ ತರಬೇತಿ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಕೆಎಎಸ್ ಮತ್ತು ಐಎಎಸ್‍ಗೆ ಓದುವಾಗ ನಮ್ಮಲ್ಲಿನ ಋಣಾತ್ಮಕ ಭಾವನೆಯನ್ನು ಬಿಡಬೇಕು. ಋಣಾತ್ಮಕ ಭಾವನೆಯನ್ನೇ ಧನಾತ್ಮಕ ಭಾವನೆಯನ್ನಾಗಿಸಿಕೊಳ್ಳಬೇಕು. ನಿನ್ನಿಂದ ಸಾಧ್ಯವಿಲ್ಲ ಎಂಬುವವರಿಗೆ ನನ್ನಿಂದ ಸಾಧ್ಯ ಎಂಬುದನ್ನು ಮಾಡಿ ತೋರಿಸಬೇಕು ಎಂದು ಅವರು ಹೇಳಿದರು.
ಯುಪಿಎಸ್‍ಸಿ ಪರೀಕ್ಷೆಗಳಿಗೆ ಪೂರ್ವಭಾವಿಯಾಗಿ ತಯಾರಿ ಮಾಡಿಕೊಳ್ಳಲು ಭಾಷೆಯ ಆಯ್ಕೆ ಇರುವುದರಿಂದ ಯಾವುದೇ ತೊಂದರೆಯಿಲ್ಲ. ಭಾಷೆಗಳ ಬಗ್ಗೆ ತಲೆಕೆಡಿಸಿಕೊಳ್ಳಬಾರದು. ಸಂದರ್ಶನವನ್ನು ಕನ್ನಡ ಭಾಷೆಯಲ್ಲಿಯೇ ನೀಡಲು ಅವಕಾಶಗಳಿವೆ ಎಂದು ಅವರು ವಿವರಿಸಿದರು.
ಕನ್ನಡ ಮಾಧ್ಯಮದಲ್ಲೇ ಓದಿರುವ ಸ್ಪರ್ಧಿಗಳು ಭಾಷೆಯ ಹಿಂಜರಿಗೆಗೆ ಒಳಗಾಗಬಾರದು. ಇಂಗ್ಲಿಷ್‍ನಲ್ಲಿನ ವಿಷಯ ಓದಿ ಅದನ್ನು ಅರ್ಥೈಸಿಕೊಳ್ಳಲು ಸಾಧ್ಯವಾದಷ್ಟು ಮಾತ್ರ ಇಂಗ್ಲಿಷ್ ಕಲಿಕೆ ಇದ್ದರೆ ಸಾಕು ಎಂದು ಅವರು ಕಿವಿಮಾತು ಹೇಳಿದರು.
ಸಂಪನ್ಮೂಲ ವ್ಯಕ್ತಿಗಳಾದ ಮೈಸೂರಿನ ಮಹಾರಾಣಿ ಕಾಲೇಜಿನ ಡಾ.ಹೇಮಚಂದ್ರ, ರಾಮನಗರ ತಹಸೀಲ್ದಾರ್ ಮಾರುತಿ ಪ್ರಸನ್ನ, ಕನಕಪುರ ತಹಸೀಲ್ದಾರ್ ಯೋಗಾನಂದ, ಟ್ರಸ್ಟ್ ಅಧ್ಯಕ್ಷ ಡಾ.ಎಚ್.ಡಿ.ಚೌಡಯ್ಯ, ಕಾರ್ಯದರ್ಶಿ ಡಾ.ರಾಮಲಿಂಗಯ್ಯ, ಕಾರ್ಯಾಧ್ಯಕ್ಷ ಟಿ.ತಿಮ್ಮೇಗೌಡ, ಎಸ್.ಎನ್.ನಾಗರಾಜು, ಎಸ್.ಧನಂಜಯ್, ಎ.ಎಂ.ಅಣ್ಣಯ್ಯ ಉಪಸ್ಥಿತರಿದ್ದರು.