ಹಾಸನ: ಡಿ. ದೇವರಾಜ ಅರಸು ಜನ್ಮ ದಿನಾಚರಣೆ ಕಾರ್ಯಕ್ರಮ

Update: 2017-08-20 16:22 GMT

ಹಾಸನ, ಆ.20: ಆದರ್ಶ ರಾಜಕಾರಣಿ ದಿವಂಗತ ಡಿ. ದೇವರಾಜ ಅರಸು ಅವರು ಅಸಂಖ್ಯ ದನಿ ಇಲ್ಲದ ಜನಾಂಗಗಳ ಗುರುತಿಸಿದ ಯುಗಪುರುಷ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎ. ಮಂಜು ಬಣ್ಣಿಸಿದರು.

ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್,  ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಹಾಗೂ ವಾರ್ತಾ ಇಲಾಖೆ  ಸಂಯುಕ್ತಾಶ್ರಯದಲ್ಲಿ ಭಾನುವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ದಿವಂಗತ ಡಿ. ದೇವರಾಜ ಅರಸು ಅವರ 102ನೆ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ  ಮಾನತನಾಡಿದ ಅವರು, ಕರ್ನಾಟಕ ಕಂಡ ಧೀಮಂತ ನಾಯಕ ದೇವರಾಜು ಅರಸು ಅವರ ಅಧಿಕಾರವಧಿಯಲ್ಲಿ ರಾಜ್ಯದೊಳಗೆ ಹಲವಾರು ಸುಧಾರಣೆಯನ್ನು ತಂದು ಈ ದೇಶ ಕಂಡ ಶ್ರೇಷ್ಠ ರಾಜಕಾರಣಿ, ಮಹಾನ್ ಚೇತನ, ಮೌನ ಕ್ರಾಂತಿಯ ಹರಿಕಾರರಾಗಿದ್ದಾರೆ. ಹಾಗಾಗಿಯೇ ಜಾತಿಗಿಂತ ಬಡತನವೇ ನೋವಿನ ಸಂಗತಿ ಎಂಬುದನ್ನು ಅರಿತು ಸಮಾಜದಲ್ಲಿ ಹಿಂದುಳಿದ ಎಲ್ಲರಿಗೂ ಸಮಾನ ಅವಕಾಶಗಳನ್ನು ಒದಗಿಸಲು ಶ್ರಮಿಸಿದ ಧೀಮಂತ ವ್ಯಕ್ತಿ ಎಂದರು.

ರಾಜ್ಯಕ್ಕೆ ಕರ್ನಾಟಕ ಎಂದು ಮರು ನಾಮಕರಣ ಮಾಡಿದ್ದು, ಹಾವನೂರು ಆಯೋಗ ರಚನೆ ಮಾಡುವ ಮೂಲಕ ಹಿಂದುಳಿದ ವರ್ಗಕ್ಕೆ ಮೀಸಲಾತಿ ಸೌಕರ್ಯ ಕಲ್ಪಿಸಿದರು. ಅಲ್ಲದೆ,ವಿಧವಾ ವೇತನ, ವೃದ್ಧಾಪ್ಯ ವೇತನ ಜಾರಿ, ಸಾವಿರಾರು ಬ್ಯಾಕ್ ಲಾಗ್ ಹುದ್ದೆಗಳ ಭರ್ತಿ, ಅನುದಾನಿತ ಶಾಲಾ ಶಿಕ್ಷಕರಿಗೂ ಸಮಾನ ವೇತನ ಸೌಲಭ್ಯ ಇನ್ನಿತರ ಅತ್ಯುತ್ತಮ ಕೆಲಸಗಳನ್ನು ಅರಸು ಅವರು ಮಾಡಿದ್ದಾರೆ.

 ಜಿಲ್ಲೆಯಲ್ಲಿ ಹಿಂದೂಳಿದ ವರ್ಗಗಳ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಸೇರಿರುವ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳು 65, ನಂತರದ ವಿದ್ಯಾರ್ಥಿ ನಿಲಯಗಳು 51, ಒಟ್ಟು 116 ವಿದ್ಯಾರ್ಥಿ ನಿಲಯಗಳಿವೆ. 8575 ವಿದ್ಯಾರ್ಥಿಗಳಿಗೆ ಪ್ರವೇಶ ಒದಗಿಸಲಾಗಿದೆ. ಜಿಲ್ಲಾ ವ್ಯಾಪ್ತಿಯಲ್ಲಿ ಒಟ್ಟು 12 ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿವೆ. ಇದರಲ್ಲಿ 3000 ವಿದ್ಯರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

 ಕ್ಷೇತ್ರದ ಶಾಸಕ ಎಚ್.ಎಸ್. ಪ್ರಕಾಶ್ ಮಾತನಾಡಿ, ದೇವರಾಜ ಅರಸುರವರ ಜೀವನ ಆದರ್ಶಗಳು ಅನುಕರಣೀಯ. ಅವರು ಬಡವರ,  ಹಿಂದುಳಿದ ವರ್ಗದವರ ಹಾಗೂ ದೀನ ದಲಿತರ ಏಳಿಗೆಗಾಗಿ ಶ್ರಮಿಸಿದ ಮಹಾನ್ ನಾಯಕ ಎಂದು ವಿವರಿಸಿದರು.

  ಈ ವೇಳೆ ಬಿಸಿಎಂ ಹಾಸ್ಟೇಲ್‍ನಲ್ಲಿ ಶಿಕ್ಷಣ ಪಡೆಯುತ್ತಿರುವವರು ಹೆಚ್ಚು ಅಂಕಗಳಿದವರಿಗೆ ಬಹುಮಾನವನ್ನು ಕೂಡ ವಿತರಿಸಲಾಯಿತು. ಜೊತೆಗೆ ಹಿಂದೂಳಿದವರಿಗೆ ಇದೆ ವೇಳೆ ಹೊಲಿಗೆ ಯಂತ್ರವನ್ನು ವಿತರಿಸಲಾಯಿತು.

ಕಾರ್ಯಕ್ರಮಕ್ಕೆ ಮೊದಲು ನಗರದ ಜಿಲ್ಲಾಧಿಕಾರಿ ಕಛೇರಿ ಆವರಣದಲ್ಲಿ ದಿವಂಗತ ಡಿ. ದೇವರಾಜ ಅರಸು ಅವರ 102ನೇ ಜನ್ಮ ದಿನಾಚರಣೆಯ ಅಂಗವಾಗಿ ಅವರ ಭಾವಚಿತ್ರದೊಂದಿಗೆ ಮೆರವಣಿಗೆ ನಡೆಸಲಾಯಿತು. ದೇವರಾಜ ಅರಸು ಕುರಿತಂತೆ ವಾರ್ತಾ ಇಲಾಖೆಯಿಂದ ಏರ್ಪಡಿಸಲಾಗಿದ್ದು ಸಾಕ್ಷ್ಯ ಚಿತ್ರವನ್ನು ಪ್ರೊಜೆಕ್ಟರ್ ಮೂಲಕ ಬಿತ್ತರಿಸಲಾಯಿತು.

ಕಾರ್ಯಕ್ರಮದಲ್ಲಿ  ಜಿಪಂ ಅಧ್ಯಕ್ಷೆ ಶ್ವೇತ ದೇವರಾಜು , ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಎಂ. ಜಾನಕಿ,  ಕನ್ನಡ ವಿಭಾಗದ ಉಪನ್ಯಾಸಕ ಎಚ್.ಎಲ್. ಮಲ್ಲೇಶ್‍ಗೌಡ  ಮಾತನಾಡಿದರು.   ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಯಕರ ಹಳ್ಳಿ ಮಂಜೇಗೌಡ ಇತರರಿದ್ದರು. ಕಾರ್ಯಕ್ರಮವನ್ನು  ಹಿಂದೂಳಿದ ವರ್ಗ ಇಲಾಖೆ ಅಧಿಕಾರಿ ಎ.ಬಿ. ವೆಂಕಟರಮಣರೆಡ್ಡಿ ನಿರ್ವಹಿಸಿದರು. ಸ್ವಾತಿ, ಬಿಂದು ಪ್ರಾರ್ಥಿಸಿ, ನಾಡಗೀತೆ ಮತ್ತು ರೈತ ಗೀತೆ ಹಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News