ಡಿ. ದೇವರಾಜು ಅರಸು ಸಾಮಾಜಿಕ ನ್ಯಾಯದ ಹರಿಕಾರ: ಶಾಸಕ ಡಾ.ಕೆ. ಸುಧಾಕರ್

Update: 2017-08-20 16:33 GMT

ಚಿಕ್ಕಬಳಾಪುರ, ಆ.20:  ಮಾಜಿ ಮುಖ್ಯಮಂತ್ರಿ ಡಿ. ದೇವರಾಜು ಅರಸು ಅವರು ಸಾಮಾಜಿಕ ನ್ಯಾಯದ ಹರಿಕಾರರಾಗಿದ್ದು, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ಅಭಿವೃದ್ಧಿಯ ಬಗ್ಗೆ ಸ್ಪಷ್ಟ ಕಲ್ಪನೆ ಹೊಂದಿದ್ದ ಧೀಮಂತ ನಾಯಕರಾಗಿದ್ದಾರೆ ಎಂದು ಶಾಸಕ ಡಾ.ಕೆ. ಸುಧಾಕರ್ ಅಭಿಪ್ರಾಯಪಟ್ಟರು.

ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಪಂ, ಹಿಂದುಳಿದ ವರ್ಗಗಳ ಇಲಾಖೆ ಮತ್ತು ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಆಯೋಜಿಸಿದ್ದ ಸಾಮಾಜಿಕ ಕ್ರಾಂತಿಯ ಹರಿಕಾರ ದಿ. ಡಿ.ದೇವರಾಜ ಅರಸು ಅವರ 102ನೇ ಜನ್ಮ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದೇವರಾಜು ಅರಸು ಅವರ ಜೀವನ ಶೈಲಿ, ಆದರ್ಶ ಪ್ರಸ್ತುತ ಸಮಾಜಕ್ಕೆ ಅತ್ಯಂತ ಅವಶ್ಯಕವಾಗಿದ್ದು, ಪ್ರತಿಯೊಬ್ಬರು ಅಳವಡಿಸಿಕೊಂಡು ಪಾಲಿಸುವಂತಾಗಬೇಕು ಎಂದ ಅವರು, ಸರ್ಕಾರದ ಸವಲತ್ತುಗಳನ್ನು ಜನರಿಗೆ ಮುಟ್ಟಿಸುವಲ್ಲಿ ಮುಂಚೂಣಿಯಲ್ಲಿದ್ದ ಅರಸು, ಉಳುವವನೇ ಹೊಲದೊಡೆಯ ಎಂಬ ಕಾರ್ಯಕ್ರಮದ ಮೂಲಕ ಭೂ ಸುಧಾರಣೆಯನ್ನು ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಜಾರಿಗೊಳಿಸಿದ ಕೀರ್ತಿ ಸಲ್ಲುತ್ತದೆ ಎಂದು ತಿಳಿಸಿದರು.

ದೇಶದದಲ್ಲಿ ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತರು ಅಭಿವೃದ್ಧಿಗಾಗಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವಧಿಯಲ್ಲಿ ಜಾರಿಗೊಳಿಸಿದ 20 ಅಂಶಗಳ ಕಾರ್ಯಕ್ರಮಗಳನ್ನು ದೇಶದಲ್ಲಿಯೇ ಯಶಸ್ವಿ ಹಾಗೂ ಪರಿಣಾಮಕಾರಿಯಾಗಿ ಜಾರಿಗೊಳಿಸಿದವರು ಮುಖ್ಯಮಂತ್ರಿ ಅರಸು ಅವರಾಗಿದ್ದು, ಕೇವಲ ಭಾಷಣದಿಂದ ಬಡತನ ನಿರ್ಮೂಲನೆಯಾಗಿವುದಲ್ಲ ಬದಲಿಗೆ ದೀನದಲಿತರ ಏಳಿಗೆಗಾಗಿ ಕಾನೂನು ರಚಿಸಲು ಸಿದ್ದ, ಕಾನೂನನ್ನು ಮುರಿಯಲೂ ಸಹ ಹಿಂಜರಿಯದ ವ್ಯಕ್ತಿತ್ವವನ್ನು ಹೊಂದಿದ್ದರು ಎಂದರು.

ಈ ವೇಳೆ   ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಜೇತರವರಿಗೆ ಬಹುಮಾನ ವಿತರಿಸಲಾಯಿತು. 

ಕಾರ್ಯಕ್ರಮದಲ್ಲಿ  ಜಿಲ್ಲಾಧಿಕಾರಿ ದೀಪ್ತಿ ಆದಿತ್ಯ ಕಾನಡೆ, ಪ್ರತಿಜ್ಞಾ ವಿಧಿ ಸಭಿಕರಿಗೆ ಬೋಧಿಸಿದರು.ಸರ್ಕಾರಿ ಶಿಕ್ಷಕರ ಮಹಾವಿದ್ಯಾಲಯದ ಪ್ರಾಂಶುಪಾಲ ಕೋಡಿರಂಗಪ್ಪ ರಾಜ್ಯ ಖಾದಿ ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಯಲುವಳ್ಳಿ ಎನ್. ರಮೇಶ್, ಮಾಜಿ ಶಾಸಕ ಎಸ್.ಎಂ. ಮುನಿಯಪ್ಪ, ವೆಂಕಟಾಚಲರಾಜು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಜಗದೀಶ್ ಗಂಗಣ್ಣನವರ್, ಅರಣ್ಯ ಸಂರಕ್ಷಣಾಧಿಕಾರಿ ಡಾ.ಮಂಜುನಾಥ್ ಸೇರಿದಂತೆ ಮತ್ತಿತರರಿದ್ದರು.

ಶುದ್ಧೀಕರಿಸಿದ ನೀರಿನ ಯೋಜನೆಗೆ ಚಾಲನೆ

ಬೆಂಗಳೂರಿನ ಹೆಬ್ಬಾಳ ಕೆರೆಯ ಸಂಸ್ಕರಿಸಿದ ನೀರನ್ನು ಶುದ್ಧೀಕರಿಸಿ ಚಿಕ್ಕಬಳ್ಳಾಪುರ ಜಿಲ್ಲೆಯ ಕೆರೆಗಳಿಗೆ ಹರಿಸುವ ಯೋಜನೆಯ ಕಾಮಗಾರಿಗೆ ಸಿಎಂ ಸಿದ್ದರಾಮಯ್ಯ ಸೆ.18 ರಂದು ಚಿಕ್ಕಬಳ್ಳಾಪುರದಲ್ಲಿ ಚಾಲನೆ ನೀಡಲಿದ್ದಾರೆ ಎಂದ ಶಾಸಕ ಡಾ.ಕೆ. ಸುಧಾಕರ್, 13 ಸಾವಿರ ಕೋಟಿ ರೂಗಳ ವೆಚ್ಚದ ಎತ್ತಿನ ಹೊಳೆ ಯೋಜನೆಯು ವಿಳಂಭವಾಗುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಸುಮಾರು 900 ಕೋಟಿ ರೂಗಳ ವೆಚ್ಚದಲ್ಲಿ ಚಿಕ್ಕಬಳ್ಳಾಪುರದ 44 ಕೆರೆಗಳಿಗೆ ನೀರು ಹರಿಸುವ ಯೋಜನೆಯನ್ನು ಕೈಗೊಳ್ಳುವ ಮೂಲಕ ಜಿಲ್ಲೆಯ ಕುರಿತು ವಿಶೇಷ ಕಾಳಜಿಯನ್ನು ತೋರಿದೆ ಎಂದ ತಿಳಿಸಿದರು.

ಜಿಲ್ಲಾ ಕೇಂದ್ರದಲ್ಲಿ ಇಂದಿರಾ ಕ್ಯಾಂಟೀನ್

ರಾಜ್ಯದ ಲಕ್ಷಾಂತರ ಯುವಕ ಯುವತಿಯರಿಗೆ ಶೈಕ್ಷಣಿಕ ಜೀವನಕ್ಕೆ ಅನುವಾಗುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು 2 ತಿಂಗಳಲ್ಲಿ ಲ್ಯಾಪ್‍ಟಾಪ್ ವಿತರಣೆ ಮಾಡುವುದಾಗಿ ತಿಳಿಸಿದ ಸುಧಾಕರ್, ವಿದ್ಯಾರ್ಥಿಗಳಿಗೆ ವಿದ್ಯಾಸಿರಿ ಸೇರಿದಂತೆ ಹಲವು ಯೋಜನೆಗಳನ್ನು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ. ಅಲ್ಲದೆ ಕೇವಲ 5 ರೂಗಳಿಗೆ ಊಟ ನೀಡುವ ಇಂದಿರಾ ಕ್ಯಾಂಟೀನ್ ಪ್ರಾರಂಭಿಕವಾಗಿ ಬೆಂಗಳೂರು ನಗರದಲ್ಲಿ ಪ್ರಾರಂಭ ಮಾಡಲಾಗಿದ್ದು, ಹಂತ ಹಂತವಾಗಿ ಎಲ್ಲ ಜಿಲ್ಲೆಗಳಲ್ಲಿಯೂ ಆರಂಭಗೊಳ್ಳುವುದು. ಅಲ್ಲದೆ ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿಯೂ ಮೂರು ತಿಂಗಳಲ್ಲಿ 6 ಇಂದಿರಾ ಕ್ಯಾಂಟೀನ್ ಘಟಕಗಳನ್ನು ಆರಂಭಿಸುವುದು ಎಂದು ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News