ಎಸಿಬಿ ದುರ್ಬಳಕೆ ಆರೋಪ: ಸಿಎಂ ರಾಜೀನಾಮೆಗೆ ಆಗ್ರಹ

Update: 2017-08-20 16:54 GMT

ಚಿಕ್ಕಬಳ್ಳಾಪುರ, ಆ.20: ಎಸಿಬಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಸಿದ್ದರಾಮಯ್ಯ ಅವರು ರಾಜ್ಯದ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಯಲು ನೈತಿಕತೆಯನ್ನು ಕಳೆದುಕೊಂಡಿದ್ದು, ಈ ಕೂಡಲೇ ರಾಜೀನಾಮೆ ನೀಡಬೇಕೆಂದು ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಕೆ. ನಾರಾಯಣಸ್ವಾಮಿ ಆಗ್ರಹಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಬಲ ಸಂಸ್ಥೆಯಾದ ಲೋಕಾಯುಕ್ತ ಸಂಸ್ಥೆಯನ್ನು ದುರ್ಬಳಗೊಳಿಸಿರುವ ಸಿಎಂ ಸಿದ್ದರಾಮಯ್ಯ ಅವರು ಎಸಿಬಿಯನ್ನು ಅಸ್ತಿತ್ವಕ್ಕೆ ತರುವ ಮೂಲಕ ತಮ್ಮ ಹುಳುಕುಗಳನ್ನು ಮರೆಮಾಚಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

ಯಡಿಯೂರಪ್ಪ ಅವರ ವಿರುದ್ಧ ನ್ಯಾಯಾಲಯದಲ್ಲಿ ಹೂಡಿದ್ದ ವಜಾಗೊಂಡಿರುವ ಪ್ರಕರಣಗಳಿಗೂ ಮರು ಜೀವ ನೀಡುವ ದುರುದ್ದೇಶದೊಂದಿಗೆ ಸಿಎಂ ಸಿದ್ದರಾಮಯ್ಯ ಪ್ರಯತ್ನಿಸುತ್ತಿರುವ ಕುರಿತು ಅಧಿಕಾರಿ ಬಸವರಾಜೇಂದ್ರ ಎಂಬವರು ರಾಜ್ಯಪಾಲರಿಗೆ ದೂರು ನೀಡಿರುವುದರ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ರಾಜನೀತಿ ಬದಲಾಗಿ ಸೇಡಿನ ಹಾಗೂ ಸ್ವಾರ್ಥ ರಾಜಕಾರಣ ಮಾಡುತ್ತಿರುವುದು ಬಹಿರಂಗ ಗೊಂಡಿದೆ ಎಂದು ತಿಳಿಸಿದರು.

ರಾಜ್ಯ ಸರ್ಕಾರದ ಭ್ರಷ್ಟಾಚಾರವು ಮಿತಿಮೀರಿದ್ದು, ಪ್ರಮಾಣಿಕ ಅಧಿಕಾರಿಗಳಿಗೆ ರಾಜ್ಯದಲ್ಲಿ ನೆಲೆ ಇಲ್ಲದಂತಾಗಿದೆ. ಅಲ್ಲದೆ ಜಾತಿಗಳ ನಡುವೆ ವೈಷಮ್ಯ ಸೇರಿದಂತೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ತೀರಾ ಹದಗೆಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ಕಳೆದ ನಾಲ್ಕು ವರ್ಷಗಳಲ್ಲಿ ಸುಮಾರು 2.50 ಲಕ್ಷ ಕೋಟಿ ರೂ.  ಸಾಲ ಮಾಡಿರುವ ರಾಜ್ಯ ಸರ್ಕಾರವು ಅಭಿವೃದ್ಧಿಯನ್ನು ಮರೆತಿದೆ ಎಂದು ಕಿಡಿಕಾರಿದರು.

ದುರಾಡಳಿತ, ಭ್ರಷ್ಟಾಚಾರ ಸೇರಿದಂತೆ ಹಲವು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿರುವ ಸಿಎಂ ಸಿದ್ದರಾಮಯ್ಯ ಅವರೂ ಈ ಕೂಡಲೇ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಬೇಕೆಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News