ಡೋಕ್ಲಾಂ ಬಿಕ್ಕಟ್ಟಿಗೆ ಶೀಘ್ರ ಪರಿಹಾರ,ಗಡಿಗಳ ರಕ್ಷಣೆಗೆ ಸೇನೆಯು ಸಮರ್ಥವಾಗಿದೆ: ರಾಜನಾಥ್

Update: 2017-08-21 12:25 GMT

ಹೊಸದಿಲ್ಲಿ,ಆ.21: ಡೋಕ್ಲಾಮ್‌ನಲ್ಲಿ ಸೃಷ್ಟಿಯಾಗಿರುವ ಭಾರತ ಮತ್ತು ಚೀನಾ ನಡುವಿನ ಬಿಕ್ಕಟ್ಟಿಗೆ ಶೀಘ್ರವೇ ಪರಿಹಾರವನ್ನು ಕಂಡುಕೊಳ್ಳಲಾಗುವುದು ಎಂದು ಸೋಮವಾರ ಇಲ್ಲಿ ತಿಳಿಸಿದ ಗೃಹಸಚಿವ ರಾಜನಾಥ್ ಸಿಂಗ್ ಅವರು, ತನ್ನ ಸಾರ್ವಭೌಮತೆಯನ್ನು ರಕ್ಷಿಸಿಕೊಳ್ಳಲು ದೇಶವು ಸರ್ವಸಮರ್ಥವಾಗಿದೆ ಎಂದು ಸ್ಪಷ್ಟಪಡಿಸಿದರು.

 ಭಾರತ-ಚೀನಾ ಗಡಿ ರಕ್ಷಣೆಯ ಹೊಣೆಯನ್ನು ಹೊತ್ತುಕೊಂಡಿರುವ ಐಟಿಬಿಪಿಯ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಅವರು, ಬಿಕ್ಕಟ್ಟನ್ನು ಬಗೆಹರಿಸುವ ನಿಟ್ಟಿನಲ್ಲಿ ಚೀನಾ ಧನಾತ್ಮಕ ಹೆಜ್ಜೆಯನ್ನಿಡಲಿದೆ ಎಂಬ ಆಶಯವನ್ನು ವ್ಯಕ್ತಪಡಿಸಿದರು.

ಭಾರತವೆಂದೂ ಇತರ ದೇಶಗಳ ಬಗ್ಗೆ ಕೆಟ್ಟದೃಷ್ಟಿಯನ್ನು ಹೊಂದಿರಲಿಲ್ಲ, ಯಾವುದೇ ದೇಶದ ಮೇಲೆ ದಾಳಿ ಮಾಡಿಲ್ಲ ಮತ್ತು ಯಾವುದೇ ಸಾಮ್ರಾಜ್ಯ ವಿಸ್ತರಣೆ ನಿಲುವು ಹೊಂದಿಲ್ಲ ಎನ್ನುವುದು ಇಡೀ ವಿಶ್ವಕ್ಕೇ ಗೊತ್ತಿದೆ ಎಂದ ಅವರು, ನಮ್ಮ ಭದ್ರತಾ ಪಡೆಗಳು ಮತ್ತು ರಕ್ಷಣಾ ಪಡೆಗಳು ನಮ್ಮ ಗಡಿಗಳನ್ನು ರಕ್ಷಿಸುವ ಎಲ್ಲ ತಾಕತ್ತು ಹೊಂದಿವೆ ಎಂದು ನಾನು ಹೇಳಬಲ್ಲೆ ಎಂದರು.

ಐಟಿಬಿಪಿಯ ಶೌರ್ಯ ಮತ್ತು ಎದೆಗಾರಿಕೆಯನ್ನು ಪ್ರಶಂಸಿಸಿದ ಅವರು, ಈ ಪಡೆಯ ಪರಾಕ್ರಮದಿಂದಾಗಿಯೇ ಭಾರತದ ಮೇಲೆ ಕೆಟ್ಟ ಕಣ್ಣು ಹಾಕಲು ಯಾರೂ ಧೈರ್ಯ ಮಾಡುತ್ತಿಲ್ಲ ಎಂದರು.

ತನ್ನ ನೆರೆಹೊರೆಯ ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧಗಳನ್ನು ಹೊಂದಿರುವುದನ್ನು ಭಾರತವು ಸದಾ ನಂಬಿಕೊಂಡು ಬಂದಿದೆ ಎಂದ ಅವರು, ಪ್ರಧಾನಿ ನರೇಂದ್ರ ಮೋದಿಯವರು 2014ರಲ್ಲಿ ತನ್ನ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಎಲ್ಲ ನೆರೆ ರಾಷ್ಟ್ರಗಳ ಪ್ರಧಾನಿಗಳನ್ನು ಆಮಂತ್ರಿಸಿದ್ದನ್ನು ನೆನಪಿಸಿಕೊಂಡರು. ಅವರ ಈ ಹೆಜ್ಜೆಯ ಉದ್ದೇಶ ಕೇವಲ ಹಸ್ತಲಾಘವ ಮಾಡುವುದಲ್ಲ, ಹೃದಯಗಳನ್ನು ಪರಸ್ಪರ ಬೆಸೆಯುವು ದಾಗಿತ್ತು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News