ಮಡಿಕೇರಿ: ರಸ್ತೆ ದುರಸ್ತಿಗೆ ಒತ್ತಾಯ

Update: 2017-08-21 12:40 GMT

ಮಡಿಕೇರಿ ಆ.21: ನಾಪೋಕ್ಲುವಿನಿಂದ ಚೆರಿಯಪರಂಬು ಮತ್ತು ಕಲ್ಲುಮೊಟ್ಟೆಗೆ ತೆರಳುವ ರಸ್ತೆಯು ಹೊಂಡ, ಗುಂಡಿಗಳಿಂದ ಕೂಡಿದ್ದು, ಸಂಚಾರಕ್ಕೆ ಅಯೋಗ್ಯವಾಗಿದೆ. ಮುಂದಿನ 15 ದಿನಗಳ ಒಳಗಾಗಿ ರಸ್ತೆ ದುರಸ್ತಿ ಪಡಿಸದಿದ್ದಲ್ಲಿ ‘ರಸ್ತೆ ತಡೆ’ ಪ್ರತಿಭಟನೆ ನಡೆಸಲಾಗುವುದೆಂದು ಚೆರಿಯಪರಂಬು ಮತ್ತು ಕಲ್ಲುಮೊಟ್ಟೆ ನಾಗರಿಕ ಹಿತರಕ್ಷಣಾ ವೇದಿಕೆ ಎಚ್ಚರಿಕೆ ನೀಡಿದೆ.

 ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಪ್ರಧಾನ ಕಾರ್ಯದರ್ಶಿ ಬಷೀರ್ ಆಲಿ, ನಾಪೋಕ್ಲುವಿನಿಂದ ಚೆರಿಯಪರಂಬು ಮತ್ತು ಕಲ್ಲುಮೊಟ್ಟೆಯನ್ನು ಸಂಪರ್ಕಿಸುವ ರಸ್ತೆ ಅಂದಾಜು 3 ಕಿ.ಮೀ.ನಷ್ಟಿದೆ. ಈ ರಸ್ತೆ ಸಂಪರ್ಕ ಹದಗೆಟ್ಟು ವಾಹನ ಸೇರಿದಂತೆ ಜನಸಂಚಾರ ಮಾಡಲು ಸಾಧ್ಯವಾಗದ ದುಸ್ತಿತಿಯಲ್ಲಿದೆ. ಫೀಲ್ಡ್ ಮಾರ್ಷಲ್ ಕಾರ್ಯಪ್ಪನವರ ಹೆಸರನ್ನು ರಸ್ತೆಗೆ ಇರಿಸಿದ್ದು ಬಿಟ್ಟರೆ ಕನಿಷ್ಠ ನಿರ್ವಹಣೆಯತ್ತ ಯಾರು ಗಮನ ಹರಿಸಿಲ್ಲವೆಂದು ವಿಷಾದಿಸಿದರು.

 ವೇದಿಕೆ ಅಧ್ಯಕ್ಷ ಭವಾನಿ ಟಿ.ವಿ. ಮಾತನಾಡಿ, ಹದಗೆಟ್ಟ ರಸ್ತೆಯಿಂದಾಗಿ ಗ್ರಾಮದ ವಯೋವೃದ್ಧರು, ಅನಾರೋಗ್ಯಕ್ಕೆ ಒಳಗಾದವರು ತೆರಳಲು ಸಾಧ್ಯವಾಗದ ಪರಿಸ್ಥಿತಿ ಇದೆ. ಆಟೋ ಸೇರಿದಂತೆ ಯಾವುದೇ ಬಾಡಿಗೆ ವಾಹನಗಳವರು ಬರಲು ಹಿಂದೇಟು ಹಾಕುವ ಸ್ಥಿತಿ ಇದೆ ಎಂದರು.

ವೇದಿಕೆ ಉಪಾಧ್ಯಕ್ಷ ಹಾರೀಸ್ ಕೆ.ಎ. ಮಾತನಾಡಿ, ಕೇವಲ 10 ಮೀಟರ್, 100 ಮೀಟರ್ ರಸ್ತೆ ದುರಸ್ತಿ ಪಡಿಸಿ ಜನರ ಕಣ್ಣೊರೆಸುವ ತಂತ್ರವನ್ನಷ್ಟೆ ಮಾಡಲಾಗಿದ್ದು, ಗ್ರಾಮವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಮುಂದಿನ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸುವ ಬಗ್ಗೆ ಗ್ರಾಮಸ್ಥರು ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು. ಚೆರಿಯಪರಂಬು ಮತ್ತು ಕಲ್ಲುಮೊಟ್ಟೆ ವಿಭಾಗದಲ್ಲಿ ಸಾವಿರಕ್ಕು ಹೆಚ್ಚಿನ ಮತದಾರರಿದ್ದು, ಇವರನ್ನು ಚುನಾವಣೆ ಸಂದರ್ಭ ವಿವಿಧ ಮತಗಟ್ಟೆಗಳಿಗೆ ಹಂಚಿಕೆ ಮಾಡಿ ಬಿಟ್ಟಿರುವುದರಿಂದ ಈ ಭಾಗದ ಜನಪ್ರತಿನಿಧಿ ಯಾರು ಎನ್ನುವುದರಲ್ಲೇ ಗೊಂದಲ ನಿರ್ಮಾಣವಾಗಿದೆ. ಆದ್ದರಿಂದ ಇಲ್ಲಿನ ಮತದಾರರನ್ನು ಒಂದೇ ಮತಗಟ್ಟೆಗೆ ಸೇರಿಸಬೇಕೆಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ವೇದಿಕೆ ಉಪಕಾರ್ಯದರ್ಶಿ  ಝುಬೈರ್ ಪರವಂಡ, ಸದಸ್ಯರಾದ ಪೀರು ಎಂ.ಪಿ. ಹಾಗೂ ನಾಗೇಶ್ ಟಿ.ಎನ್. ಉಪಸ್ಥಿತರಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News