ಸೇವೆಯಲ್ಲಿ ಪ್ರತಿಯೊಬ್ಬರನ್ನೂ ವಿನಮ್ರತೆಯಿಂದ ಕಾಣಬೇಕು: ಸಾಹಿತಿ ಮಹೇಶ್
ಕಡೂರು, ಆ.21: ಕಾಯಕದಲ್ಲಿ ಸ್ವರ್ಗ ಕಾಣಬೇಕಿದೆ. ಯಾವುದೇ ಉದ್ಯೋಗದ ಸೇವೆಯಲ್ಲಿ ಪ್ರತಿಯೊಬ್ಬರನ್ನೂ ವಿನಮ್ರತೆಯಿಂದ ಕಾಣಬೇಕಿದೆ ಎಂದು ಸಾಹಿತಿ ಚಟ್ನಹಳ್ಳಿ ಮಹೇಶ್ ತಿಳಿಸಿದರು.
ಅವರು ಪಟ್ಟಣದ ಶ್ರೀ ಪಾಂಡುರಂಗ ಕಲ್ಯಾಣ ಮಂಟಪದಲ್ಲಿ ಶರತ್ ಕಣ್ಣಿನ ಆಸ್ಪತ್ರೆ ಮತ್ತು ಶರತ್ ಪ್ಯಾರಾಮೆಡಿಕಲ್ ಕಾಲೇಜು ವತಿಯಿಂದ ಏರ್ಪಡಿಸಲಾಗಿದ್ದ ಸ್ವಾಗತ, ಸನ್ಮಾನ ಹಾಗೂ ಬೀಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಸಮಾರಂಭಗಳು ಸಾಂಸ್ಕೃತಿಕ ತಾಣಗಳಾಗಬೇಕು. ಅಲ್ಲದೆ, ಓದಿನ ಶಿಕ್ಷಣಕ್ಕಿಂತ ಜೀವನದ ಶಿಕ್ಷಣ ಹೆಚ್ಚಾಗಿರಬೇಕು. ಇತ್ತೀಚಿನ ದಿನಗಳಲ್ಲಿ ಸಮಾರಂಭಗಳು ಮೋಜಿಗಾಗಿ ಉಲ್ಲಾಸಕ್ಕಾಗಿ ಎಂಬಂತಾಗಿದೆ. ಈ ಸಮಾರಂಭಗಳು ಪರಿವರ್ತನೆಗಾಗಿ ಆಗಬೇಕಿದೆ ಎಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶರತ್ ಪ್ಯಾರಾಮೆಡಿಕಲ್ ಕಾಲೇಜಿನ ಆಡಳಿತಾಧಿಕಾರಿ ಡಿ.ಆರ್. ರಂಗಪ್ಪ ಮಾತನಾಡಿ, ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಬಗ್ಗೆ ಪೋಷಕರಲ್ಲಿ ಜವಾಬ್ದಾರಿ ಮುಖ್ಯವಾಗಿದೆ. ಯಾವುದೇ ಪೋಷಕರು ವಿದ್ಯಾರ್ಥಿಗಳ ಬಗ್ಗೆ ತೆಗೆದುಕೊಳ್ಳುವುದಿಲ್ಲ. ಇದರಿಂದ ವಿದ್ಯಾರ್ಥಿಗಳಲ್ಲಿ ಅನಾಗರೀಕತೆ ಮೂಡಿದೆ. ವಿದ್ಯಾರ್ಥಿಗಳ ನಡವಳಿಕೆ ಮುಖ್ಯವಾಗಿರುತ್ತದೆ. ಅಂತಹ ವಿದ್ಯೆಯನ್ನು ಮೊಬೈಲ್ ಬಳಸುವುದರ ಮೂಲಕ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹಾವೇರಿಯ ರೇಣುಕಾ ಕಣ್ಣಿನ ಆಸ್ಪತ್ರೆಯ ಡಾ.ಡಿ. ಉಮೇಶ್. ಜಿ ಹಿರೇಮಠ್ ಮಾತನಾಡಿದರು. ಶಾಲಾಭಿವೃದ್ಧಿ ಖಜಾಂಚಿ ಎಚ್.ಸಿ.ಶಶಿಕಲಾ, ಪ್ಯಾರಾಮೆಡಿಕಲ್ ಕಾಲೇಜು ಪ್ರಾಂಶುಪಾಲ ಶರತ್ ಆರ್.ಯಜಮಾನ್, ಎಸ್.ವಿ.ವೆಂಕಟೇಶ್, ರಾಜ್ಯಪ್ರಶಸ್ತಿ ವಿಜೇತೆ ಡಿ.ಎನ್.ಕೃಪಾ, ವಿಕ್ರಮ್ ಜೈಹಿಂದ್, ಶ್ರೀಮತಿ ನಾಗಣ್ಣ, ಗುರುರಾಜ್, ಉಪನ್ಯಾಸ ಪ್ರಶಾಂತ್ ಉಪಸ್ಥಿತರಿದ್ದರು.