ಶಿವಮೊಗ್ಗ : ಅ.2ರಿಂದ ಜಿಲ್ಲೆಯಲ್ಲಿ `ಮಾತೃಪೂರ್ಣ’ ಯೋಜನೆ ಜಾರಿ - ಡಾ.ಎಂ.ಲೋಕೇಶ್
ಶಿವಮೊಗ್ಗ , ಆ. 22: ಗರ್ಭಿಣಿಯರಿಗೆ ಹಾಗೂ ಬಾಣಂತಿಯರಿಗೆ ಮಧ್ಯಾಹ್ನ ಪೌಷ್ಟಿಕ ಊಟ ಹಾಗೂ ಕಬ್ಬಿಣಾಂಶದ ಮಾತ್ರೆಯನ್ನು ಒದಗಿಸುವ ರಾಜ್ಯ ಸರ್ಕಾರದ ಮಾತೃಪೂರ್ಣ ಯೋಜನೆ ಜಿಲ್ಲೆಯಲ್ಲಿ ಅಕ್ಟೋಬರ್ 2ರಿಂದ ಜಾರಿಯಾಗಲಿದ್ದು, ಇದಕ್ಕಾಗಿ ಎಲ್ಲಾ ಸಿದ್ಧತೆ ಮಾಡುವಂತೆ ಜಿಲ್ಲಾಧಿಕಾರಿ ಡಾ.ಎಂ.ಲೋಕೇಶ್ ಸೂಚನೆ ನೀಡಿದರು.
ಅವರು ಮಾತೃಪೂರ್ಣ ಯೋಜನೆ ಜಾರಿ ಕುರಿತಾಗಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಮುಖ್ಯಮಂತ್ರಿ ಅವರು 2016ರ ಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲಿ ಘೋಷಿಸಿರುವಂತೆ ಈ ಯೋಜನೆಯನ್ನು ಅನುಷ್ಟಾನಗೊಳಿಸಲಾಗುತ್ತಿದೆ. ಈ ಯೋಜನೆ ಅನ್ವಯ ಗರ್ಭಿಣಿ ಹಾಗೂ ಬಾಣಂತಿಯರಿಗೆ ಅವರ ವಾಸದ ವ್ಯಾಪ್ತಿಯ ಅಂಗನವಾಡಿಗಳಲ್ಲಿ ಮಧ್ಯಾಹ್ನ ಅನ್ನ, ಸಾಂಬಾರ್,ಪಲ್ಯ, ಬೇಯಿಸಿದ ಮೊಟ್ಟೆ, 200 ಮಿ.ಲೀ ಹಾಲು ಹಾಗೂ ಚಿಕ್ಕಿ ನೀಡಲಾಗುವುದು. \
ಮೊಟ್ಟೆ ಸೇವಿಸದವರಿಗೆ ಮೊಳಕೆ ಭರಿಸಿದ ಕಾಳು ನೀಡಲಾಗುವುದು. ಊಟದ ನಂತರ ಕಬ್ಬಿಣಾಂಶದ ಮಾತ್ರೆಯನ್ನು ನೀಡಲಾಗುವುದು ಎಂದು ಅವರು ಹೇಳಿದರು.
ಪ್ರೋತ್ಸಾಹ ಧನ: ಈ ಯೋಜನೆ ಅನುಷ್ಟಾನಗೊಳಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಗೆ ಈಗ ನೀಡುತ್ತಿರುವ ಗೌರವಧನ ಜೊತೆಗೆ ತಿಂಗಳಿಗೆ 500ರೂ. ಹಾಗೂ ಅಂಗನವಾಡಿ ಸಹಾಯಕಿಗೆ ರೂ.250 ಪ್ರೋತ್ಸಾಹ ಧನ ನೀಡಲಾಗುವುದು. ಮಿನಿ ಅಂಗನವಾಡಿ ಕೇಂದ್ರಗಳಲ್ಲಿ ಸೇವೆ ಸಲ್ಲಿಸುವ ಸಹಾಯಕಿಯರಿಗೆ ರೂ.200 ಪ್ರೋತ್ಸಾಹ ಧನ ನೀಡಲಾಗುವುದು ಎಂದರು.
ಈ ಕಾರ್ಯಕ್ರಮದ ಅಡಿ ಪ್ರತಿ ಫಲಾನುಭವಿಗೆ ರೂ. 21ವೆಚ್ಚ ಮಾಡಲಾಗುತ್ತಿದೆ. ಪಾತ್ರೆ ಪಗಡೆ ಇತ್ಯಾದಿಗಳನ್ನು ಖರೀದಿಸಲು ತಾಲೂಕು ಮಟ್ಟದಲ್ಲಿ ಟೆಂಡರ್ ಕರೆಯಲಾಗುವುದು. ಇದಕ್ಕಾಗಿ ಪ್ರತಿ ಅಂಗನವಾಡಿಗೆ ಒಂದು ಬಾರಿಗೆ 7ಸಾವಿರ ರೂ. ಹಾಗೂ ಮಿನಿ ಅಂಗನವಾಡಿಗೆ ರೂ. 5ಸಾವಿರ ರೂ. ನೀಡಲಾಗುವುದು. ಪ್ರಸ್ತುತ ಜಿಲ್ಲೆಯಲ್ಲಿ 12403 ಗರ್ಭಿಣಿಯರು ಹಾಗೂ 12916 ಬಾಣಂತಿಯರು ಸೇರಿದಂತೆ 25319 ಫಲಾನುಭವಿಗಳನ್ನು ಗುರುತಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.
ಅಂಗನವಾಡಿ ಕೇಂದ್ರಕ್ಕೆ ಬರಬೇಕು: ಅಂಗನವಾಡಿಗಳು ದೂರ ಇರುವ ಕಡೆಗಳ್ಲಲಿ ತುಂಬು ಗರ್ಭಿಣಿಯರು ಹಾಗೂ ಹಸಿ ಬಾಣಂತಿಯರು ಅಂಗನವಾಡಿ ಕೇಂದ್ರಗಳಿಗೆ ಬಂದು ಆಹಾರ ಸೇವಿಸುವುದು ಕಷ್ಟವಾಗಬಹುದು ಎಂದು ಕೆಲವು ತಾಲೂಕು ಅಧಿಕಾರಿಗಳು ಸಭೆಯ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಅರ್ಹ ಫಲಾನುಭವಿಗಳು ಆಹಾರ ಸೇವಿಸುವುದನ್ನು ಖಾತ್ರಿಪಡಿಸಲು ಈ ಯೋಜನೆ ಅಡಿ ಫಲಾನುಭವಿಗಳು ಅಂಗನವಾಡಿ ಕೇಂದ್ರಕ್ಕೆ ಬಂದು ಆಹಾರ ಸೇವಿಸಬೇಕಾಗಿದೆ ಎಂದು ಸ್ಪಷ್ಟಪಡಿಸಿದರು.
ತಾಯಿ ಮತ್ತು ಮಗುವಿನ ಆರೋಗ್ಯವನ್ನು ಕಾಪಾಡುವ ಅತಿ ಮಹತ್ವದ ಕಾರ್ಯಕ್ರಮ ಇದಾಗಿದೆ. ರಕ್ತಹೀನತೆಯಿಂದ ಬಳಲುವ ಗರ್ಭಿಣಿಯರು ಮತ್ತು ಇದರಿಂದ ತೊಂದರೆಗೀಡಾಗುವ ಗರ್ಭಸ್ಥ ಮತ್ತು ನವಜಾತ ಶಿಶುವಿನ ಆರೋಗ್ಯ ಇದರಿಂದ ಸುಧಾರಿಸಲು ಸಾಧ್ಯವಿದೆ. ಗರ್ಭಿಣಿ ಹಾಗೂ ಹಾಲುಣಿಸುವ ತಾಯಂದಿರಿಗೆ ಒಂದು ದಿನಕ್ಕೆ ಬೇಕಾಗಿರುವ ಪ್ರೊಟೀನ್ ಮತ್ತು ಕ್ಯಾಲ್ಸಿಯಂ ಮತ್ತು ಕ್ಯಾಲರಿ ಅಂಶಗಳಲ್ಲಿ ಸುಮಾರು ಶೇ. 40ರಿಂದ 45ಅಂಶಗಳಷ್ಟು ಈ ಒಂದು ಪೂರ್ಣ ಪೌಷ್ಟಿಕ ಊಟದಿಂದ ಒದಗಿಸಿದಂತಾಗುತ್ತದೆ. ದಕ್ಷಿಣ ಭಾರತದ ಇತರ ರಾಜ್ಯಗಳಿಗೆ ಹೋಲಿಸಿದರೆ ತಾಯಿ ಮತ್ತು ಮಕ್ಕಳ ಆರೋಗ್ಯಕ್ಕೆ ಸಂಬಂಧಿಸಿದಂತೆ ರಾಜ್ಯದ ಆರೋಗ್ಯ ಸೂಚ್ಯಾಂಕ ಕಡಿಮೆಯಿದೆ. ಮಾತೃಪೂರ್ಣ ಯೋಜನೆಯ ಸಮರ್ಪಕ ಅನುಷ್ಟಾನದಿಂದ ಇದರಲ್ಲಿ ಪ್ರಗತಿ ಸಾಧ್ಯ ಎಂದರು.
ರಕ್ತ ಹೀನತೆ ಪ್ರಕರಣಗಳು ಹೆಚ್ಚು: ಹೆರಿಗೆ ಸಂದರ್ಭದಲ್ಲಿ ಸಂಭವಿಸುವ ಬಹುತೇಕ ತಾಯಿ ಮರಣಗಳು ರಕ್ತ ಹೀನತೆಯಿಂದ ಸಂಭವಿಸಿರುತ್ತವೆ. ಜಿಲ್ಲೆಯಲ್ಲಿ ಪ್ರಸ್ತುತ
395ಗರ್ಭಿಣಿಯರಲ್ಲಿ ಹಿಮೊಗ್ಲೋಬಿನ್ ಅಂಶ 7ಕ್ಕಿಂತಲೂ ಕಡಿಮೆಯಿದೆ. ಪೌಷ್ಟಿಕಾಂಶಯುತ ಆಹಾರ ಹಾಗೂ ಕಬ್ಬಿಣಾಂಶದ ಮಾತ್ರೆ ಸೇವನೆಯಿಂದ ಇದನ್ನು ಸರಿಪಡಿಸಬಹುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ್ ಸುರಗಿಹಳ್ಳಿ ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಕೇಶ್ ಕುಮಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಶೇಷಪ್ಪ ಮತ್ತಿತರ ಅಧಿಕಾರಿಗಳುಉಪಸ್ಥಿತರಿದ್ದರು.