ಸಶಕ್ತ ಗ್ರಾಪಂ ಮಾತ್ರ ಎಲ್ಲರನ್ನು ಅಭಿವೃದ್ಧಿ ಪಡಿಸಲು ಸಾಧ್ಯ- ಮಣಿಶಂಕರ್ ಅಯ್ಯರ್

Update: 2017-08-22 13:25 GMT

 ತುಮಕೂರು, ಆ.22: ಗ್ರಾಮಪಂಚಾಯತ್ ಗಳಿಗೆ ಹೆಚ್ಚಿನ ಅನುದಾನ ನೀಡಿ ಅವುಗಳನ್ನು ಸಶಕ್ತಗೊಳಿಸಿದಾಗ ಮಾತ್ರ. ಎಲ್ಲರ ಜನರನ್ನು ಅಭಿವೃದ್ದಿಯ ತೆಕ್ಕೆಯಲ್ಲಿ ತರಲು ಸಾಧ್ಯ ಎಂದು ಕೇಂದ್ರದ ಮಾಜಿ ಗ್ರಾಮೀಣಾಭಿವೃದ್ಧಿ ಸಚಿವ ಮಣಿಶಂಕರ್ ಅಯ್ಯರ್ ತಿಳಿಸಿದ್ದಾರೆ.

ಸಿದ್ದಗಂಗಾ ಮಠದ ನೂತನ ಪ್ರಾರ್ಥನಾ ಮಂದಿರದಲ್ಲಿ ಆಯೋಜಿಸಿದ್ದ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ-1993ರ ರಜತ ವರ್ಷಾಚರಣೆ ಮತ್ತು ಪಂಚಾಯತ್ ರಾಜ್ ಜಿಲ್ಲಾ ಸಮಾವೇಶದಲ್ಲಿ ಪ್ರಧಾನ ಭಾಷಣ ಮಾಡಿದ ಅವರು, ತಳ ಸಮದಾಯಗಳಿಗೆ, ಮಹಿಳೆಯರಿಗೆ ರಾಜಕೀಯ ಅಧಿಕಾರ ಸಿಗಬೇಕೆಂಬ ಸೋಷಿಯಲ್ ಇಂಜಿನಿಯರಿಂಗ್ ಅಸ್ಥಿತ್ವದಲ್ಲಿರುವುದೇ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ. ಇದು ಮತ್ತಷ್ಟು ಬಲಿಷ್ಠವಾಗಿ ಕಾರ್ಯನಿರ್ವಹಿಸಬೇಕಾದರೆ ಅನುದಾನದ ಹೆಚ್ಚಳವಾಗಬೇಕು. ಈ ನಿಟ್ಟಿನಲ್ಲಿ 15ನೇ ಹಣಕಾಸು ಯೋಜನೆಯಲ್ಲಿ ಈಗಿರುವ ಶೇ4ರಷ್ಟು ಅನುದಾನವನ್ನು ಶೇ8ಕ್ಕೆ ಹೆಚ್ಚಿಸುವುದು ಸೂಕ್ತ ಎಂದು ಹೇಳಿದರು.

ಪಂಚಾಯತ್ ರಾಜ್‍ನ ಸಂಶೋಧನಾ ಕೇಂದ್ರವಾಗಿರುವ ಕರ್ನಾಟಕದಿಂದ ಒಂದು ಒಳ್ಳೆಯ ಪ್ರಸ್ತಾವನೆ ಬಂದಲ್ಲಿ ಹೆಚ್ಚಿನ ಅನುಕೂಲ ವಾಗಲಿದೆ. ಪಂಚಾಯತ್ ರಾಜ್ ವ್ಯವಸ್ಥೆಗೆ ಕರ್ನಾಟಕದಲ್ಲಿ ಪಕ್ಷಾತೀತ ಬೆಂಬಲ ವ್ಯಕ್ತವಾಗಿರುವುದು ನಿಜಕ್ಕೂ ಸಂತೋಷದ ವಿಚಾರ. ಪಂಚಾಯತ್ ರಾಜ್ ತಿದ್ದುಪಡಿ ಮಸೂದೆಗೆ ವಿರೋಧಪಕ್ಷಗಳು ಯಾವುದೇ ಪ್ರತಿರೋಧ ತೋರದೆ ಒಪ್ಪಿಗೆ ಸೂಚಿಸಿರುವುದನ್ನು ನೋಡಿದರೆ,ಈ ಕಾಯ್ದೆಯ ಮೇಲೆ ಜನಪ್ರತಿನಿಧಿಗಳು ಹೊಂದಿರುವ ವಿಶ್ವಾಸ ಅರ್ಥವಾಗುತ್ತದೆ ಎಂದ ಅವರು, ಹೊಸ ಕಾಯ್ದೆಯ ಮೂಲಕ ಈ ಹಿಂದಿನ 25 ವರ್ಷಗಳಲ್ಲಿ ಪಂಚಾಯತ್ ರಾಜ್ ಕಾನೂನಿನ ಸಮರ್ಪಕ ಜಾರಿಗೆ ಇದ್ದ ಅಡೆ-ತಡೆಗಳನ್ನು ಸಂಪೂರ್ಣವಾಗಿ ನಿವಾರಿಸಿ, ಇರುವ ಕಾನೂನುನನ್ನು ಮತ್ತಷ್ಟು ಸಶಕ್ತಗೊಳಿಸಲು ಹಲವಾರು ಸುತ್ತೊಲೆಗಳನ್ನು ಸೇರಿಸಿ, ಸಾಮಾನ್ಯ ಜನರಿಗೆ ಹೆಚ್ಚಿನ ಅನುಕೂಲ ದೊರೆಯಬೇಕೆಂಬ ಮಹತ್ತರ ಉದ್ದೇಶ ಹೊಂದಿದೆ ಎಂದರು.

ಹೊಸ ಕಾಯ್ದೆ ಪ್ರಕಾರ ಗ್ರಾಮ ಸಭೆಗಳಿಗೆ ಎಲ್ಲಾ ರೀತಿಯ ಶಕ್ತಿ ತುಂಬಲಾಗಿದೆ.ಎಲ್ಲಾ ಇಲಾಖೆಗಳು ಗ್ರಾಮಸಭೆಗಳಿಗೆ ಉತ್ತರದಾಯಿತ್ವ ಹೊಂದಿರಬೇಕು.ಕೆಲವು ಇಲಾಖೆಗಳು ನೇರವಾಗಿ ಹಣವನ್ನು ಖರ್ಚು ಮಾಡುತ್ತಿವೆ. ತಾವು ಎಷ್ಟು ಹಣವನ್ನು ಗ್ರಾಮ್ಭಿಣಾಭಿವೃದ್ದಿಗೆ ಖರ್ಚು ಮಾಡುತಿದ್ದೇವೆ ಎಂಬುದನ್ನು ಗ್ರಾಮಸಭೆಗೆ ಮಾಹಿತಿ ನೀಡಬೇಕು. ಪ್ರತಿ ಇಲಾಖೆಯ ಖರ್ಚು ವೆಚ್ಚಗಳು ಸಾಮಾಜಿಕ ಲೆಕ್ಕಪತ್ರದ ಅಡಿಯಲ್ಲಿ ಬರಬೇಕು. ಆಗ ಮಾತ್ರ ನಿಜವಾದ ಅಭಿವೃದ್ದಿಯ ಹೆಜ್ಜೆಯನ್ನು ಗುರುತಿಸಲು ಸಾಧ್ಯ ಎಂದು ಮಣಿಶಂಕರ್ ಅಯ್ಯರ್ ತಿಳಿಸಿದರು.

ಪಂಚಾಯತ್ ರಾಜ್ ಪರಿಕಲ್ಪನೆ ಮಾಜಿ ಪ್ರಧಾನಿ ರಾಜೀವ್‍ಗಾಂಧಿ ಅವರ ಕೈ ಸೇರುವ ಮೊದಲು ಇಡೀ ದೇಶದ ಜನರನ್ನು ಪ್ರತಿನಿಧಿಸುತ್ತಿದ್ದವರು ಕೇವಲ 554 ಜನ ಸಂಸದರು, 5000 ಜನ ಶಾಸಕರು ಮಾತ್ರ. ಕೆಲಸ ಸಮುದಾಯಗಳಿಗೆ ರಾಜಕೀಯ ದ್ವನಿಯೇ ಇರಲಿಲ್ಲ. ಇವರಲ್ಲಿ ಶೇ. 50ರಷ್ಟು ಮಹಿಳೆಯರು ಎಂಬುದು ಗಮನಾರ್ಹ ಸಂಗತಿ. ಇವರಲ್ಲಿ 1 ಲಕ್ಷಕ್ಕೂ ಅಧಿಕ ಮಂದಿ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದವರು ಎಂಬುದು ಮತ್ತೊಂದು ಅಚ್ಚರಿ, ಇದೇ ನಿಜವಾದ ಅಭಿವೃದ್ಧಿಯ ಒಳಗೊಳ್ಳುವಿಕೆ.ಇ ದನ್ನು ಸಕಾರಗೊಳಿಸಿದ ಮಾಜಿ ಪ್ರದಾನಿ ದಿವಂಗತ ರಾಜೀವ್‍ಗಾಂಧಿ ನಿಜಕ್ಕೂ ಪಂಚಾಯತ್ ರಾಜ್ ಇಚಿಜಿನಿಯರ್ ಎಂದು ಮಣಿಶಂಕರ್ ಆಯ್ಯರ್ ಬಣ್ಣಿಸಿದರು.

ಯಾವುದೇ ಕಾನೂನನ್ನು ರೂಪಿಸುವುದು ಸುಲಭ.ಆದರೆ ಅದರ ಅನುಷ್ಠಾನವೇ ನಿಜವಾದ ಸವಾಲು. ಗ್ರಾ.ಪಂ, ತಾ.ಪಂ, ಮತ್ತು ಜಿ.ಪಂ.ಗಳಿಗೆ ಅವರುಗಳ ಜವಾಬ್ದಾರಿಗಳೇನು, ಯಾವ ರೀತಿಯ ಚಟುವಟಿಕೆಯಲ್ಲಿ ತೊಡಗಬೇಕು ಎಂಬ ಯೋಜನಾ ನೀಲಿ ನಕ್ಷೆ ತಯಾರಿಸಿ ಅದರ ಪ್ರಕಾರ ಕಾರ್ಯನಿರ್ವಹಿಸಿದರೆ ಹೆಚ್ಚಿನ ಅನುಕೂಲವಾಗಲಿದೆ ಎಂದು ನಿಟ್ಟಿನಲ್ಲಿ ನಿವೃತ್ತ ಹಿರಿಯ ಐಎಎಸ್ ಅಧಿಕಾರಿ ರಘುನಂದನ್ ಕೆಲಸ ಮಾಡಿದ್ದು, ಇವರ ಸಹಕಾರ ಪಡೆಯುವಂತೆ ಸಲಹೆ ನೀಡಿದರು.

ಕಾರ್ಯಕ್ರಮವನ್ನು ಪಂಚಾಯತ್ ರಾಜ್ ಸಚಿವ ಹೆಚ್.ಕೆ.ಪಾಟೀಲ್ ಉದ್ಘಾಟಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ,ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಲತಾ ರವಿಕುಮಾರ್, ಉಪಾಧ್ಯಕ್ಷೆ ಶಾರದ ನರಸಿಂಹಮೂರ್ತಿ, ಶಾಸಕರಾದ ಪಿ.ಆರ್.ಸುಧಾಕರಲಾಲ್, ಎಂ.ಡಿ.ಲಕ್ಷ್ಮಿನಾರಾಯಣ,ಕಾಂತರಾಜು,ತಾ.ಪಂ.ಅಧ್ಯಕ್ಷ ಗಂಗಾಂಜನೇಯ,ಜಿಪಂ ಸದಸ್ಯ ನರಸಿಂಹ ಮೂರ್ತಿ, ಶಾಂತಲ ರಾಜಣ್ಣ,ಸಿಇಒ ಕೆ.ಜಿ.ಶಾಂತರಾಮು ಮತ್ತಿತರರು ವೇದಿಕೆಯಲ್ಲಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News