ಸಂಗೀತ ಕಲಾವಿದ ದಿ. ಸತ್ಯನಾರಾಯಣ ನಾಯ್ಕ ಅವರ ಶೃದ್ಧಾಂಜಲಿ ಕಾರ್ಯಕ್ರಮ

Update: 2017-08-22 19:00 GMT

ಹೊನ್ನಾವರ,ಆ.22: ಇತ್ತೀಚೆಗೆ ನಿಧನರಾದ ಖ್ಯಾತ ಸಂಗೀತ ಕಲಾವಿದ ಸತ್ಯನಾರಾಯಣ ನಾಯ್ಕ ಗುಂಡಿಬೈಲ್ ಅವರಿಗೆ ನುಡಿನಮನ ಹಾಗೂ ಸ್ವರನಮನ ಕಾರ್ಯಕ್ರಮ ಗುಂಡಿಬೈಲದ ಶ್ರೀ ಗಣೇಶೋತ್ಸವ ಸಭಾಭವನದಲ್ಲಿ  ನಡೆಯಿತು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅರವಿಂದ ಕರ್ಕಿಕೋಡಿ ಮಾತನಾಡಿ, ಅದ್ಬುತ ಪ್ರತಿಭೆ ಇಂದು ಮರೆಯಾಗಿ ಹೋಗಿದೆ. ಸಂಗೀತದಲ್ಲಿ ಸಾಧನೆ ಮಾಡಿದ ಅವರು ಕಲೆಯನ್ನು ಹಣಕ್ಕಾಗಿ ಎಂದಿಗೂ ರಾಜಿ ಮಾಡಿಕೊಂಡವರಲ್ಲ. ಕಾರ್ಯಕ್ರಮಗಳ ವಿಚಾರದಲ್ಲಿ ಅವರು ಬದ್ದತೆಯನ್ನು ಹೊಂದಿದ್ದರು. ಇಂಥ ಕಲಾವಿದರನ್ನು ಎಂದಿಗೂ ನೆನಪಿನಲ್ಲಿಟ್ಟುಕೊಳ್ಳಬೇಕು. ಈ ಕಲಾವಿದನ ಕುಟುಂಬಕ್ಕೆ ಬೆಂಬಲವನ್ನು ನೀಡೋಣ ಎಂದರು.

ಹಿರಿಯ ಸಾಹಿತಿ ಡಾ. ಶ್ರೀಪಾದ ಶೆಟ್ಟಿ ಮಾತನಾಡಿ ಸತ್ಯ ಸಾಯುವುದಿಲ್ಲ. ಸತ್ಯ ನಾರಾಯಣ ಅವರ ಸ್ವರ ಮಾಧುರ್ಯ ಇಲ್ಲಿನ ಮನೆಮನಗಳಲ್ಲಿ, ಗಿಡಮರ, ಗಾಳಿಯಲ್ಲಿ ಲೀನವಾಗಿದೆ. ಭಕ್ತಿಯೆಂಬ ನಾದಕ್ಕೆ ತನ್ನನ್ನು ಒಡ್ಡಿಕೊಳ್ಳುತ್ತ ಎತ್ತರಕ್ಕೆ ಬೆಳೆಯುತ್ತಿದ್ದವರು. ಅವರು ಇನ್ನೂ ಹೆಚ್ಚಿನ ಗೌರವಾದರಗಳು ಸಿಗಬೇಕಿತ್ತು. ಆದರೆ ವಿಧಿ ಅವರನ್ನು ಕರೆದೊಯ್ದಿದೆ. ಅವರ ಒಡನಾಡಿ ಸಂಗೀತ ಕಲಾವಿದರು ಸತ್ಯ ಅವರ ನೆನಪನ್ನು ಗಾನಲೋಕದಲ್ಲಿ ಹಸಿರಾಗಿರುವಂತೆ ಕಾಯ್ದುಕೊಳ್ಳಿರಿ ಎಂದರು. 

ಸಂಗೀತ ಪ್ರೇಮಿ ವಿನೋದ ಮಹಾಲೆ ಮಂಕಿ, ಚಂದ್ರಹಾಸ ನಾಯ್ಕ ಹುಡಗೋಡ, ಶಂಕರ ನಾಯ್ಕ, ಸುಧಾ ಭಂಡಾರಿ ನುಡಿನಮನ ಸಲ್ಲಿಸಿದರು. ನಾಗರಾಜ ಅಪಗಾಲ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಸುಧೀಶ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.

ಸ್ವರನಮನ ಕಾರ್ಯಕ್ರಮದಲ್ಲಿ ಸಂಗೀತ ಕಲಾವಿದರಾದ ವಿನೋದ ಮಹಾಲೆ, ಸಂಗೀತಾ ನಾಯ್ಕ, ಮಾಧವ ಪ್ರಭು, ನಾಗರಾಜ ಭಟ್, ಮಾರುತಿ ಗುಂಡಬಾಳ, ಜಗದೀಶ ಹೆಗಡೆ, ವಿ.ಆರ್.ಭಟ್, ಗುರುರಾಜ ಹೆಗಡೆ ಹಾಗೂ ಸತ್ಯನಾರಾಯಣ ನಾಯ್ಕ ಅವರ ಶಿಷ್ಯರು ಸಂಗೀತ ಪ್ರಸ್ತುತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News